ಜಿಲ್ಲೆ

20ರಂದು ಬ್ರಹ್ಮಶ್ರೀ ನಾರಾಯಣಗುರು ಜಯಂತಿ: ಬಿಲ್ಲವ ಸಂಘ ಪೆರ್ಲ ಘಟಕ ಆಯೋಜನೆ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಬಿಲ್ಲವ ಸಂಘ ಪೆರ್ಲ ಘಟಕ ವತಿಯಿಂದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಉತ್ಸವ ಆ.20ರಂದು ಪೆರ್ಲದಲ್ಲಿ ಜರುಗಲಿದೆ. ಕಾರ್ಯಕ್ರಮದ ಯಶಸ್ವಿಗಾಗಿ ಬಿಲ್ಲವ ಸಂಘದ ಸಭೆ ಪೆರ್ಲದ ಪಡ್ರೆ ಸಭಾ ಭವನದಲ್ಲಿ ಜರುಗಿತು. ಸಂಘದ ಅಧ್ಯಕ್ಷ ಶ್ರೀ ಬಿ.ಪಿ.ಶೇಣಿ ಅಧ್ಯಕ್ಷತೆ ವಹಿಸಿದ್ದರು.

ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಸಮಾರಂಭದಲ್ಲಿ ಸಭಾ ಕಾರ್ಯಕ್ರಮ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಕ್ರೀಡೆ ಹಾಗೂ ಇನ್ನಿತರ ರಂಗಗಳಲ್ಲಿ ಸಾಧನೆ ಮಾಡಿದವರನ್ನು ಗೌರವಿಸುವುದು, ನಾಟಿವೈದ್ಯೆ ಪೊಲ್ಲಪ್ಪೆ ಖಂಡಿಗೆ ಹಾಗೂ ಸ್ವಉದ್ಯೋಗದಲ್ಲಿ ಯಶಸ್ಸು ಸಾಧಿಸಿರುವ ಯಶೋದಾ ಕಾನ ಅವರಿಗೆ ಸನ್ಮಾನ, ಬಿಲ್ಲವ ಮಹಿಳಾ ಸಮಿತಿಯಿಂದ ಭಜನೆ ಮೊದಲಾದ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಯಿತು.

ಬಿಲ್ಲವ ಸಂಘಕ್ಕೆ ಕಾರ್ಯಾಲಯ ನಿರ್ಮಿಸಲು ಜಾಗ ಖರೀದಿ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಇದಕ್ಕಾಗಿ ದೇಣಿಗೆ ನೀಡಲು ಶಕ್ತರಾದ ಸದಸ್ಯರಿಂದ ಹತ್ತು ಸಾವಿರ ರೂ.ನಂತೆ ಸಂಗ್ರಹಿಸಲು ತೀರ್ಮಾನಿಸಲಾಯಿತು. ಸಭೆಯಲ್ಲಿ ದೇಣಿಗೆ ನೀಡುವ ಬಗ್ಗೆ ಭರವಸೆ ನೀಡಿದರು. ಜಾಗ ಖರೀದಿ ಪ್ರಕ್ರಿಯೆಗಾಗಿ 7 ಮಂದಿಯನ್ನೊಳಗೊಂಡ ಸಮಿತಿ ರಚಿಸಲಾಯಿತು.

ಹಿರಿಯ ಸದಸ್ಯ ಸುನೀತ್ ಕುಮಾರ್ ಡಿ., ಡಾ.ಕೃಷ್ಣ ಮೋಹನ, ರಾಮಕುಮಾರ್ ಮುಂಡಿತಡ್ಕ, ರಾಜಪ್ಪ, ನಾರಾಯಣ ಮಾಸ್ಟರ್ ಕುದ್ವ, ನಾರಾಯಣ ಪೂಜಾರಿ ಶೇಣಿ, ಎಂ.ಆರ್.ಮಣಿ, ಸದಾನಂದ ಭೈರಡ್ಕ, ಪ್ರವೀಣ್ ಕುಮಾರ್ ಅರೆಮಂಗಿಲ, ಸಂಕಪ್ಪ ಪೂಜಾರಿ ಬಾಡೂರ್, ಹರ್ಷ ನಲ್ಕ, ಮಹಿಳಾ ಸಂಘದ ಅಧ್ಯಕ್ಷೆ ರುಕ್ಮಿಣಿ ಬೆದ್ರಂಪಳ್ಳ, ಪುಷ್ಪವತಿ ಅರೆಮಂಗಿಲ, ಮಮತಾ ನಡುಬೈಲು, ಕುಸುಮ ನಡುಬೈಲು, ಹರ್ಷಿಣಿ ಬಿ., ಅರುಣಾಕ್ಷಿ, ಹರಿಣಾಕ್ಷಿ ಮಣಿಯಂಪಾರೆ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಅಖಿಲೇಶ್ ಕಾನ ಸ್ವಾಗತಿಸಿದರು. ಕೋಶಧಿಕಾರಿ ಪದ್ಮನಾಭ ಸುವರ್ಣ ವಂದಿಸಿದರು.