ಬೆಂಗಳೂರು: ಇತ್ತೀಚೆಗೆ ಜಲಮಂಡಳಿಯ ನಿರ್ಲಕ್ಷ್ಯಕ್ಕೆ ಬೈಕ್ ಸವಾರ ಬಿದ್ದು ಗಾಯಗೊಂಡಿದ್ದು, ಇದೀಗ ಬಿಬಿಎಂಪಿಯ ಬೇಜವಾಬ್ದಾರಿ ವರ್ತನೆಗೆ 9 ವರ್ಷದ ಬಾಲಕ ಬಲಿಯಾಗಿದ್ದಾನೆ.
ಬೆಂಗಳೂರು ಟಿ.ದಾಸರಹಳ್ಳಿಯ ಮಲ್ಲಸಂದ್ರದ 13ನೇ ವಾರ್ಡ್‌ನ ಕೆಂಪೇಗೌಡ ಪಾರ್ಕ್‌ನಲ್ಲಿ ಈ ದುರಂತ ಸಂಭವಿಸಿದೆ. ಪರಿಣಾಮವಾಗಿ ಪ್ರತಾಪ್ (9) ಎಂಬ ಬಾಲಕ ಸಾವಿಗೀಡಾಗಿದ್ದಾನೆ.
ಪ್ರತಾಪ್ ಗಾರ್ಮೆಂಟ್ಸ್ ನೌಕರ ರುದ್ರಮುನಿ ಹಾಗೂ ಕಾಂತಮಣಿ ದಂಪತಿಯ ಪುತ್ರ. ಉದ್ಯಾನಕ್ಕೆ ಆಟವಾಡಲು ಹೋದಾಗ ಬಾಲಕ ಈ ಹೊಂಡಕ್ಕೆ ಬಲಿಯಾಗಿದ್ದಾನೆ.
ಅತಿಯಾದ ಮಳೆಯಿಂದಾಗಿ ಪಾರ್ಕ್‌ನ ತಗ್ಗು ಪ್ರದೇಶದಲ್ಲಿದ್ದ ಈ ಹೊಂಡದಲ್ಲಿ ನೀರು ತುಂಬಿತ್ತು. ಪಾರ್ಕ್ ನಿರ್ವಹಣೆ ಮಾಡಲು ಹಾಗೂ ಭದ್ರತಾ ಸಿಬ್ಬಂದಿ ಇಲ್ಲದಿರುವುದೇ ಅವಘಡಕ್ಕೆ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರ ತೀವ್ರ ವಿರೋಧದ ನಡುವೆ ಸಂಸದ ಸದಾನಂದ ಗೌಡ ಅವರು ಈ ಪಾರ್ಕ್ ಉದ್ಘಾಟನೆ ಮಾಡಿದ್ದರು ಎನ್ನಲಾಗಿದೆ. ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಜರುಗಿದೆ.