ಜಿಲ್ಲೆ

ಮೆಡಿಕಲ್​​ ಕಾಲೇಜಿಗಾಗಿ ಚಳುವಳಿ: 'ಬೂಟ್ ಪಾಲಿಶ್' ಮಾಡಿ ಸಾಥ್​ ನೀಡಿದ ಸ್ಯಾಂಡಲ್​​ವುಡ್ ನಟಿ

ಬಾಗಲಕೋಟೆ: ಬಾಗಲಕೋಟೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಕ್ಕೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ(ಕರವೇ) ಇಂದು ಬೃಹತ್ ಬೂಟ್ ಪಾಲಿಶ್ ಚಳುವಳಿಗೆ ಚಾಲನೆ ನೀಡಿತು. ಕರವೇ ರಾಜ್ಯ ಮಹಿಳಾ ಉಪಾಧ್ಯಕ್ಷೆ ನಟಿ ಅಶ್ವಿನಿ ಗೌಡ ನೇತೃತ್ವದಲ್ಲಿ ರಸ್ತೆಯಲ್ಲಿ ಮೆರವಣಿಗೆ ಹೊರಟ ನೂರಾರು ಕಾರ್ಯಕರ್ತರು, ದಾರಿಯುದ್ದಕ್ಕೂ ಅಂಗಡಿ ಮಾಲೀಕರ, ಪಾದಚಾರಿಗಳ ಬೂಟ್ ಪಾಲಿಶ್ ಮಾಡಿ ಹಣ ಸಂಗ್ರಹಿಸಿದರು.

ಜಿಲ್ಲಾಧ್ಯಕ್ಷ ರಮೇಶ್ ಬದ್ನೂರು ಮತ್ತು ಇತರ ಕರವೇ ಕಾರ್ಯಕರ್ತರು ಬಾಗಲಕೋಟೆಯ ರೈಲ್ವೆ ನಿಲ್ದಾಣದಿಂದ ಬಸವೇಶ್ವರ ಸರ್ಕಲ್​​ವರೆಗೂ ಮೆರವಣಿಗೆ ಹೋಗಿ ಜನರ ಚಪ್ಪಲಿ ಮತ್ತು ಬೂಟ್​ಗಳಿಗೆ ಪಾಲಿಶ್​ ಮಾಡಿದರು. ದೇಣಿಗೆ ಪೆಟ್ಟಿಗೆ ಹಿಡಿದು ಮೆಡಿಕಲ್​ ಕಾಲೇಜು ನಿರ್ಮಾಣಕ್ಕೆ ಧನಸಹಾಯ ಕೋರಿದರು.

2014ರಲ್ಲಿ ಸರ್ಕಾರಿ ಬಜೆಟ್​​ನಲ್ಲಿ ಘೋಷಣೆ ಆಗಿದ್ದ ಬಾಗಲಕೋಟೆ ಮೆಡಿಕಲ್ ಕಾಲೇಜು ಈವರೆಗೂ ಅನುದಾನ ಸಿಗದೇ ಆರಂಭವಾಗಿಲ್ಲ. ಒಂದು ತಿಂಗಳಿಂದ ಈ ಬಗ್ಗೆ ಚಳುವಳಿ ನಡೆದಿದ್ದು, ಸರ್ಕಾರವನ್ನು ಎಚ್ಚರಿಸಲು ಬೂಟ್ ಪಾಲಿಶ್ ಚಳುವಳಿ ನಡೆಸುತ್ತಿರುವುದಾಗಿ ಕರವೇ ತಿಳಿಸಿದೆ. ಬೆಳಗಾವಿ ಅಧಿವೇಶನದ ವೇಳೆ ಮೊದಲ ದಿನದಿಂದ ಮುಕ್ತಾಯದವರೆಗೂ ಸುವರ್ಣಸೌಧದ ಎದುರು ಈ ಬೂಟ್ ಪಾಲೀಶ್ ಚಳುವಳಿ ನಡೆಯಲಿದೆ.