ಜಿಲ್ಲೆ

ಕನ್ನಡ ಮಾಧ್ಯಮ ಕೀಳರಿಮೆ ಸಲ್ಲ : ವಿನೀತ್ ಅಭಿಮತ

ಸೌಮ್ಯ ಆರ್

ಮೂಡುಬಿದಿರೆ: ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ತಾವು ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿರುವುದೆಂಬ ಕೀಳರಿಮೆಯ ಭಾವನೆ ಬೇಡ ಎಂದು ಮೌಂಟ್ ರೋಜರಿ ಆಸ್ಪತ್ರೆಯ ಎಚ್.ಆರ್ ವಿನೀತ್ ಹೇಳಿದರು.

ಕಲ್ಲಮುಂಡ್ಕೂರು ಸರ್ವೋದಯ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಪುಸ್ತಕ, ಸಮವಸ್ತ್ರ ವಿತರಣೆ ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹೆಲ್ಪಿಂಗ್ ಫ್ರೆಂಡ್ಸ್ ಇಸ್ರೇಲ್ ತಂಡದ ಸುನೀಲ್ ಮೆಂಡೋನ್ಸಾ ಮಾತನಾಡಿ, ವಿದ್ಯಾರ್ಥಿಗಳು ಕಲಿತ ಶಾಲೆಯನ್ನು, ಶಿಕ್ಷಣ ನೀಡಿದ ಶಿಕ್ಷಕರನ್ನು ಮರೆಯದಿರಿ. ನೀವು ಶಿಕ್ಷಣ ಪಡೆದು ಉನ್ನತ ಸ್ಥಾನಕ್ಕೆ ಹೋದಾಗ ನಿಮ್ಮಿಂದಾದ ಸಹಾಯ ನೀವು ಕಲಿತ ಶಾಲೆಗೆ ಮಾಡಿ ಎಂದರು.

ಶಾಲಾ ಸಂಚಾಲಕ ಜಯಪ್ರಕಾಶ್ ಪಡಿವಾಳ್ ಅಧ್ಯಕ್ಷತೆ ವಹಿಸಿದರು. ಗ್ರಾಪಂ ಸದಸ್ಯೆ ಲೀಲಾ, ಕಲ್ಲಮುಂಡ್ಕೂರು ಸರ್ವೋದಯ ಫ್ರೆಂಡ್ಸ್ ಅಧ್ಯಕ್ಷ ಸುಕುಮಾರ್ ಅಮೀನ್, ಸ್ಫೂರ್ತಿ ವಿಶೇಷ ಶಾಲೆಯ ಮುಖ್ಯಸ್ಥ ಪ್ರಕಾಶ್ ಜೆ.ಶೆಟ್ಟಿಗಾರ್, ಆಡಳಿತ ಮಂಡಳಿ ಸದಸ್ಯರಾದ ವರದರಾಯ್ ಕಾಮತ್, ನರಸಿಂಹ ಮಡಿವಾಳ, ಹಳೇ ವಿದ್ಯಾರ್ಥಿಗಳಾದ ಪ್ರಕಾಶ್ ಮಿರಾಂದ, ಸಂದೀಪ್ ಸುವರ್ಣ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಸದಾನಂದ ಪೂಜಾರಿ ಸ್ವಾಗತಿಸಿದರು. ಶಿಕ್ಷಕ ಶಂಕರ್ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.

ಸಾಧಕರಿಗೆ ಗೌರವ

ಹೆಲ್ಪಿಂಗ್ ಫ್ರೆಂಡ್ಸ್ ಇಸ್ರೇಲ್ ತಂಡದ ಅಭಿಮಾನಿಗಳಾದ ತೇಜಾಕ್ಷಿ ಗಜೇಂದ್ರ ಸನಿಲ್ ಮತ್ತು ಸರ್ವೋದಯ ಫ್ರೆಂಡ್ಸ್ ಕಲ್ಲಮುಂಡ್ಕೂರು ವತಿಯಿಂದ ಸುಮಾರು 70 ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ಹಾಗೂ ಸಮವಸ್ತ್ರ ವಿತರಿಸಲಾಯಿತು. ಎಸ್ಸೆಸ್ಸೆಲ್ಸಿಯಲ್ಲಿ ಡಿಸ್ಟಿಂಕ್ಸನ್‌ನಲ್ಲಿ ತೇರ್ಗಡೆಗೊಂಡ ವಿದ್ಯಾರ್ಥಿಗಳಾದ ಭವ್ಯಶ್ರೀ, ಹರ್ಷಿತಾ, ದೀಕ್ಷಿತಾ, ಅರ್ಪಣಾ ನಾಯಕ್, ಅಖಿಲ್ ತಸ್ಲೀಮಾ, ಸಮೀಕ್ಷಾ ಅವರನ್ನು ಹಳೇ ವಿದ್ಯಾರ್ಥಿಗಳ ವತಿಯಿಂದ ಗೌರವಧನ ನೀಡಿ ಗೌರವಿಸಲಾಯಿತು.