ಸಂದೀಪ್ ಸಾಲ್ಯಾನ್ ಬಂಟ್ವಾಳ
ಕಾರಣಾಂತರಗಳಿಂದ ಆಮೆನಡಿಗೆಯಲ್ಲಿ ಸಾಗಿ ಬಂದಿದ್ದ ಬಂಟ್ವಾಳ ತಾಲೂಕಿನ ಬೊಂಡಾಲದಲ್ಲಿ ನಿರ್ಮಾಣಗೊಳ್ಳುತ್ತಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕಿಯರ ಹಾಸ್ಟೆಲ್ ಕಟ್ಟಡ ಕೊನೆಗೂ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ಕಾಮಗಾರಿ ನಡೆದಿದ್ದು ತಿಂಗಳೊಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
ಇಲಾಖೆಯ ನಿವೇಶನದಲ್ಲಿ 2020ರಲ್ಲಿ ಹಾಸ್ಟೆಲ್ ಕಟ್ಟಡ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಜಾಗದ ಸಮತಟ್ಟಿನ ವಿಚಾರಕ್ಕೆ ಸಂಬಂಧಿಸಿ ಆರಂಭಿಕ ವಿಘ್ನ ಎದುರಾಗಿತ್ತು. ಕಟ್ಟಡದ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿದ್ದ ನಿರ್ಮಿತಿ ಕೇಂದ್ರದ ಮಾಹಿತಿ ಪ್ರಕಾರ ಕಟ್ಟಡ ನಿರ್ಮಾಣಕ್ಕೆ ಹೆಚ್ಚಿನ ಅನುದಾನದ ಅಗತ್ಯ ಎದುರಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಅದರ ಮಂಜೂರಾತಿ ವಿಳಂಬವಾದ ಕಾರಣ ಕಾಮಗಾರಿಯೂ ವಿಳಂಬವಾಯಿತು. ಹೀಗೆ ಆರಂಭದಿಂದಲೇ ಕುಂಟುತ್ತಾ ಸಾಗಿ ಬಂದ ಕಟ್ಟಡ ನಿರ್ಮಾಣ ಕಾಮಗಾರಿ ಇದೀಗ ಮುಕ್ತಾಯದ ಹಂತಕ್ಕೆ ತಲುಪಿದೆ.
7500 ಚದರ ಅಡಿ ವಿಸ್ತೀರ್ಣದ ಕಟ್ಟಡ ನಿರ್ಮಾಣಗೊಂಡಿದ್ದು, ಸ್ಥಳಾವಕಾಶದ ದೃಷ್ಟಿಯಿಂದ ಇಲಾಖೆಯು ಒಂದು ಅಂತಸ್ತಿನ ಕಟ್ಟಡ(ಜಿ ಪ್ಲಸ್ ವನ್) ನಿರ್ಮಿಸುವಂತೆ ಪ್ರಾರಂಭದಲ್ಲೇ ಸಂಬಂಧಪಟ್ಟ ಇಂಜಿನಿಯರಿಂಗ್ ವಿಭಾಗಕ್ಕೆ ಮನವಿ ಮಾಡಿತ್ತು. 2 ಕೋ. ರೂ. ಮಂಜೂರಾತಿಯ ಜತೆಗೆ ಹೆಚ್ಚುವರಿಯಾಗಿ ಇನ್ನೊಂದು ಕೋ. ರೂ.ಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇಲಾಖೆಗೆ ಈ ಭಾಗದಲ್ಲಿ ಸದ್ಯ ಒಂದು ಎಕರೆ ಪ್ರದೇಶ ಮಾತ್ರ ಲಭ್ಯವಿರುವುದರಿಂದ ಕಡಿಮೆ ಸ್ಥಳದಲ್ಲಿ ಒಂದು ಹಾಸ್ಟೆಲ್ ನಿರ್ಮಾಣಗೊಂಡರೆ, ಉಳಿದ ಸ್ಥಳದಲ್ಲಿ ಮುಂದಿನ ದಿನಗಳಲ್ಲಿ ಮತ್ತೊಂದು ಕಟ್ಟಡ ನಿರ್ಮಾಣಕ್ಕೆ ಸ್ಥಳಾವಕಾಶ ಸಿಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಜಿ ಪ್ಲಸ್ ವನ್ ಕಟ್ಟಡಕ್ಕೆ ಆದ್ಯತೆ ನೀಡಲಾಗಿತ್ತು.
ಜಾಗದ ಮಧ್ಯೆ ಇದ್ದ ಬೃಹತ್ ಬಂಡೆ ಕಲ್ಲನ್ನು ತೆರವು ಮಾಡುವುದಕ್ಕೆ ಹೆಚ್ಚಿನ ಮೊತ್ತ ತಗುಲಿದ್ದು ಅದಕ್ಕಾಗಿ ಕಟ್ಟಡಕ್ಕೆ ಮಂಜೂರಾದ ಮೊತ್ತವನ್ನೇ ಬಳಸಿಕೊಳ್ಳಲಾಗಿತ್ತು. ಅಂದರೆ ಬಂಡೆಕಲ್ಲು ಒಡೆಯುವ ಮೊತ್ತ ಎಸ್ಟಿಮೇಟ್‌ನಲ್ಲಿ ಒಳಗೊಳ್ಳದ ಪರಿಣಾಮ ಹೆಚ್ಚುವರಿ ಮೊತ್ತದ ಅನಿವಾರ್ಯತೆ ಎದುರಾಗಿತ್ತು.
ಪಾಣೆಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವ ದೇವರಾಜ ಅರಸು ಮೆಟ್ರಿಕ್ ಆನಂತರದ ಬಾಲಕಿಯರ ಹಾಸ್ಟೆಲ್‌ಗೆ ಪೂರಕವಾಗಿ ಈ ಕಟ್ಟಡ ನಿರ್ಮಾಣವಾಗಿದೆ. ಇದರಲ್ಲಿ 150 ಮಂದಿ ವಾಸ ಮಾಡಬಹುದು. ಆದರೆ, ಸದ್ಯಕ್ಕೆ ಈ ಕಟ್ಟಡಕ್ಕೆ ಬಾಲಕಿಯರ ಹಾಸ್ಟೆಲ್ ಸ್ಥಳಾಂತರಗೊಳ್ಳುತ್ತಿಲ್ಲ. ಬದಲಾಗಿ ಮೆಟ್ರಿಕ್ ಪೂರ್ವ ಹಾಸ್ಟೆಲ್‌ನ 50 ಮಂದಿ ಬಾಲಕರಿಗೆ ಇಲ್ಲಿ ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಕಳೆದ ಎಪ್ರಿಲ್-ಮೇ ತಿಂಗಳಲ್ಲಿ ಕಟ್ಟಡ ನಿರ್ಮಾಣ ಕೆಲಸ ಪೂರ್ಣಗೊಳಿಸಿ ಜೂನ್ ತಿಂಗಳಲ್ಲಿ ವಿದ್ಯಾರ್ಥಿಗಳಿಗೆ ಹೊಸ ಹಾಸ್ಟೆಲ್ ಕಟ್ಟಡ ನೀಡುವ ಯೋಚನೆ ಇತ್ತು. ಪ್ರಸ್ತುತ ಕಟ್ಟಡದ ಬಹುತೇಕ ಕಾಮಗಾರಿ ಪೂರ್ಣಗೊಂಡು ತಿಂಗಳೊಳಗೆ ಪೂರ್ಣಗೊಳಿಸಲು ಸಂಬಂಧಪಟ್ಟ ಇಂಜಿನಿಯರ್‌ಗೆ ಸೂಚನೆ ನೀಡಲಾಗಿದೆ. - ಬಿಂದಿಯಾ ನಾಯಕ್, ತಾಲೂಕು ಕಲ್ಯಾಣಾಧಿಕಾರಿ ಬಂಟ್ವಾಳ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ