

ಮಂಗಳೂರು : ಮೈಸೂರಿನ ಮುಡಾ ಹಗರಣ ಸಂಬಂಧಿಸಿ ಸರ್ಕಾರವೇ ಅಧಿಕಾರಿಯನ್ನು ಅಮಾನತು ಮಾಡಿರುವ ಕಾರಣ ಕಾನೂನು ಉಲ್ಲಂಘನೆ ಆಗಿರುವುದನ್ನು ಸ್ಪಷ್ಟವಾಗಿ ಒಪ್ಪಿಕೊಂಡಿದೆ ಎಂದು ಸಂಸದ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ದಕ್ಷಿಣ ಕನ್ನಡ ಮತ್ತು ಉಡುಪಿ ವಿಧಾನ ಪರಿಷತ್ ಸ್ಥಾನದ ಉಪ ಚುನಾವಣೆ ಹಿನ್ನೆಲೆಯಲ್ಲಿ ಗುರುವಾರ ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಅಭಿಪ್ರಾಯ ಸಂಗ್ರಹಿಸಲು ಆಗಮಿಸಿದ ಸಂದರ್ಭ ಅವರು ಸುದ್ದಿಗಾರರ ಜತೆ ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣ ನ್ಯಾಯಾಲಯದ ಮುಂದಿದೆ. ಏನಾಗುತ್ತದೆ ಎನ್ನುವ ಬಗ್ಗೆ ಭವಿಷ್ಯ ನುಡಿಯೋದು ಸರಿಯಲ್ಲ. ಪರ ವಿರೋಧ ವಾದ ನಡೆಯುತ್ತಿದೆ. ಅಂತಿಮವಾಗಿ ನ್ಯಾಯಾಲಯ ತೀರ್ಮಾನ ಮಾಡುತ್ತದೆ. ಅಂತಿಮ ತೀರ್ಪು ಏನು ಬರುತ್ತದೆ ಅಂತ ನೋಡೋಣ ಎಂದು ಅವರು ಹೇಳಿದರು.
ಬಿಜೆಪಿ ಸರ್ಕಾರದ ಅವಧಿಯ ಪ್ರಕರಣವಿದ್ದರೆ ಬಹಿರಂಗ ಪಡಿಸಲಿ. ಕಾನೂನು ಇದೆ .ಕೋರ್ಟ್ ಇದೆ. ಎದುರಿಸಲು ಸಿದ್ದರಿದ್ದೇವೆ.
ಸೇಡಿನ ರಾಜಕೀಯದ ಭಾವನೆಯಿಂದ ಕೇಸ್ ತೆಗೆದರೂ ಎದುರಿಸಲು ಸಿದ್ಧ ಎಂದು ಬೊಮ್ಮಾಯಿ ಹೇಳಿದರು.
ಹಿಜಾಬ್ ಬ್ಯಾನ್ ಮಾಡಿದ ಕುಂದಾಪುರದ ಪ್ರಾಂಶುಪಾಲರ ಉತ್ತಮ ಪ್ರಾಂಶುಪಾಲ ಪ್ರಶಸ್ತಿ ತಡೆ ಹಿಡಿದ ಬಗ್ಗೆ ಪ್ರತಿಕ್ರಿಯಿಸಿದ ಅವರು ‘ಹಿಜಾಬ್ ಶಕ್ತಿಗಳು , ದೇಶದ್ರೋಹಿ ಶಕ್ತಿಗಳು ಇನ್ನೂ ಕೆಲಸ ಮಾಡುತ್ತಿದೆ. ಅವತ್ತು ಪ್ರಾಂಶುಪಾಲರು ತಮ್ಮ ಕರ್ತವ್ಯ ಮಾತ್ರ ಮಾಡಿದ್ದರು
ಹೈಕೋರ್ಟ್ ಕೂಡ ಮಾಡಿದ್ದು ಸರಿ ಅಂತ ಹೇಳಿದೆ. ಸುಪ್ರೀಂ ಕೋರ್ಟ್‌ನಲ್ಲಿ ಕೇಸ್ ಪೆಂಡಿಂಗ್ ಇದೆ. ಇಂತಹ ಸಂದರ್ಭ ಪ್ರಶಸ್ತಿ ತಡೆಹಿಡಿದದ್ದು ಸರಿಯಲ್ಲ ಎಂದರು.
ಕೆಲವರು ಓಲೈಕೆ ರಾಜಕಾರಣ ಹಿನ್ನೆಲೆಯಲ್ಲಿ ಕೆಲಸ ಮಾಡಿದ್ದಾರೆ. ಮುಖ್ಯಮಂತ್ರಿ ಮಧ್ಯೆ ಪ್ರವೇಶಿಸಿ ಪ್ರಶಸ್ತಿ ಕೊಡಿಸಬೇಕು. ಇಲ್ಲವಾದರೆ ಜನ ತಿರುಗಿ ಬೀಳುತ್ತಾರೆ. ಇದು ಶಿಕ್ಷಕರಿಗೆ ಮಾಡಿದ ಅವಮಾನ ಎಂದು ಅವರು ಹೇಳಿದರು.
ಕೋಟ ಶ್ರೀನಿವಾಸ ಪೂಜಾರಿ ಸಂಸದರಾದ ಹಿನ್ನೆಲೆಯಲ್ಲಿ ದ.ಕ. -ಉಡುಪಿ ಸ್ಥಳೀಯಾಡಳಿತದ ಪರಿಷತ್ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ನಾಯಕರು, ಹಿರಿಯರ ಜತೆ ಚರ್ಚಿಸಿ ಅಭಿಪ್ರಾಯ ಸಂಗ್ರಹ ಮಾಡಲಿದ್ದೇವೆ. ಈ ಬಗ್ಗೆ ವರದಿ ಕೊಡಲು ಕೋರ್ ಕಮಿಟಿಯಲ್ಲಿ ನಿರ್ಧಾರ ಆಗಿತ್ತು ಎಂದು ದ.ಕ-ಉಡುಪಿ ವಿಧಾನ ಪರಿಷತ್ ಕ್ಷೇತ್ರದ ಉಸ್ತುವಾರಿಯಾಗಿರುವ ಬಸವರಾಜ್ ಬೊಮ್ಮಾಯಿ ತಿಳಿಸಿದರು.