ಜಿಲ್ಲೆ

ಗಾಂಜಾ ಮಾರಾಟ ಮಾಡುತ್ತಿದ್ದ ಬಿಎಂ​ಟಿಸಿ ಚಾಲಕ-ನಿರ್ವಾಹಕರ ಬಂಧನ

Webdesk - Ravikanth

ಬೆಂಗಳೂರು: ತಮಗಿದ್ದ ಅನುಕೂಲತೆಯನ್ನೇ ದುರ್ಬಳಕೆ ಮಾಡಿಕೊಂಡು ಗಾಂಜಾ ತಂದು ಮಾರಾಟ ಮಾಡುತ್ತಿದ್ದ ಬಿಎಂಟಿಸಿ ಬಸ್​ ಚಾಲಕ ಹಾಗೂ ನಿರ್ವಾಹಕನನ್ನು ಪೊಲೀಸರು ಬಂಧಿಸಿದ್ದಾರೆ. ವಿಠ್ಠಲ್ ಭಜಂತ್ರಿ ಹಾಗೂ ಶರಣಬಸಪ್ಪ ಎಂಬ ಬಿಎಂಟಿಸಿ ನೌಕರರು ಬಂಧಿತರು.

ವಿಠ್ಠಲ್ ಭಜಂತ್ರಿ ಹಾಗೂ ಶರಣಬಸಪ್ಪ ಬಿಎಂಟಿಸಿಯಲ್ಲಿ ಚಾಲಕ, ನಿರ್ವಾಹಕ ಆಗಿ ಕೆಲಸ ಮಾಡುತ್ತಿದ್ದು, ಸರ್ಕಾರಿ ಬಸ್​ಗಳಲ್ಲಿ ತಮಗೆ ಮುಕ್ತವಾಗಿ ಓಡಾಡಲು ಇದ್ದ ಅವಕಾಶವನ್ನು ದುರ್ಬಳಕೆ ಮಾಡಿಕೊಂಡಿದ್ದರು. ಕೆಂಗೇರಿ ಸಮೀಪದ ತುರಹಳ್ಳಿ ಅರಣ್ಯ ಪ್ರದೇಶವನ್ನೇ ಅಡ್ಡೆ ಮಾಡಿಕೊಂಡಿದ್ದ ಆರೋಪಿಗಳು ಕಳೆದ ಮೂರು ವರ್ಷಗಳಿಂದ ಗಾಂಜಾ ದಂಧೆಯಲ್ಲಿ ತೊಡಗಿಸಿಕೊಂಡಿದ್ದರು.

ಇವರು ವಿಜಯಪುರ ಮತ್ತು ಕಲಬುರಗಿಯಿಂದ ಗಾಂಜಾ ತಂದು ಒಂದು ಕಿಲೋಗ್ರಾಮ್​ಗೆ 40ರಿಂದ 50 ಸಾವಿರ ರೂಪಾಯಿಗೆ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಸುಳಿವು ಪಡೆದ ಕೆಂಗೇರಿ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ. ಬಂಧಿತರಿಂದ 9.8 ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಎನ್​ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.