ಜಿಲ್ಲೆ

ಬಿಎಂಟಿಸಿ ಬಸ್ ಡಿಕ್ಕಿ; ಶಾಲೆಯಿಂದ ಮನೆಗೆ ತೆರಳುತ್ತಿದ್ದ 9 ವರ್ಷದ ಬಾಲಕಿ ಬಲಿ| BMTC Bus Accident

ಬೆಂಗಳೂರು: ಬಿಎಂಟಿಸಿ ಬಸ್ ಚಾಲಕನ ಅಜಾಗರೂಕತೆಯಿಂದ ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಮತ್ತೊಂದು ಜೀವ ಕೊನೆಯುಸಿರೆಳೆದಿದೆ. ರಾಜಾಜಿನಗರದ 1ನೇ ಬ್ಲಾಕ್​ನಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(BMTC)ಯ ಬಸ್ ಬಸ್ ಹರಿದು ಶಾಲೆಯಿಂದ ಮನೆಗೆ ತೆರಳುತ್ತಿದ್ದ 9 ವರ್ಷದ ಬಾಲಕಿ ಸ್ಥಳಲ್ಲೇ ಸಾವನ್ನಪ್ಪಿದ್ದಾಳೆ.

ಇತ್ತೀಚಿನ ದಿನಗಳಲ್ಲಿ ಬಿಎಂಟಿಸಿ ಬಸ್​ ಹಲವಾರು ಜನರ ಪ್ರಾಣವನ್ನು ಬಲಿ ತೆಗೆದುಕೊಂಡಿದೆ. ಕಳೆದ ನಾಲ್ಕು ದಿನಗಳ ಹಿಂದಷ್ಟೇ ಕಮಲಾನಗರದಲ್ಲಿ ಬಸ್‌ನಲ್ಲಿ ಬ್ರೇಕ್‌ ಫೇಲ್ಯೂರ್ ಉಂಟಾಗಿ ನಂದಿನಿ ಪಾರ್ಲರ್‌ಗೆ ನುಗ್ಗಿತ್ತು. ಸದ್ಯ ಬಸ್​ನಲ್ಲಿ 20 ಮಂದಿ ಪ್ರಯಾಣಿಕರಿದ್ದು, ಯಾರಿಗೂ ಪ್ರಾಣಹಾನಿಯಾಗಿರಲಿಲ್ಲ. ನಂದಿನಿ ಪಾರ್ಲರ್​ಗೆ ಮಾತ್ರ ಹಾನಿ ಸಂಭವಿಸಿತ್ತು. ಆದರೆ ಇದೀಗ ಚಾಲಕನ ಬೇಜವಾಬ್ದಾರಿಗೆ ಅಮಾಯಕ ಬಾಲಕಿ ಬಲಿಯಾಗಿದ್ದಾಳೆ.

2 ಬಾರಿ ಅಪಘಾತ ಮಾಡಿದರೆ ಚಾಲಕರು ಕೆಲಸದಿಂದಲೇ ವಜಾ

(ಏಜೆನ್ಸೀಸ್)

ರಾಜ್ಯ ರಾಜಧಾನಿಯಲ್ಲಿ ಪ್ರಯಾಣಿಕರ ಸುರಕ್ಷತಾ ದೃಷ್ಟಿಯಿಂದ ಬೆಂಗಳೂರು ಮಹಾನಗರ ಸಾರಿಗೆ (BMTC) ಬಸ್​ ಚಾಲಕರಿಗಾಗಿ ಕಟ್ಟು-ನಿಟ್ಟಿನ ಹೊಸ ನಿಯಮವನ್ನು ಜಾರಿಗೆ ತಂದಿದೆ. ಈ ನಿಯಮದಲ್ಲಿ ಚಾಲಕರು ಎರಡು ಬಾರಿ ಅಪಘಾತವೆಸಗಿದರೆ, ಅವರನ್ನು ಕೆಲಸದಿಂದ ವಜಾಗೊಳಿಸಲಾಗುತ್ತದೆ. ಜೊತೆಗೆ ಬಸ್​ ಚಾಲನೆ ಮಾಡುವಾಗ ಚಾಲಕ ಏನಾದರೂ ಮೊಬೈಲ್​ ಬಳಕೆ ಮಾಡಿದ್ದು ಕಂಡುಬಂದಲ್ಲಿ ಅವರನ್ನು ತಕ್ಷಣದಿಂದಲೇ ಕೆಲಸದಿಂದ ಅಮಾನತು ಮಾಡಲಾಗುತ್ತದೆ ಎಂಬ ಆದೇಶ ಹೊರಡಿಸಲಾಗಿದೆ. ಇತ್ತೀಚೆಗೆ ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ರಸ್ತೆ ಅಪಘಾತಗಳ ಪ್ರಮಾಣ ಹೆಚ್ಚಾಗಿದ್ದು, ಈ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಇಲಾಖೆ ಈ ನಿರ್ಧಾರ ಕೈಗೊಂಡಿದೆ. ಜೊತೆಗೆ, ಮದ್ಯಪಾನ ಮಾಡುವುದು, ಪ್ರಯಾಣಿಕರಿಗೆ ಟಿಕೆಟ್ ನೀಡದೆ ಇರುವುದು ಮುಂತಾದ ಲೋಪಗಳಿಗೆ ಅಮಾನತು ಕ್ರಮ ಜರುಗಿಸಲಾಗುವುದು ಎಂದು ಬಿಎಂಟಿಸಿ ತಿಳಿಸಿದೆ.