ಬೆಂಗಳೂರು: ನಿತ್ಯ ಪ್ರಯಾಣಿಕರ ಸಂಖ್ಯೆ ಏರಿಕೆಯಾಗುತ್ತಿದ್ದಂತೆ, ನಮ್ಮ ಮೆಟ್ರೋ ಆದಾಯ ಲಾಭದತ್ತ ಸಾಗಿದೆ. ಪ್ರಸಕ್ತ ವರ್ಷ 100 ಕೋಟಿ ರೂ. ಲಾಭ ದಾಖಲಾಗಬಹುದು ಎಂದು ಬಿಎಂಆರ್ಸಿಎಲ್ ನಿರೀಕ್ಷೆ ಹೊಂದಿದೆ.
ನಮ್ಮ ಮೆಟ್ರೋ ಆರಂಭವಾಗಿ ಹತ್ತು ವರ್ಷಗಳೇ ಕಳೆದಿದ್ದು, ಕ್ರಮೇಣ ಪ್ರಯಾಣಿಕರ ಸಂಖ್ಯೆ ಏರಿಕೆಯಾಗುತ್ತಿದೆ. ದಿನ ನಿತ್ಯ 6.2 ಲಕ್ಷ ಮಂದಿ ನಮ್ಮ ಮೆಟ್ರೋ ಬಳಸುತ್ತಿದ್ದಾರೆ. ದಿನದಿಂದ ದಿನಕ್ಕೆ ಮೆಟ್ರೋ ಜಾಲ ವಿಸ್ತರಣೆ ಆಗುತ್ತಿರುವುದರಿಂದ ಉತ್ತಮ ಆದಾಯ ಸಂಗ್ರಹವಾಗುತ್ತಿದೆ. 2022-23ರಲ್ಲಿ ಬಿಎಂಆರ್ಸಿಎಲ್ 594.02 ಕೋಟಿ ರೂ. ಆದಾಯ ಗಳಿಸಿದ್ದು, ನಿರ್ವಹಣೆಗೆ 486.61 ಕೋಟಿ ರೂ. ವೆಚ್ಚವಾಗಿದೆ. ಇತರ ವೆಚ್ಚ ಕಳೆದು 40 ಕೋಟಿ ರೂ. ಉಳಿತಾಯವಾಗಿದೆ.
ನಗರದಲ್ಲಿ ಸಂಚಾರ ದಟ್ಟಣೆ, ಟ್ರಾಫಿಕ್ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ಜನರು ಮೆಟ್ರೋ ಮೊರೆ ಹೋಗುತ್ತಿದ್ದಾರೆ. ಅಲ್ಲದೆ ಮೆಟ್ರೋ ಜಾಲ ವಿಸ್ತರಣೆಯಾಗುತ್ತಿದ್ದು, ಪ್ರಮುಖ ಸ್ಥಳಗಳಿಗೆ ಕಡಿಮೆ ಸಮಯದಲ್ಲಿ ತಲುಪಬಹುದಾಗಿದ್ದರಿಂದ ಕಾಲೇಜು ವಿದ್ಯಾರ್ಥಿಗಳು, ಐಟಿ ಉದ್ಯೋಗಿಗಳಿಗೆ ಹೆಚ್ಚು ಅನುಕೂಲಕರವಾಗಿದೆ. ಅಲ್ಲದೆ ಸಂಜೆಯ ಹೊತ್ತಿನಲ್ಲಿ ಸ್ವಂತ ವಾಹನದಲ್ಲಿ ನಗರ ಪ್ರವೇಶಿಸಲು ಹಿಂದೇಟು ಹಾಕುವ ಮಂದಿ ಮೆಟ್ರೋ ಉಪಯೋಗಿಸುತ್ತಿದ್ದಾರೆ. ಈ ಎಲ್ಲ ಅಂಶಗಳು ಬಿಎಂಆರ್ಸಿಎಲ್ ಆದಾಯ ಹೆಚ್ಚಳಕ್ಕೆ ಕಾರಣವಾಗಿವೆ.
ನಗರದಲ್ಲಿ ಆಯೋಜನೆಯಾಗುತ್ತಿರುವ ದೊಡ್ಡ ದೊಡ್ಡ ಸಮಾರಂಭಗಳ ಸಂಖ್ಯೆ ಹೆಚ್ಚಾಗಿರುವುದು, ನಮ್ಮ ಮೆಟ್ರೋ ಆದಾಯಕ್ಕೆ ಸಹಕಾರಿಯಾಗಿದೆ. ಇತ್ತೀಚೆಗೆ ಲಾಲ್ಬಾಗ್ ಲಪುಷ್ಪ ಪ್ರದರ್ಶನಕ್ಕೆ ಆಗಮಿಸಲು ಸಾಕಷ್ಟು ಸಂಖ್ಯೆಯಲ್ಲಿ ಜನರು ಮೆಟ್ರೋ ಬಳಸಿದ್ದರು. ಸ್ವಾತಂತ್ರ್ಯೋತ್ಸವ ದಿನದಂದು 4.50 ಲಕ್ಷ ಮಂದಿ ಪ್ರಯಾಣಿಸಿದ್ದರು. ಅಲ್ಲದೆ, ಐಪಿಎಲ್ ಸಂದರ್ಭದಲ್ಲೂ ಮೆಟ್ರೋ ಪ್ರಯಾಣಿಕರ ಸಂಖ್ಯೆ ಹೆಚ್ಚಿರುತ್ತದೆ. ಜತೆಗೆ ನಮ್ಮ ಮೆಟ್ರೋದಲ್ಲಿ ಅಪಾಯವಿಲ್ಲದೆ ಕಡಿಮೆ ಸಮಯದಲ್ಲಿ ಗಮ್ಯ ತಲುಪಲು ಸಾಧ್ಯವಾಗುತ್ತದೆ. ಸದ್ಯ ಪ್ರತಿಯೊಂದು ಮೆಟ್ರೋ ನಿಲ್ದಾಣಗಳಲ್ಲೂ ಮೊಬಿಲಿಟಿ ಕಾರ್ಡ್ ಖರೀದಿಗೆ ಸಂಸ್ಥೆಯು ಅವಕಾಶ ಕಲ್ಪಿಸಿದ್ದು, ಭವಿಷ್ಯದಲ್ಲಿ ಇನ್ನಷ್ಟು ಹೆಚ್ಚಿನ ಆದಾಯ ನಿರೀಸಿದೆ.
ನಮ್ಮ ಮೆಟ್ರೋ ಗುಣಮಟ್ಟದ ಸೇವೆ ನೀಡುತ್ತಿದ್ದು, ನಗರದೊಳಗೆ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದೆ. ಇದರಿಂದಾಗಿ ದಿನೇ ದಿನೆ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಿದೆ. ಇದು ಉತ್ತಮ ಆದಾಯ ಗಳಿಕೆಗೆ ಕಾರಣವಾಗಿದೆ. ವಾಣಿಜ್ಯ ಬಳಕೆಗೆ ವಿಸ್ತರಿತ ಮಾರ್ಗಗಗಳು ತೆರೆದುಕೊಳ್ಳುತ್ತಿದ್ದಂತೆ ಇನ್ನಷ್ಟು ಆದಾಯ ಸಂಗ್ರಹವಾಗುವ ನಿರೀಕ್ಷೆ ಎಂದು ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ತಿಳಿಸಿದ್ದಾರೆ.