ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ನಮ್ಮ ಮೆಟ್ರೋ ದರದಲ್ಲಿ ರಾಜ್ಯ ಸರ್ಕಾರ ಶೇ.50ರಷ್ಟು ಹೆಚ್ಚಳ ಮಾಡಿದ್ದನ್ನು ತೀವ್ರ ಖಂಡಿಸಿದ್ದ ಜನರು, ಮೆಟ್ರೋ ಟಿಕೆಟ್ ದರವನ್ನು ಶೀಘ್ರವೇ ಇಳಿಸಬೇಕು ಎಂದು ಒತ್ತಾಯಿಸಿದ್ದರು. ವ್ಯಾಪಕ ಜನಾಕ್ರೋಶ ಮೇರೆಗೆ ಇಂದು ಬಿಎಂಆರ್ಸಿಎಲ್ ನಿರ್ದೇಶಕರು ದರದಲ್ಲಿ ಇಳಿಕೆ ಮಾಡುವುದಾಗಿ ತಿಳಿಸಿದ್ದಾರೆ.
ನಮ್ಮ ಮೆಟ್ರೋ ಪ್ರಯಾಣದರ ದುಪ್ಪಟ್ಟು ಆದಲ್ಲಿ ಟಿಕೆಟ್ ದರ ಕಡಿಮೆ ಮಾಡಲಾಗುವುದು ಎಂದು ಬಿಎಂಆರ್ಸಿಎಲ್ ನಿರ್ದೇಶಕರಾದ ಮಹೇಶ್ವರ ರಾವ್ ಹೇಳಿದ್ದಾರೆ. ಶೇ.45ರಿಂದ 50ರಷ್ಟು ಹೆಚ್ಚಳವಾಗಿರುವಲ್ಲಿ ಇಳಿಕೆ ಮಾಡಲಿದ್ದೇವೆ. ಕನಿಷ್ಠ ದರ 10, ಗರಿಷ್ಠ ದರ 90 ಹಾಗೆಯೇ ಉಳಿಯುತ್ತದೆ. 80, 90, 100 ಶೇ. ದರ ಜಂಪ್ ಆಗುವ ಕಡೆ ಸರಾಸರಿ ಶೇ.70 ಹೆಚ್ಚಳವಾಗಲಿದೆ ಎಂದು ರಾವ್ ಹೇಳಿದರು.
"ಆಯಾ ಸ್ಟೇಜ್ಗಳಲ್ಲಿ ದರ ಜಂಪ್ ಆಗಿದ್ದರೆ ಅದನ್ನು ಸರಿಪಡಿಸುತ್ತೇವೆ. 90ರಿಂದ 100ರಷ್ಟು ಹೆಚ್ಚಾದ ಕಡೆ ಮಾತ್ರ ಬದಲಾಯಿಸುತ್ತೇವೆ ಹೊರತು ಉಳಿದೆಲ್ಲವನ್ನೂ ಬದಲಾಯಿಸುವುದಿಲ್ಲ. ನಾವು ಪರಿಷ್ಕರಣೆ ಮಾಡಿರುವ ದರದಲ್ಲಿ ಇನ್ಯಾವುದೇ ಬದಲಾವಣೆ ಇರುವುದಿಲ್ಲ. ಇದು ನಾಳೆಯಿಂದೇ ಜಾರಿಗೆ ಬರಲಿದೆ" ಎಂದು ಮಹೇಶ್ವರ ರಾವ್ ತಿಳಿಸಿದ್ದಾರೆ.