ಪಡುಬಿದ್ರಿ: ನಡಿಪಟ್ಣದ ಶ್ರೀ ವಿಷ್ಣು ಭಜನಾ ಮಂದಿರ ಬಳಿ ಕಡಲ್ಕೊರೆತ ಶುಕ್ರವಾರ ಮತ್ತಷ್ಟು ತೀವ್ರಗೊಂಡಿದೆ.
ಸಮುದ್ರದ ಭಾರಿ ಗಾತ್ರದ ಅಲೆಗಳು ಬ್ಲೂಫ್ಲಾೃಗ್ ಬೀಚ್ ಸಂಪರ್ಕಿಸುವ ಕಾಂಕ್ರೀಟ್ ರಸ್ತೆಗೆ ಅಪ್ಪಳಿಸುತ್ತಿದ್ದು, ಸಂಪರ್ಕ ಕಡಿತ ಭೀತಿ ಉಂಟಾಗಿದೆ. ಕಡಲ್ಕೊರೆತ ಪ್ರದೇಶಕ್ಕೆ ತಹಸೀಲ್ದಾರ್ ಪ್ರತಿಭಾ ಆರ್., ಬಂದರು ಮತ್ತು ಮೀನುಗಾರಿಕಾ ಇಲಾಖೆಯ ಶೋಭಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಡಲ್ಕೊರೆತ ಉಂಟಾದ ಪ್ರದೇಶದಲ್ಲಿ ವಿದ್ಯುತ್ ಕಂಬ ತೆರವುಗೊಳಿಸುವ ಸಂದರ್ಭ ವಿದ್ಯುತ್ ಆಘಾತಕ್ಕೊಳಗಾಗಿ ಕಾರ್ಕಳ ನಿವಾಸಿ ರಾಕೇಶ್ ಎಂಬುವರು ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲಕ್ಕೆ ಕರೆದೊಯ್ಯಲಾಗಿದೆ. ಘಟನೆ ಬಳಿಕ ವಿದ್ಯುತ್ ಕಂಬ ತೆರವುಗೊಳಿಸುವ ಕಾರ್ಯ ಸ್ಥಗಿತಗೊಳಿಸಲಾಗಿದೆ.