ಮುದ್ದೇಬಿಹಾಳದ ಸರ್ಕಾರಿ ಪಪೂ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಆರೋಗ್ಯ ಇಲಾಖೆಯಿಂದ ಹಮ್ಮಿಕೊಂಡಿದ್ದ ಅನೀಮಿಯ ಮುಕ್ತ ಪೌಷ್ಠಿಕ ಕರ್ನಾಟಕ ಕಾರ್ಯಕ್ರಮಕ್ಕೆ ತಾಲೂಕಾ ಆರೋಗ್ಯಾಧಿಕಾರಿ ಡಾ. ಸತೀಶ ತಿವಾರಿ ಚಾಲನೆ ನೀಡಿದರು. ಪ್ರಾಚಾರ್ಯ ಎಸ್.ಎಸ್. ಅಂಗಡಿ, ಐ.ಬಿ. ಹಿರೇಮಠ, ಅನಸೂಯಾ ತೇರದಾಳ, ಎಂ.ಎಸ್. ಗೌಡರ ಇತರರಿದ್ದರು. 
ಜಿಲ್ಲೆ

ಅನೀಮಿಯ ಪತ್ತೆಗೆ 12,835 ವಿದ್ಯಾರ್ಥಿಗಳ ರಕ್ತ ಪರೀಕ್ಷೆ ಗುರಿ

ಮುದ್ದೇಬಿಹಾಳ : ರಕ್ತಹೀನತೆ ಮತ್ತು ಅಪೌಷ್ಠಿಕತೆ ಪತ್ತೆ ಮಾಡಲು ಸಾಮೂಹಿಕ ವಿದ್ಯಾರ್ಥಿಗಳ ತಪಾಸಣೆ ನಡೆಸಲಾಗುವುದು ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ. ಸತೀಶ ತಿವಾರಿ ಹೇಳಿದರು.

ಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕಾ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜ್ ಸಹಯೋಗದೊಂದಿಗೆ ಬುಧವಾರ ಹಮ್ಮಿಕೊಂಡಿದ್ದ ಅನೀಮಿಯ ಮುಕ್ತ ಪೌಷ್ಠಿಕ ಕರ್ನಾಟಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ತಾಲೂಕಿನಾದ್ಯಂತ 33 ಕಾಲೇಜುಗಳಲ್ಲಿ 16ರಿಂದ 18ವರ್ಷದ 12,835 ವಿದ್ಯಾರ್ಥಿಗಳಿದ್ದು ಅವರಿಗೆ ಹಿಮೋಗ್ಲೋಬಿನ್ ರಕ್ತ ಪರೀಕ್ಷೆ ಕೈಗೊಳ್ಳಲಾಗುತ್ತಿದೆ. ಪ್ರತಿದಿನಕ್ಕೆ 1,300 ವಿದ್ಯಾರ್ಥಿಗಳ ಪರೀಕ್ಷೆ ಮಾಡಲು ಯೋಜನೆ ರೂಪಿಸಲಾಗಿದೆ ಎಂದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅನಸೂಯಾ ತೇರದಾಳ ಮಾತನಾಡಿ, ನಿಯಮಿತವಾಗಿ ಪೌಷ್ಠಿಕಾಂಶಯುಕ್ತ ಆಹಾರ ಸೇವಿಸುವ ಮೂಲಕ ರಕ್ತಹೀನತೆಯಿಂದ ಪಾರಾಗಬಹುದು.

ಹೆಣ್ಣು ಮಕ್ಕಳು ಕಬ್ಬಿಣಾಂಶ ಹೆಚ್ಚಾಗಿರುವ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವುದರಿಂದ ರಕ್ತಹೀನತೆ ತಡೆಯಬಹುದು. ತರಕಾರಿ, ಸೊಪ್ಪು, ರಾಗಿ, ಮೊಳಕೆ ಕಟ್ಟಿದ ಕಾಳುಗಳು, ಬೆಲ್ಲ, ನೆಲ್ಲಿಕಾಯಿ, ಕಿತ್ತಳೆ ಹಣ್ಣು, ಮುಂತಾದವುಗಳ ಸೇವನೆಯಿಂದ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕಬ್ಬಿಣಾಂಶ ದೊರೆಯುತ್ತದೆ. ಅಗತ್ಯವೆನಿಸಿದರೆ ಕಬ್ಬಿಣಾಂಶದ ಮಾತ್ರೆಗಳು ಅಥವಾ ಸಿರಪ್ ಸೇವಿಸಬಹುದು ಎಂದರು.

ಪ್ರಾಚಾರ್ಯ ಎಸ್.ಎಸ್. ಅಂಗಡಿ ಮಾತನಾಡಿದರು. ಆರ್‌ಬಿಎಸ್‌ಕೆ ವೈದ್ಯ ಡಾ. ಪ್ರವೀಣ ಸುಣಕಲ್, ಡಾ. ಭಾಗ್ಯಶ್ರೀ ಬಿರಾದಾರ, ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎಸ್. ಗೌಡರ, ಎನ್.ಜಿ. ತಾಳಿಕೋಟಿ, ಎಸ್.ಆರ್. ಸಜ್ಜನ, ಎಸ್.ಸಿ. ರುದ್ರವಾಡಿ, ಶಿಲ್ಪಾ ಸಜ್ಜನ, ಚನ್ನಮ್ಮ ಚಲವಾದಿ, ಸಮುದಾಯ ಆರೋಗ್ಯ ಅಧಿಕಾರಿ ಹುಮಾಯೂನ್ ಟಕ್ಕೇದ, ಲತಾ ಜಾಧವ, ಲಲಿತಾ ಅಬ್ಬಿಹಾಳ, ಉಪನ್ಯಾಸಕರಾದ ಐ.ಬಿ. ಹಿರೇಮಠ, ಎಸ್.ಕೆ. ಮಾಳಗೊಂಡ, ಎಸ್.ಜಿ. ಲೊಟಗೇರಿ, ಎಲ್.ಎಸ್. ಗುರವ, ಬಿ.ಎ. ನಾಡಗೌಡರ, ಎ.ಎಂ. ಚಳಗೇರಿ ಇದ್ದರು.