ಸಿರಗುಪ್ಪ: ಬಿಎಲ್‌ಒ ಕರ್ತವ್ಯದಿಂದ ಶಿಕ್ಷಕರನ್ನು ಮುಕ್ತಗೊಳಿಸಬೇಕೆಂದು ಒತ್ತಾಯಿಸಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ತಹಸೀಲ್ದಾರ್ ಎನ್.ಆರ್.ಮಂಜುನಾಥಸ್ವಾಮಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ತಾಲೂಕು ಅಧ್ಯಕ್ಷ ಎಚ್.ಜೆ.ಶ್ರೀಧರ ಮಾತನಾಡಿ, ತಾಲೂಕಿನಲ್ಲಿ ಶೇ.60ರಷ್ಟು ಶಿಕ್ಷಕರ ಹುದ್ದೆ ಖಾಲಿಯಿದ್ದು, 60-70 ಶಿಕ್ಷಕರು ವರ್ಗಾವಣೆಯಾಗುವ ಸಾಧ್ಯತೆ ಇದೆ. ಅಲ್ಲದೆ 25-30 ಶಾಲೆಗಳಲ್ಲಿ ಒಬ್ಬ ಶಿಕ್ಷಕರು ಸಹ ಇಲ್ಲದಂತಾಗಿದೆ.
ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಶೇ.40ರಷ್ಟು ಶಿಕ್ಷಕರು ಪಾಠ ಬೋದನೆ ಪೂರ್ಣ ಪ್ರಮಾಣದಲ್ಲಿ ಮಾಡಲು ಆಗುತ್ತಿಲ್ಲ. ಅಲ್ಲದೆ ಮಕ್ಕಳ ದಾಖಲಾತಿ, ಕ್ರೀಡಾಕೂಟ, ಪ್ರತಿಭಾ ಕಾರಂಜಿ, ದಾಖಲೆಗಳ ನಿರ್ವಹಣೆ ಮಾಡುವುದು ಕಷ್ಟವಾಗಿದೆ ಎಂದರು.
ಇದನ್ನೂ ಓದಿ: ಬಿಎಲ್‌ಒ ಕರ್ತವ್ಯಕ್ಕೆ ನಿಯೋಜನೆ ಬೇಡ
ಶಾಲೆಯ ಶಿಕ್ಷಕರನ್ನು ಒಂದು ತಿಂಗಳು ಮತದಾರರ ಪಟ್ಟಿ ತಯಾರಿಕೆ ಮತ್ತು ಮನೆಗಳಿಗೆ ಭೇಟಿ ಕರ್ತವ್ಯದಲ್ಲಿ ತೊಡಗಿಕೊಂಡಾಗ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡಲು ಹೇಗೆ ಸಾಧ್ಯವಾಗುತ್ತದೆ. ಆದ್ದರಿಂದ ಶಿಕ್ಷಕರನ್ನು ಬಿಎಲ್‌ಒ ಕರ್ತವ್ಯದಿಂದ ಮುಕ್ತಗೊಳಿಸಬೇಕೆಂದು 2018ರಲ್ಲಿ ಶಿಕ್ಷಣ ಇಲಾಖೆಯ ನಿರ್ದೇಶಕರು ಮತ್ತು ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿದೆ.
ಕೇಂದ್ರ ಚುನಾವಣಾ ಆಯೋಗ ಮತ್ತು ಪ್ರಸ್ತುತ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರು ಮಾಧ್ಯಮಗಳ ಮೂಲಕ ಶಿಕ್ಷಕರನ್ನು ಬಿಎಲ್‌ಒ ಹೊಣೆಯಿಂದ ಮುಕ್ತಗೊಳಿಸಬೇಕೆಂದು ಹೇಳಿದ್ದಾರೆ. ತಾಲೂಕಿನಲ್ಲಿ ಬಿಎಲ್‌ಒ ಕರ್ತವ್ಯಕ್ಕೆ ನಿಯೋಜಿಸಿರುವ ಶಿಕ್ಷಕರನ್ನು ಸದರಿ ಕರ್ತವ್ಯದಿಂದ ಮುಕ್ತಗೊಳಿಸಬೇಕೆಂದು ಒತ್ತಾಯಿಸಿದರು.
ಪ್ರ.ಕಾರ್ಯದರ್ಶಿ ವೈ.ಹನುಮನಗೌಡ, ಉಪಾಧ್ಯಕ್ಷ ರಾಘವೇಂದ್ರ, ಸಂಘಟನಾ ಕಾರ್ಯದರ್ಶಿ ಹನುಮಂತರೆಡ್ಡಿ, ಎನ್‌ಎಸ್‌ಪಿ ನೌಕರರ ಸಂಘದ ಉಪಾಧ್ಯಕ್ಷ ಎರ‌್ರೆಪ್ಪ, ಶಿಕ್ಷಕರಾದ ಪ್ರಮೋದ್ ಕುಮಾರ್, ಹನುಮಂತಪ್ಪ, ನಾಗರತ್ನಮ್ಮ, ರಾಧ, ಶರಣಮ್ಮ, ಮಲ್ಲಿಕಾರ್ಜುನ ಇತರರಿದ್ದರು.