ಬೆಂಗಳೂರು: 'ಈ ಬಾರಿ 150 ಗುರಿ' ಘೋಷವಾಕ್ಯದಡಿ ಬಿಜೆಪಿ ವಿಜಯ ಸಂಕಲ್ಪ ರಥ ಯಾತ್ರೆಗಳು ಮಾ.1ರಿಂದ 20ರವರೆಗೆ ನಡೆಯಲಿದೆ ಎಂದು ಯಾತ್ರೆ ಸಂಚಾಲಕ, ಸಚಿವ ಸಿ.ಸಿ.ಪಾಟೀಲ್ ಹಾಗೂ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ, ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಮಾಹಿತಿ ನೀಡಿದರು.
ಪಕ್ಷದ ರಾಜ್ಯ ಕಚೇರಿಯಲ್ಲಿ ಜಂಟಿಯಾಗಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಮಾ.1ರ ರಥಯಾತ್ರೆಗೆ ಮಲೆ ಮಹದೇಶ್ವರ ದೇವಸ್ಥಾನದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಮಾ.2ರಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಗದ್ದುಗೆ ಬಳಿ ಕೇಂದ್ರ ಸಚಿವ ರಾಜನಾಥ್ ಸಿಂಗ್, ಮಾ.3 ಹಾಗೂ 4ರ ರಥಯಾತ್ರೆಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಚಾಲನೆ ನೀಡಲಿದ್ದಾರೆ. ನಾಲ್ಕು ತಂಡಗಳು 20 ದಿನಗಳಲ್ಲಿ 8000 ಕಿ.ಮೀ. ಕ್ರಮಿಸಿ 224 ವಿಧಾನಸಭೆ ಕ್ಷೇತ್ರಗಳನ್ನು ತಲುಪಲಿದ್ದು, ಮಾ.25ರೊಳಗೆ ದಾವಣಗೆರೆಯಲ್ಲಿ ಬೃಹತ್ ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪಾಲ್ಗೊಳ್ಳಲಿದ್ದು, 15 ಲಕ್ಷ ಜನರು ಸೇರುವ ನಿರೀಕ್ಷೆಯಿದೆ. ಮುಂದಿನ ಚುನಾವಣೆಗಾಗಿ ಜನರ ಬಳಿಗೆ ಹೋಗುತ್ತಿದ್ದೇವೆ. ಸರ್ಕಾರದ ಸಾಧನೆ ತಿಳಿಸಿ, ಅಭಿವೃದ್ಧಿ ಕಾರ್ಯಗಳ ಅವಲೋಕನ ಮಾಡುತ್ತಾ ಕಾಂಗ್ರೆಸ್ ಮ ಹುಸಿ ಭರವಸೆಗಳ ಹುಳುಕು ಬಯಲುಗೊಳಿಸುತ್ತೇವೆ ಎಂದರು.
ಹಳೇ ಮೈಸೂರು, ಕಿತ್ತೂರು ಹಾಗೂ ಕಲ್ಯಾಣ ಕರ್ನಾಟಕದಲ್ಲಿ ಸಿಂಹಪಾಲು ಸ್ಥಾನಗಳನ್ನು ಗೆಲ್ಲುತ್ತೇವೆ. ಕಾಂಗ್ರೆಸ್ ಗೆ ಸಂಕಷ್ಟ, ಜೆಡಿಎಸ್ ಗೆ ಬಿಜೆಪಿ ಸವಾಲಾಗಲಿದೆ. ಹಳೇ ಮೈಸೂರು ಭಾಗದ ಜನರು ಬಿಜೆಪಿಗೆ ಒಂದು ಅವಕಾಶ ಕೊಟ್ಟು ನೋಡೋಣವೆಂಬ ಚಿಂತನೆ ನಡೆಸಿದ್ದಾರೆ ಎಂದು ಎನ್.ರವಿಕುಮಾರ್ ಹೇಳಿದರು.
ನಮ್ಮ ಹೆಮ್ಮೆ
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಮ್ಮ ಪಕ್ಷದ ಅಗ್ರಮಾನ್ಯ ನಾಯಕ. ನಮ್ಮ ಪಾಲಿನ ಹೆಮ್ಮೆ. ಈ ಚುನಾವಣೆಯಲ್ಲಿ ಅವರನ್ನು ಬಳಸಿಕೊಳ್ಳುವುದಕ್ಕೆ ನಮಗೆ ಯಾವುದೇ ಮುಜುಗರವಿಲ್ಲ. ಎದುರಾಳಿ ಪಾಳೆಯಕ್ಕೆ ನುಗ್ಗಿ ಪಕ್ಷದ ಬಲ ಎರಡರಿಂದ 40, 44 ಸ್ಥಾನಗಳ ಜತೆಗೆ ಎರಡು ಬಾರಿ ಸರಳ ಬಹುಮತ ಸಮೀಪಕ್ಕೆ ತಂದ ಛಾತಿ, ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಹೆಗ್ಗಳಿಕೆ ಅವರದು ಎಂದು ಸಿ.ಸಿ.ಪಾಟೀಲ್ ಉತ್ತರಿಸಿದರು.