ವಿಜಯಪುರ: ವಸತಿ ಯೋಜನೆಯಡಿ ಬಡವರಿಗೆ ಮನೆ ಹಂಚಿಕೆ ಮಾಡಲು ಹಣ ಪಡೆಯುತ್ತಿರುವ ರಾಜ್ಯ ಸರ್ಕಾರದ ಭ್ರಷ್ಟಾಚಾರ ಖಂಡಿಸಿ ಬಿಜೆಪಿ ಕಾರ್ಯಕರ್ತರು ಭಾನುವಾರ ಪ್ರತಿಭಟನೆ ನಡೆಸಿದರು.
ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸಿದರು. ಭ್ರಷ್ಟ ಕಾಂಗ್ರೆಸ್ ಸರ್ಕಾರ ತೊಲಗಲಿ ಎಂದು ಉದ್ಘೋಷಿಸಿದರು.
ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಮಾತನಾಡಿ, ಕಾಂಗ್ರೆಸ್‌ನ ಹಗರಣವನ್ನು ಅದೇ ಪಕ್ಷದ ಶಾಸಕರಿಂದಲೇ ಹೊರಬಿದ್ದಿದೆ. ಆಳಂದ ಶಾಸಕ ಬಿ.ಆರ್. ಪಾಟೀಲರ ಆಡಿಯೋ ವೈರಲ್ ಆಗಿದ್ದು, ಅದರಲ್ಲಿ ವಸತಿ ಯೋಜನೆಯಡಿ ಹಣ ಪಡೆಯುವ ಹಗರಣ ಬಯಲಾಗಿದೆ. ಅಲ್ಲದೇ, ಆಡಿಯೋದಲ್ಲಿರುವ ಸಂಭಾಷಣೆ ತಮ್ಮದೇ ಎಂದು ಖುದ್ದು ಬಿ.ಆರ್. ಪಾಟೀಲರೇ ಒಪ್ಪಿಕೊಂಡಿದ್ದು, ರಾಜ್ಯ ಸರ್ಕಾರವೀಗ ಬೆತ್ತಲೆಯಾಗಿದೆ ಎಂದರು.
ಹಗರಣ, ಭ್ರಷ್ಟಾಚಾರ, ಹದಗೆಟ್ಟ ಕಾನೂನು ಸುವ್ಯವಸ್ಥೆಯಿಂದಾಗಿ ಕಾಂಗ್ರೆಸ್ ಜನಾಕ್ರೋಶಕ್ಕೆ ತುತ್ತಾಗಿದೆ. ಅಧಿಕಾರದಲ್ಲಿರಲು ಇವರಿಗೆ ಯಾವುದೇ ನೈತಿಕತೆ ಇಲ್ಲ. ಐಪಿಎಲ್ ವಿಜಯೋತ್ಸವದ ಮೂಲಕ ಕ್ರೆಡಿಟ್ ಗಳಿಸಿಕೊಳ್ಳಲು ಹೋಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಮಾಯಕರನ್ನು ಬಲಿ ತೆಗೆದುಕೊಂಡಿರುವ ಕಾಂಗ್ರೆಸ್ ಇದೀಗ ಬಡವರಿಗೆ ಮನೆ ಹಂಚಿಕೆ ನೆಪದಲ್ಲಿ ರಕ್ತ ಹೀರಲು ಹೊರಟಿದೆ ಎಂದು ಹರಿಹಾಯ್ದರು.
ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ, ವಸತಿ ಯೋಜನೆಗಳಲ್ಲಿ ಬಡವರಿಗೆ ಮನೆಗಳನ್ನು ನೀಡಲು ಹಣ ಪಡೆಯಲಾಗುತ್ತಿದೆ ಎಂದು ಆಡಳಿತ ಪಕ್ಷದ ಶಾಸಕ ಬಿ.ಆರ್. ಪಾಟೀಲ ಮಾಡಿರುವ ಆರೋಪ ಸತ್ಯವಾಗಿದೆ. ಕಾಂಗ್ರೆಸ್ ಸರ್ಕಾರದ ದುರಾಳಿತಕ್ಕೆ ಜನ ಬೇಸತ್ತಿದ್ದಾರೆ. ಭ್ರಷ್ಟಾಚಾರ ಮಾಡುವುದೇ ಕಾಂಗ್ರೆಸ್ ಸರ್ಕಾರದ ಸಾಧನೆಯಾಗಿದೆ ಎಂದು ಹರಿಹಾಯ್ದರು.
ಅಲ್ಲದೇ, ಈ ಕೂಡಲೇ ಸಿಎಂ ಸಿದ್ದರಾಮಯ್ಯ ಅವರು ವಸತಿ ಸಚಿವರ ರಾಜೀನಾಮೆ ಪಡೆಯಬೇಕೆಂದು ಒತ್ತಾಯಿಸಿದರು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ, ಮುಖಂಡರಾದ ಉಮೇಶ ಕಾರಜೋಳ, ಚಿದಾನಂದ ಚಲವಾದಿ, ಚಂದ್ರಶೇಖರ ಕವಟಗಿ, ರಾಹುಲ್ ಜಾಧವ, ರಾಜಶೇಖರ ಮಗಿಮಠ, ಬಿ.ಆರ್. ಯಂಟಮಾನ, ಕೃಷ್ಣಾ ಗುನ್ಹಾಳಕರ, ವಿಜಯ ಜೋಷಿ ಮತ್ತಿತರರಿದ್ದರು.