ಜಿಲ್ಲೆ

ಬಿಡಿಎನಲ್ಲಿ ಸೈಟ್ ಮುಚ್ಚಿಡುವ ದಂಧೆ: ಬಿಜೆಪಿ ಶಾಸಕರಿಂದಲೇ ಬಯಲು!

ಬೆಂಗಳೂರು: ‘‘ನನಗೆ ಸರ್ಕಾರ ಜಿ ಕೆಟಗರಿ ನಿವೇಶನ ನೀಡಿದೆ, ಆದರೆ ಸೈಟ್ ಸಿಕ್ಕಿಲ್ಲ. ಬಿಡಿಎನಲ್ಲಿ ಅಕ್ರಮ ಹೆಚ್ಚಾಗಿದೆ....’’ ಹೀಗೆ ಅಲವತ್ತುಕೊಂಡವರು ಯಾರೋ ಜನಸಾಮಾನ್ಯರಲ್ಲ.... ರಾಜ್ಯದ ಆಡಳಿತ ಪಕ್ಷದ ಶಾಸಕರು! ಅಷ್ಟೇ ಅಲ್ಲ, ಅವರೇ ಈಗ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರು ಕೂಡ!

‘‘ಬೆಂಗಳೂರಲ್ಲಿ ಫೇಕ್ ಡಾಕ್ಯುಮೆಂಟ್ ಕಾರುಬಾರು ಹೆಚ್ಚಾಗಿದೆ. ಇಂಥವರ ವಿರುದ್ಧ ಗೂಂಡಾ ಕಾಯ್ದೆ ಹಾಕಬೇಕು. ಕೆಎಚ್‌ಬಿಯಲ್ಲಿ ಎಷ್ಟು ನಿವೇಶನ ಖಾಲಿ ಇದೆ ಎಂದು ಪತ್ತೆ ಮಾಡಿಸಿದಾಗ 76 ನಿವೇಶನ ಕಂಡುಬಂದವು. ಅಧಿಕಾರಿಗಳನ್ನು ಕೇಳಿದರೆ ಯಾವುದೇ ಸೈಟ್ ಖಾಲಿ ಇಲ್ಲ ಎಂದು ಹೇಳಿದ್ದರು. ತ್ಯಾಜ್ಯ ಹಾಕಿ ಸೈಟ್ ಮುಚ್ಚಿಟ್ಟದ್ದರು. ಬಿಡಿಎನಲ್ಲೂ ಇದೇ ಕತೆ ಇದೆ’’ ಎಂದು ಕೆಎಚ್‌ಬಿ ಅಧ್ಯಕ್ಷರೂ ಆಗಿರುವ ಬಿಜೆಪಿಯ ಶಾಸಕ ಆರಗ ಜ್ಞಾನೇಂದ್ರ ವಿಧಾನಸಭೆಯಲ್ಲಿ ಮಂಗಳವಾರ ಗಮನ ಸೆಳೆದರು. ‘‘ಅಕ್ರಮದ ಬಗ್ಗೆ ಕೆಎಚ್‌ಬಿ ಇಂಜಿನಿಯರ್ ದೂರು ಕೊಡಲು ಹೋದರೆ ಪೊಲೀಸರು ದೂರು ಸ್ವೀಕರಿಸದೆ ದಬಾಯಿಸಿ ಕಳಿಸುತ್ತಾರೆ, ಇದೊಂದು ದೊಡ್ಡ ರ‍್ಯಾಕೆಟ್’’ ಎಂದು ಕಳವಳ ವ್ಯಕ್ತಪಡಿಸಿದರು.

ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಮಾತನಾಡಿ, ‘‘ಇತ್ತೀಚೆಗೆ ನಿಧನರಾದ ಮಾಜಿ ಸಚಿವ ಮನಗೂಳಿ ಕೆಲವು ದಿನಗಳ ಹಿಂದೆ ಬಿಡಿಎಗೆ ಬಂದಿದ್ದರು. 20 ವರ್ಷದ ಹಿಂದೆ ಸೈಟ್ ಮಂಜೂರಾಗಿತ್ತು, ಬಳಿಕ ಬದಲಿ ನಿವೇಶನ ಕೊಡುತ್ತೇವೆ ಅಂತ ಹೇಳಿದರೂ ಕೊಟ್ಟಿಲ್ಲ ಅಂತ ಹೇಳಿಕೊಂಡಿದ್ದರು. ಅದೇ ರೀತಿ ಎಂಎಲ್ಸಿ ಕೆ.ಸಿ.ಕೊಂಡಯ್ಯ 18 ವರ್ಷಗಳಷ್ಟು ದೀರ್ಘ ಕಾಲ ಬಿಡಿಎಗೆ ಅಲೆದಾಡಿದ್ದಾರೆ. ಅವರಿಗೂ ಸೈಟ್ ಕೊಡಲಾಗಿಲ್ಲ’’ ಎಂದು ಅಲ್ಲಿನ ಪರಿಸ್ಥಿತಿಯನ್ನು ವಿವರಿಸಿದರು.