ಜಿಲ್ಲೆ

ಆಯುಷ್ಮಾನ್ ಯೋಜನೆ ಜಾರಿ ಮಾಡದೆ ವಂಚನೆ : ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಆರೋಪ

ಸೌಮ್ಯ ಆರ್

ಮಂಜೇಶ್ವರ: ಕೇಂದ್ರ ಜಾರಿಗೆ ತಂದಿರುವ ಆಯುಷ್ಮಾನ್ ಆರೋಗ್ಯ ಯೋಜನೆಯನ್ನು ಕೇರಳ ಸರ್ಕಾರ ಜಾರಿ ಮಾಡದೆ ಬಡವರನ್ನು ವಂಚಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಆರೋಪಿಸಿದರು.

ಬುಧವಾರ ವರ್ಕಾಡಿಯಲ್ಲಿ ನಡೆದ ಬಿಜೆಪಿ ಮಂಜೇಶ್ವರ ಮಂಡಲ ಸದಸ್ಯತ್ವ ಅಭಿಯಾನ ಹಾಗೂ ಪಂಡಿತ್ ದೀನದಯಾಳ್ ಜನ್ಮ ಜಯಂತಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ದೆಹಲಿ, ಕರ್ನಾಟಕ, ತಮಿಳ್ನಾಡುಗಳಂತೆಯೇ ಕೇರಳದಲ್ಲೂ ಭ್ರಷ್ಟಾಚಾರ, ಹಿಂದು ವಿರೋಧಿ ನೀತಿ, ಓಲೈಕೆ ರಾಜಕಾರಣ ನಡೆಯುತ್ತಿದೆ. ಕೇರಳದಲ್ಲಿ ಪ್ರಳಯ ಬಂದರೂ, ಪ್ರಾಕೃತಿಕ ವಿಕೋಪ ಉಂಟಾದರೂ ರಾಜ್ಯ ಸರ್ಕಾರ ಅದರ ಹೆಸರಲ್ಲಿ ಲಾಭ ಗಳಿಸುವ ಕುತ್ಸಿತ ಮನೋಸ್ಥಿತಿ ಹೊಂದಿದೆ. ಕೇರಳ ಎಡರಂಗಕ್ಕೆ ಆರ್ಥಿಕ ಮೂಲವಾಗಿರುವ ಏಕೈಕ ರಾಜ್ಯ. ಇಲ್ಲಿಯ ಭ್ರಷ್ಟಾಚಾರ ಶೀಘ್ರ ಹೊರಬರಲಿದೆ ಎಂದರು.

ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ್ ರೈ, ಕಾರ್ಯದರ್ಶಿ ಮಣಿಕಂಠ ರೈ, ಮುಖಂಡರಾದ ಕೋಳಾರು ಸತೀಶ್ಚಂದ್ರ ಭಂಡಾರಿ, ಹರಿಶ್ಚಂದ್ರ ಎಂ, ದೂಮಪ್ಪ ಶೆಟ್ಟಿ, ಪದ್ಮಾವತಿ, ತುಳಸಿ ಕುಮಾರಿ, ಗೋಪಾಲ್ ಶೆಟ್ಟಿ, ಲೋಕೇಶ್ ನೋಂಡ, ಯಾದವ ಬಡಾಜೆ, ರಕ್ಷಣ ಅಡಕಳ, ರವಿರಾಜ್, ಯತಿರಾಜ್ ಶೆಟ್ಟಿ, ಭಾಸ್ಕರ್ ಪೊಯ್ಯೆ, ಚಂದ್ರಹಾಸ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.