ಜಿಲ್ಲೆ

ಪಿಸ್ತೂಲ್ ತೋರಿಸಿ ಬೆದರಿಸಿದ ಬಿಜೆಪಿ ಮುಖಂಡ; ಎಗ್​ರೈಸ್​ ಅಂಗಡಿ ವಿಚಾರಕ್ಕೆ ಜಗಳ

Webdesk - Ravikanth

ಧಾರವಾಡ: ಎಗ್​ರೈಸ್ ಅಂಗಡಿ ಇಡುವ ವಿಚಾರಕ್ಕೆ ನಡೆದ ಜಗಳದಲ್ಲಿ ಬಿಜೆಪಿ ಮುಖಂಡನೊಬ್ಬ ಪಿಸ್ತೂಲ್ ತೋರಿಸಿ ಬೆದರಿಸಿದ ಪ್ರಕರಣವೊಂದು ನಡೆದಿದೆ.

ಬಿಜೆಪಿ ಮುಖಂಡ ನಾಗಪ್ಪ ಗಾಣಿಗೇರ ಎಂಬಾತ ಪಿಸ್ತೂಲ್ ತೋರಿಸಿ ಬೆದರಿಸಿದ್ದಾಗಿ, ಮಡಿವಾಳೆಪ್ಪ ಬೆಳವಲದ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ. ಧಾರವಾಡ ತಾಲೂಕಿನ ಹೊಸ ತೆಗೂರ‌ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಎಗ್​ರೈಸ್​ ಅಂಗಡಿ ಇಡುವ ವಿಷಯವಾಗಿ ನಾಗಪ್ಪ ಗಾಣಿಗೇರ ಮತ್ತು ಮಲಿಕ್ ಮಧ್ಯೆ ತಕರಾರಿತ್ತು. ಇವರಿಬ್ಬರ ಜಗಳವನ್ನು ಬಗೆಹರಿಸುವ ಸಲುವಾಗಿ ಹಿರಿಯರಾದ ಮಡಿವಾಳೆಪ್ಪ ಬೆಳವಲದ ಮಧ್ಯಸ್ಥಿಕೆ ವಹಿಸಿದ್ದರು.

ಜಗಳ‌ ಬಗೆಹರಿಸಲು ಮಧ್ಯಸ್ಥಿಕೆ ವಹಿಸಿರುವ ಮಡಿವಾಳೆಪ್ಪ ವಿರುದ್ಧ ದ್ವೇಷ ಹೊಂದಿದ್ದ ನಾಗಪ್ಪ, ಪಿಸ್ತೂಲ್ ತೋರಿಸಿ ಜೀವಬೆದರಿಕೆ ಒಡ್ಡಿದ್ದ ಎನ್ನಲಾಗಿದೆ. ಈ ಸಂಬಂಧ ಗರಗ ಪೊಲೀಸ್ ಠಾಣೆಯಲ್ಲಿ ಮಡಿವಾಳೆಪ್ಪ ದೂರು ನೀಡಿದ್ದಾರೆ.