ಜಿಲ್ಲೆ

ಕರೊನಾ ನಿಯಮ ಪಾಲಿಸದೇ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ಜಿಲ್ಲಾ ನಾಯಕರು

reporterctd

ಚಿತ್ರದುರ್ಗ : ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆ ವೇಳೆ ತಟಸ್ಥ ನೀತಿ ಅನುಸುರಿಸುತ್ತಿರುವ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರ ನಡೆಯನ್ನು ಪಕ್ಷದ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲ್ ಗಮನಿಸಿದ್ದಾರೆ. ಅವರೇ ಶಾಸಕರ ವಿಷಯಕ್ಕೆ ಸಂಬಂಧಿಸಿದಂತೆ ಸೂಕ್ತ ನಿರ್ಣಯವನ್ನೂ ಕೈಗೊಳ್ಳಲಿದ್ದಾರೆಂದು ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಸುದ್ದಿಗೋಷ್ಠಿ ಸಂದರ್ಭದಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಧರಿಸದಿರುವುದು ಸೇರಿ ಕರೊನಾ ನಿಯಮಗಳಾವುದನ್ನೂ ಪಾಲಿಸದೇ ಇರುವುದು ಗಮನಸೆಳೆಯಿತು. 

ಬಂಡಾಯ ಸ್ಪರ್ಧಿ ಡಿ.ಟಿ.ಶ್ರೀನಿವಾಸ್ ಪಕ್ಷದಿಂದ ಉಚ್ಛಾಟನೆಯಾಗಿದ್ದಾರೆ. ಪಕ್ಷದ ಅಭ್ಯರ್ಥಿ ಚಿದಾನಂದ ಗೌಡ ಹಾಗೂ ಶಿರಾ ವಿಧಾನಸಭೆ ಉಪ ಚುನಾವಣೆ ಅಭ್ಯರ್ಥಿ ಡಾ.ರಾಜೇಶ್‌ಗೌಡರನ್ನು ಸಮಾಜ ಶೇ.100 ಬೆಂಬಲಿಸಿದೆ. ರಾಜ್ಯಕಾಡುಗೊಲ್ಲರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕಾಡುಗೊಲ್ಲರನ್ನು ಎಸ್‌ಟಿಗೆ ಸೇರಿಸಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಮಾಜ ಬಿಜೆಪಿಯ ಪರವಾಗಿದ್ದು,ಈಗ ಎದುರಾಗಿರುವ ಚುನಾವಣೆಗಳಲ್ಲಿ ಯಡಿಯೂರಪ್ಪರ ಅವರ ಕೈ ಬಲಪಡಿಸಲಿದೆ ಎಂದರು.

ಸಮಾಜದ ಹಿರಿಯ ಮುಖಂಡ ಮೀಸೆ ಮಹಾಲಿಂಗಪ್ಪ ಮಾತನಾಡಿ,1830ರಿಂದಲೂ ಕಾಡುಗೊಲ್ಲರನ್ನು ಎಸ್‌ಟಿಗೆ ಸೇರಿಸಬೇಕೆಂಬ ಬೇಡಿಕೆ ಇದೆ. ರಾಜ್ಯದಲ್ಲಿ ಹಿಂದಿದ್ದ ಬಿಜೆಪಿ ಆಡಳಿತಾವಧಿಯಲ್ಲಿ, ಅದೂವರೆಗೂ ಸಾಧ್ಯವಾಗದಿದ್ದ ಸಮಾಜದ ಕುಲಶಾಸ್ತ್ರೀಯ ಅಧ್ಯಯ ನಕ್ಕಾಗಿ ಯಡಿಯೂರಪ್ಪ ಹಾಗೂ ಅಂದಿನ ಸಮಾಜ ಕಲ್ಯಾಣ ಸಚಿವ ಎ.ನಾರಾಯಣ ಸ್ವಾಮಿ ನಾಂದಿ ಹಾಡಿದ್ದರು. ನಮ್ಮ ಸಮಾಜ ಎಸ್‌ಟಿಗೆ ಸೇರ್ಪಡೆಯಾಗಲಿದ್ದು,ಈ ನಿಟ್ಟಿನಲ್ಲಿ ನಮಗೆ ಬಿಜೆಪಿ ನಾಯಕರ ಮೇಲೆ ಭರವಸೆ ಇದೆ ಎಂದರು.

ಕೊಟ್ಟ ಮಾತಿಗೆ ಬಿಎಸ್‌ವೈ ತಪ್ಪಲ್ಲ : ಜಿಪಂ ಸದಸ್ಯ ಜಿ.ಟಿ.ಅಜ್ಜಪ್ಪ ಮಾತನಾಡಿ,ಯಡಿಯೂರಪ್ಪ ಕೊಟ್ಟ ಮಾತನ್ನು ಎಂದೂ ತಪ್ಪುವುದಿಲ್ಲ. ನಾನು ಒಬ್ಬ ಪೊಲೀಸ್ ಅಧಿಕಾರಿ ಯಾಗಿಯೂ ಅವರನ್ನು ಹತ್ತಿರದಿಂದ ನೋಡಿದ್ದೇನೆ. ನಮ್ಮ ಬೇಡಿಕೆ ಎಸ್‌ಟಿಗೆ ಸೇರಿಸ ಬೇಕೆಂಬುದೇ ವಿನಾ ಯಾವ ಸಮುದಾಯದ ವಿರುದ್ಧವೂ ನಾವಿಲ್ಲವೆಂದರು. 

ರಾಜ್ಯಕಾಡುಗೊಲ್ಲ ಎಸ್‌ಟಿ ಹೋರಾಟ ಸಮಿತಿ ಅಧ್ಯಕ್ಷ ಸಿದ್ದೇಶ್‌ ಯಾದವ್ ಮಾತನಾಡಿ, ಕಾಡುಗೊಲ್ಲರನ್ನು ಜಾತಿ ಪಟ್ಟಿಗೆ ಸೇರಿಸಿ ರು ವುದರಿಂದಾಗಿ ಎಸ್‌ಟಿ ಸೇರ್ಪಡೆ ಹಾದಿ ಸುಗಮವಾಗಿದೆ. ನಮ್ಮ ಸಮುದಾಯವನ್ನು ಮುಖ್ಯವಾಹಿನಿಗೆ ತರಲು ಬಿಜೆಪಿ ಪ್ರಯತ್ನಿಸಿದೆ. ಆದ್ದರಿಂದ ಈಗಿನ ಚುನಾವಣೆಗಳಲ್ಲ್ಲಿ ಮತ್ಯಾರನ್ನೋ ಬೆಂಬಲಿಸುವ ಪ್ರಶ್ನೆಯೇ ಉದ್ಬವಿಸದೆಂದರು.

ಬಿಜೆಪಿ ರೈತ ಮೋರ್ಚಾದ ಜಿಲ್ಲಾಧ್ಯಕ್ಷ ವೆಂಕಟೇಶ್‌ಯಾದವ್, ಎನ್.ಆರ್.ಲಕ್ಷ್ಮೀಕಾಂತ್, ವಿಶ್ಚನಾಥ್, ಆನಂದ್, ಪ್ರೇಂ ಕುಮಾರ್, ರಂಗಸ್ವಾಮಿ, ಬಸವರಾಜ್, ಜಯಣ್ಣ, ಬಾಲಕೃಷ್ಣ, ಚಿತ್ತಯ್ಯ, ವೀರಣ್ಣ, ತಿಮ್ಮರಾಯಪ್ಪ ಮತ್ತಿತರ ಮುಖಂಡರಿದ್ದರು.