ಬೆಂಗಳೂರು : ಬಿಟ್ ಕಾಯಿನ್ ವ್ಯವಹಾರದಲ್ಲಿ ಹೆಚ್ಚಿನ ಲಾಭಾಂಶ ಸಿಗುವುದಾಗಿ ಆಮಿಷವೊಡ್ಡಿ ಅಮಾಯಕ ವ್ಯಕ್ತಿಗೆ 5 ಲಕ್ಷ ರೂ. ಪಡೆದು ಸೈಬರ್ ಕಳ್ಳರು ವಂಚನೆ ಮಾಡಿದ್ದಾರೆ. ವೈಟ್‌ಫೀಲ್ಡ್ ಸಮೀಪದ ಸಿದ್ದಾಪುರದ ನಂದೀಶ್‌ಬಾಬು ವಂಚನೆಗೆ ಒಳಗಾದವರು. ಇವರು ನೀಡಿದ ದೂರಿನ ಮೇರೆಗೆ ಅಪರಿಚಿತ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ವೈಟ್‌ಫೀಲ್ಡ್ ವಿಭಾಗದ ಸಿಇಎನ್ ಪೊಲೀಸರು ತಿಳಿಸಿದ್ದಾರೆ.
2019ರಲ್ಲಿ ಜೂನ್‌ನಲ್ಲಿ ನಂದೀಶ್‌ಗೆ ಫೇಸ್‌ಬುಕ್‌ನಲ್ಲಿ ಸೈಬರ್ ವಂಚಕ ಪರಿಚಯವಾಗಿದ್ದು, ಬಿಟ್ ಕಾಯಿನ್ ಗ್ರೂಪ್‌ನಿಂದ ಸಂಪರ್ಕ ಮಾಡುತ್ತಿರುವುದಾಗಿ ಪರಿಚಯ ಮಾಡಿಕೊಂಡಿದ್ದಾನೆ. ವಾಟ್ಸ್‌ಆ್ಯಪ್‌ನಲ್ಲಿ ಚಾಟ್ ಮಾಡಿಕೊಂಡು ಬಿಟ್ ಕಾಯಿನ್‌ನಲ್ಲಿ ಹೂಡಿಕೆ ಮಾಡುವಂತೆ ಪುಸಲಾಯಿಸಿದ್ದ. ಇದನ್ನು ನಂಬಿದ ನಂದೀಶ್, ಒಪ್ಪಿಗೆ ಸೂಚಿಸಿದ್ದಾಗ ಆತನ ಹೆಸರಿನಲ್ಲಿ ವಂಚಕ ಖಾತೆ ತೆರೆದಿರುವುದಾಗಿ ಹೇಳಿ ತನ್ನ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿಕೊಂಡಿದ್ದಾನೆ. ವಂಚಕ ಕೊಟ್ಟ ಬಿಟ್ ಕಾಯಿನ್ ಖಾತೆ ತೆರೆದು ನೋಡಿದಾಗ ಡ್ಯಾಶ್ ಬೋರ್ಡ್‌ನಲ್ಲಿ ನಂದೀಶ್ ಹೆಸರಿಗೆ 20 ಸಾವಿರ ಅಮೆರಿಕನ್ ಡಾಲರ್ ಲಾಭಾಂಶ ಬಂದಿರುವುದಾಗಿ ಪ್ರದರ್ಶನಗೊಂಡಿದೆ.
ಕೆಲವೇ ಗಂಟೆಗಳಿಗೆ ನೈಜೀರಿಯಾ ಪ್ರಜೆ, ದೂರುದಾರನ ಮೊಬೈಲ್‌ಗೆ ಕರೆ ಮಾಡಿ 20 ಸಾವಿರ ಅಮೆರಿಕಾನ್ ಡಾಲರ್ ಬಿಟ್ ಕಾಯಿನ್‌ನಿಂದ ಲಾಭಾಂಶ ಬಂದಿದೆ. ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುತ್ತಿದ್ದೆವೆ. ಅದಕ್ಕೂ ಮೊದಲು ನೈಜೀರಿಯಾ ದೇಶಕ್ಕೆ ತೆರಿಗೆ ಪಾವತಿಸುವಂತೆ ಹೇಳಿ ಆತ ಸಹ ನಂದೀಶ್ ಕಡೆಯಿಂದ ಹಣ ವರ್ಗಾವಣೆ ಮಾಡಿಕೊಂಡಿದ್ದಾನೆ. ಇದಾದ ಮೇಲೆ ದಿನಗಳೇ ಕಳೆದರೂ ನಂದೀಶ್ ಬ್ಯಾಂಕ್ ಖಾತೆಗೆ ಯಾವುದೇ ಹಣ ಬಂದಿಲ್ಲ. ಕೊನೆಗೆ ವಂಚಕರಿಂದ 5 ಲಕ್ಷ ರೂ. ಮೋಸ ಹೋಗಿರುವುದು ಗೊತ್ತಾಗಿ ದೂರು ನೀಡಿದ್ದಾರೆ. ಈ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್ಗಾಗಿ ನಮ್ಮ ಫೇಸ್ಬುಕ್ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..