ಕಾರವಾರ ಶ್ರೀ ರಾಮ ಮಂದಿರ ನಿರ್ಮಾಣಕ್ಕಾಗಿ ಹೋರಾಡಿದ ಕರ ಸೇವಕ ಹುಬ್ಬಳ್ಳಿಯ ಶ್ರೀಕಾಂತ ಪೂಜಾರಿ ಬಂಧನ ಖಂಡಿಸಿ ಕಾರವಾರದ ನೇತಾಜಿ ಸುಭಾಷ್ ಸರ್ಕಲ್‌ನಲ್ಲಿ ಬಿಜೆಪಿ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಶಾಸಕ ದಿನಕರ ಶೆಟ್ಟಿ ಮಾತನಾಡಿ, ಆರ್ಟಿಕಲ್ 370 ರದ್ದು ಮಾಡಲಾಗುವುದು ಹಾಗೂ ರಾಮ ಮಂದಿರ ನಿರ್ಮಾಣ ಮಾಡಲಾಗುವುದು ಎಂದು ಈ ಹಿಂದೆ ಕೇಂದ್ರ ಘೋಷಣೆ ಮಾಡಿತ್ತು. ಅದರಂತೆ ನಡೆದುಕೊಂಡಿದೆ. ರಾಮ ಮಂದಿರ ನಿರ್ಮಾಣವಾಗುತ್ತಿದೆ. ಕೋಟ್ಯಂತರ ಭಾರತೀಯರ ಕನಸು ನನಸಾಗುತ್ತಿದೆ. ಆದರೆ, ಅದನ್ನು ಸಹಿಸದ ರಾಜ್ಯ ಕಾಂಗ್ರೆಸ್ ಸರ್ಕಾರ ರಾಮ ಮಂದಿರ ಕರ ಸೇವಕರ 31 ವರ್ಷದ ಹಿಂದಿನ ಪ್ರಕರಣವನ್ನು ಇಟ್ಟುಕೊಂಡು ಬಂಧನಕ್ಕೆ ಹೊರಟಿರುವುದು ಖಂಡನೀಯ ಎಂದರು.
ಮಾಜಿ ಶಾಸಕ ಸುನೀಲ ಹೆಗಡೆ ಮಾತನಾಡಿ, ರಾಮ ಮಂದಿರಕ್ಕಾಗಿ ಭಾರತೀಯರು 500 ವರ್ಷ ಹೋರಾಟ ಮಾಡಬೇಕಾಯಿತು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಲಕ್ಷಾಂತರ ಸಾಧು, ಸಂತರು, ಕರ ಸೇವಕರ ಮೇಲೆ ಲಾಠಿ ಚಾರ್ಜ್, ಕೆಲವರ ಮೇಲೆ ಗೋಲಿ ಬಾರ್ ಮಾಡಲಾಯಿತು.
ಈಗ ರಾಮ ಮಂದಿರ ಉದ್ಘಾಟನೆಯ ಎದುರು ಕರ ಸೇವಕರನ್ನು ಬಂಧಿಸುವ ಮೂಲಕ ಕಾಂಗ್ರೆಸ್ ಹಿಂದು ವಿರೋಧಿ, ಸನಾತನ ಧರ್ಮ ವಿರೋಧಿ ಸರ್ಕಾರ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ. ಸಿದ್ದರಾಮಯ್ಯ ಅವರ ಹೆಸರಲ್ಲೇ ರಾಮ ಇದ್ದಾನೆ. ಅವರು ಪೆದ್ದರಾಮಯ್ಯನಾಗದೇ ಪ್ರಬುದ್ಧ ರಾಮಯ್ಯನಾಗಲಿ ಎಂದು ಲೇವಡಿ ಮಾಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಬಂಧನಕ್ಕೊಳಗಾದ ಶ್ರೀಕಾಂತ ಪೂಜಾರಿ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ಜಿಲ್ಲಾ ವಕ್ತಾರ ನಾಗರಾಜ ನಾಯಕ ಮಾತನಾಡಿ, ಗಾಂಧಿ ಕುಟುಂಬ ಮೆಚ್ಚಿಸಲು ಕರ್ನಾಟಕ ಕಾಂಗ್ರೆಸ್ ಸರ್ಕಾರ ಇಡೀ ಹಿಂದು ಧರ್ಮಕ್ಕೆ ಅನ್ಯಾಯ ಮಾಡುತ್ತಿದೆ ಎಂದರು. ರಾಜ್ಯ ಒಬಿಸಿ ಮೋರ್ಚಾ ಸದಸ್ಯ ರಾಜೇಂದ್ರ ನಾಯ್ಕ, ಬಿಜೆಪಿ ಮಂಡಲ ಅಧ್ಯಕ್ಷರಾದ ನಾಗೇಶ ಕುರ್ಡೇಕರ್, ಸಂಜು ನಾಯ್ಕ ಇತರರು ಇದ್ದರು.
ಇದನ್ನೂ ಓದಿ: ನೃತ್ಯ ಮಾಡಿ ಹೊಸ ವರ್ಷ ಸ್ವಾಗತಿಸಿದ ಸತೀಶ ಸೈಲ್