ಬೆಂಗಳೂರು: ನಗರದ ಅವ್ಯವಸ್ಥೆಯ ವಿರುದ್ಧ ಮತ್ತೊಮ್ಮೆ ಧ್ವನಿ ಎತ್ತಿರುವ ಬಯೋಕಾನ್ ಸಂಸ್ಥೆಯ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ( Kiran Mazumdar Shaw ), ತಮ್ಮ ಟ್ವೀಟ್ ಸಮರವನ್ನು ಮುಂದುವರಿಸಿದ್ದಾರೆ. ಹಿಂದಿನ ಸರ್ಕಾರಗಳು ಕ್ರಮ ಕೈಗೊಳ್ಳದಿದ್ದಕ್ಕೆ ನಾವಿಂದು ಈ ಪರಿಸ್ಥಿತಿಯಲ್ಲಿದ್ದೇವೆ. ಆ ತಪ್ಪನ್ನು ಸರಿಪಡಿಸುವ ಅವಕಾಶ ಇದೀಗ ನಿಮ್ಮದಾಗಿದೆ ಎಂದು ಕಾಂಗ್ರೆಸ್ ಸರ್ಕಾರಕ್ಕೆ ಹೇಳಿದ್ದಾರೆ.
ಮೊನ್ನೆ (ಅ.13) ಕಿರಣ್ ಮಜುಂದಾರ್ ಶಾ ಅವರು ಮಾಡಿದ ಟ್ವೀಟ್ಗೆ ಕಾಂಗ್ರೆಸ್ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಪದೇಪದೆ ಬೆಂಗಳೂರಿನ ಮೂಲ ಸೌಕರ್ಯಗಳ ಬಗ್ಗೆ ಮಾತನಾಡುತ್ತಿರುವ ಅವರ ಉದ್ದೇಶವಾದರೂ ಏನು ಎಂದು ಸಚಿವ ಎಂ.ಬಿ. ಪಾಟೀಲ್ ಅಸಮಾಧಾನ ಹೊರಹಾಕಿದ್ದರು. ಅದೇ ರೀತಿ ಪ್ರಿಯಾಂಕ್ ಖರ್ಗೆ ಅವರು, ಕಿರಣ್ ಮಜುಂದಾರ್ ಶಾ ಬೆಂಗಳೂರಿನ ಯಾವ ಭಾಗ ನೋಡಿದ್ದಾರೆಂದು ನನಗೆ ತಿಳಿದಿಲ್ಲ ಎಂದಿದ್ದರು. ಸಂತೋಷ್ ಲಾಡ್ ಕೂಡ ಪ್ರತಿಕ್ರಿಯಿಸಿದ್ದು, ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ ಅವರು ಟ್ವೀಟ್ ಮಾಡಿದ್ದನ್ನು ನೋಡಿದ್ದೇನೆ. ಅದೇ ರೀತಿ ಜಿಎಸ್ಟಿಯಂತಹ ಸಮಸ್ಯೆಗಳ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ಪೋಸ್ಟ್ ಮಾಡುತ್ತಾರಾ ಎಂದು ಪ್ರಶ್ನೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕಿರಣ್ ಮಜುಂದಾರ್ ಶಾ ಅವರು ಟ್ವೀಟ್ ಮೂಲಕವೇ ತಿರುಗೇಟು ನೀಡಿದ್ದಾರೆ.
ಹಿಂದಿನ ಸರ್ಕಾರಗಳು ಸಕಾಲದಲ್ಲಿ ಕ್ರಮ ಕೈಗೊಳ್ಳದ ಕಾರಣ ನಾವು ಈ ಸಂಕಷ್ಟದ ಪರಿಸ್ಥಿತಿಯಲ್ಲಿದ್ದೇವೆ. ದಶಕಗಳಿಂದ ಹದಗೆಡುತ್ತಿರುವ ಮೂಲಸೌಕರ್ಯ ಮತ್ತು ಕಸ ನಿರ್ವಹಣೆಯನ್ನು ಸರಿಪಡಿಸಲು ಈ ಸರ್ಕಾರಕ್ಕೆ ಈಗ ಅವಕಾಶವಿದೆ. ನಾನಿಲ್ಲಿ ಬಯಸುತ್ತಿರುವುದು ಕಸ ತೆರವು ಮತ್ತು ರಸ್ತೆ ದುರಸ್ತಿ ಮಾತ್ರ. ಇದನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮಾಡಬೇಕಾಗಿದೆ. ಕಳಪೆ ಮತ್ತು ನಿಧಾನಗತಿಯ ಕೆಲಸಕ್ಕೆ ಸರ್ಕಾರಿ ಸಚಿವರನ್ನೇ ಹೊಣೆಗಾರರನ್ನಾಗಿ ಮಾಡಬೇಕು. ಇಲ್ಲಿ ಸರ್ಕಾರ ಮತ್ತು ನಾಗರಿಕರು ಒಂದೇ ಪುಟದಲ್ಲಿರಬೇಕು. ಇಲ್ಲಿ ಕಸ ಮಾಫಿಯಾ ತಮ್ಮ ಕೆಲಸವನ್ನು ಮಾಡದಿದ್ದರೆ ನಾವು ಸುಮ್ಮನಿರುವುದಿಲ್ಲ ಎಂದು ಖಡಕ್ ಉತ್ತರವನ್ನು ನೀಡಿದ್ದಾರೆ.
ಬಯೋಕಾನ್ ಪಾರ್ಕ್‌ಗೆ ಭೇಟಿ ನೀಡಿದ ವಿದೇಶಿ ಉದ್ಯಮಿಯೊಬ್ಬರು, ಬೆಂಗಳೂರಿನ ರಸ್ತೆಗಳು ಏಕೆ ಇಷ್ಟೊಂದು ಕೆಟ್ಟದಾಗಿವೆ? ಮತ್ತು ಸುತ್ತಲೂ ಇಷ್ಟೊಂದು ಕಸ ಏಕೆ ಬಿದ್ದಿದೆ? ಇಲ್ಲಿನ ಸರ್ಕಾರ ಹೂಡಿಕೆಯನ್ನು ಬೆಂಬಲಿಸಲು ಬಯಸುತ್ತಿಲ್ಲವೇ? ಎಂದು ಪ್ರಶ್ನೆ ಮಾಡಿದರು. ಅಲ್ಲದೆ, ನಾನು ಚೀನಾದಿಂದ ಬಂದಿದ್ದೇನೆ ಮತ್ತು ಇಲ್ಲಿನ ವಾತಾವರಣ ತುಂಬಾ ಅನುಕೂಲಕರವಾಗಿದ್ದಾಗ ಭಾರತ ಮಾತ್ರ ಏಕೆ ತನ್ನ ಕ್ರಮವನ್ನು ತೆಗೆದುಕೊಳ್ಳುತ್ತಿಲ್ಲ ಎಂಬುದು ನನಗೆ ಅರ್ಥವಾಗುತ್ತಿಲ್ಲ? ಎಂದರು ಎಂದು ಕಿರಣ್ ಮಜುಂದಾರ್ ಶಾ ಅವರು ಟ್ವೀಟ್ ಮಾಡಿದ್ದಾರೆ. ಅಲ್ಲದೆ, ತಮ್ಮ ಟ್ವೀಟ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಟ್ಯಾಗ್ ಮಾಡಿದ್ದರು.
ಕಿರಣ್ ಮಜುಂದಾರ್ ಶಾ ಅವರ ಟ್ವೀಟ್ ಸರ್ಕಾರದ ಗಮನಕ್ಕೆ ಬಂದಿದ್ದು, ಈ ಬಗ್ಗೆ ಸಚಿವ ಎಂಬಿ ಪಾಟೀಲ್ ಪ್ರತಿಕ್ರಿಯಿಸಿದರು. ರಸ್ತೆ ಗುಂಡಿಗಳು ಸೇರಿದಂತೆ ಇನ್ನಿತರ ಸಮಸ್ಯೆಗಳ ಬಗ್ಗೆ ಸರ್ಕಾರ ಈಗಾಗಲೇ ಕ್ರಮಕೈಗೊಂಡಿದೆ. ದುರಸ್ತಿ ಕಾರ್ಯ ನಡೆಯುತ್ತಿದ್ದು, ಸರ್ಕಾರಕ್ಕೆ ಸ್ವಲ್ಪ ಸಮಯ ಬೇಕಿದೆ. ನಾವು 1000 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಗುಂಡಿ ಮುಚ್ಚುವ ಕೆಲಸ ಮಾಡುತ್ತಿದ್ದೇವೆ ಎಂದರು. ಅಲ್ಲದೆ, ಕಿರಣ್ ಮಜುಂದಾರ್ ಶಾ ಅವರ ವಿರುದ್ಧ ಅಸಮಧಾನ ಹೊರಹಾಕಿದ ಎಂಬಿಪಿ, ಬೆಂಗಳೂರು ಅವರಿಗೆ ಎಲ್ಲವನ್ನು ನೀಡಿದೆ. ಆದರೆ, ಪದೇಪದೆ ಬೆಂಗಳೂರಿನ ಮೂಲ ಸೌಕರ್ಯಗಳ ಬಗ್ಗೆ ಮಾತನಾಡುತ್ತಿರುವ ಅವರ ಉದ್ದೇಶವಾದರೂ ಏನು? ಮಳೆಗಾಲದಿಂದಾಗಿ ರಸ್ತೆ ಗುಂಡಿ ಸಮಸ್ಯೆ ಎದುರಾಗಿದೆ. ಶೀಘ್ರದಲ್ಲೇ ಎಲ್ಲವನ್ನು ಸರಿಪಡಿಸಲಾಗುವುದು. ಬಿಜೆಪಿ ಸರ್ಕಾರವಿದ್ದಾಗ ಅವರೇನು ಮಾಡಿದ್ದಾರೆ ಎಂದು ಪ್ರಶ್ನಿಸುವ ಮೂಲಕ ಎಂಬಿಪಿ ಆಕ್ರೋಶ ಹೊರಹಾಕಿದರು.
ಇನ್ನು ಸರ್ಕಾರದ ವಿರುದ್ಧ ಬಿಜೆಪಿ ನಾಯಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ ಅವರು ಕಿಡಿಕಾರಿದ್ದಾರೆ. ಎಲ್ಲವನ್ನು ಸರಿ ಮಾಡಲು ಟೈಂ ಬೇಕು ಎಂದು ಕೇಳುತ್ತಿದ್ದಾರೆ. ಆದರೆ, ಭ್ರಷ್ಟಾಚಾರ ಮಾಡಲು ಅವರು ಟೈಂ ನೀಡುತ್ತಿದ್ದಾರೆ. ಅದನ್ನು ಬಿಟ್ಟು ಬೆಂಗಳೂರಿನ ಕಡೆ ಗಮನ ಹರಿಸಲಿ ಎಂದಿದ್ದಾರೆ.
ಇನ್ನು ಕಿರಣ್ ಮಜುಂದಾರ್ ಶಾ ಅವರ ಟ್ವೀಟ್ ಎಕ್ಸ್ನಲ್ಲಿ ಪರ-ವಿರೋಧ ಚರ್ಚೆ ಹುಟ್ಟುಹಾಕಿದೆ. ಮೇಡಂ ಮಧ್ಯಪ್ರದೇಶದ ಇಂದೋರ್ ಸ್ವಚ್ಛ ನಗರ ಎಂಬ ಖ್ಯಾತಿ ಪಡೆದಿದೆ. ಅಲ್ಲದೆ, ಗುಣಮಟ್ಟದ ಮೂಲಸೌಕರ್ಯಕ್ಕೆ ಒಂದು ಗಮನಾರ್ಹ ಉದಾಹರಣೆಯಾಗಿದೆ. ನೀವು ರಾಜಕೀಯವನ್ನು ಬದಿಗಿಟ್ಟು ಇಂದೋರ್ ನಗರವನ್ನು ಮಾದರಿಯಾಗಿ ಬಳಸಬಹುದು. ದಿನಕ್ಕೆ ಸರಿಸುಮಾರು 550 ಟನ್‌ಗಳಷ್ಟು ಪುರಸಭೆಯ ಘನತ್ಯಾಜ್ಯವನ್ನು ಸುಮಾರು 20 ಟನ್‌ಗಳಷ್ಟು ಸಿಬಿಜಿಯಾಗಿ ಪರಿವರ್ತಿಸಲಾಗುತ್ತದೆ. ಇದೆಲ್ಲವನ್ನು ಭಾರತೀಯ ಕಂಪನಿಯೊಂದು ಮಾಡಿದೆ ಎನ್ನುವ ಮೂಲಕ ಕಿರಣ್ ಮಜುಂದಾರ್ ಶಾ ಅವರಿಗೆ ದಿನೇಶ್ ಜೋಶಿ ಹೆಸರಿನ ನೆಟ್ಟಿಗ ತಿರುಗೇಟು ನೀಡಿದ್ದಾರೆ. ದಿ ಐರನ್ ವಾಯ್ಸ್ ಹೆಸರಿನ ಮತ್ತೊಬ್ಬ ನೆಟ್ಟಿಗ, ಇಲ್ಲಿ ಕೆಲಸಗಳನ್ನು ಮಾಡಲು ನಾವು ಎಲ್ಲರಿಗೂ ಲಂಚ ನೀಡಬೇಕು. ಬಿಬಿಎಂಪಿ ಅಲಿಯಾಸ್ ಜಿಬಿಎ ಅಲ್ಲಿ ಲಂಚವಿಲ್ಲದೆ ಬೆರಳು ಕೂಡ ಆಡುವುದಿಲ್ಲ ಎನ್ನುವ ಮೂಲಕ ಸರ್ಕಾರದ ವಿರುದ್ಧ ಬೊಟ್ಟು ಮಾಡಿದ್ದಾರೆ.
ಈ ಹಿಂದೆ ಆನ್‌ಲೈನ್ ಟ್ರಕ್ಕಿಂಗ್ ಪ್ಲಾಟ್‌ಫಾರ್ಮ್ ಬ್ಲ್ಯಾಕ್‌ಬಕ್‌ನ ಸಹ-ಸಂಸ್ಥಾಪಕ ಮತ್ತು ಸಿಇಒ ರಾಜೇಶ್ ಯಬಾಜಿ ಅವರು ಬೆಂಗಳೂರು ಅವ್ಯವಸ್ಥೆ ವಿರುದ್ಧ ಧ್ವನಿ ಎತ್ತಿದ್ದರು. ಪ್ರಯಾಣದಲ್ಲಿ ಉಂಟಾಗುತ್ತಿರುವ ತೊಂದರೆಗಳು ಮತ್ತು ಕಳಪೆ ರಸ್ತೆ ಮೂಲಸೌಕರ್ಯವನ್ನು ಉಲ್ಲೇಖಿಸಿ ಬೆಂಗಳೂರಿನ ಹೊರ ವರ್ತುಲ ರಸ್ತೆ (ORR) ಯಲ್ಲಿರುವ ತನ್ನ ಬೆಳ್ಳಂದೂರು ಕಚೇರಿಯನ್ನು ಸ್ಥಳಾಂತರ ಮಾಡುತ್ತಿರುವುದಾಗಿ ಘೋಷಿಸಿದ್ದರು. ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಯಬಾಜಿ ಅವರು, ಕಳೆದ 9 ವರ್ಷಗಳಿಂದ ಬೆಳ್ಳಂದೂರು ಹೊರ ವರ್ತುಲ ರಸ್ತೆಯಲ್ಲಿರುವ ನಮ್ಮ ಕಚೇರಿ, ನಮ್ಮ ಮನೆ ಆಗಿದೆ. ಆದರೆ, ಇದೀಗ ಇಲ್ಲಿ ಮುಂದುವರಿಯುವುದು ತುಂಬಾ ಕಷ್ಟವಾಗುತ್ತಿದೆ. ನಾವು ಹೊರಗೆ ಹೋಗಲು ನಿರ್ಧರಿಸಿದ್ದೇವೆ. ದಿನ ನಿತ್ಯದ ಪ್ರಯಾಣಕ್ಕೆ ನನ್ನ ಸಹೋದ್ಯೋಗಿಗಳಿಗೆ ಸರಾಸರಿ ಒಂದೂವರೆ ಗಂಟೆಗಳಿಗಿಂತ ಹೆಚ್ಚು ಸಮಯ ಹಿಡಿಯುತ್ತಿದೆ. ಅದು ಕೂಡ ಒನ್ ವೇನಲ್ಲಿ. ರಸ್ತೆಗಳೆಲ್ಲ ಗುಂಡಿಗಳು ಮತ್ತು ಧೂಳಿನಿಂದ ತುಂಬಿ ಹೋಗಿವೆ. ಅವುಗಳನ್ನು ಸರಿಪಡಿಸುವ ಕನಿಷ್ಠ ಉದ್ದೇಶವನ್ನು ತೋರುತ್ತಿಲ್ಲ. ಮುಂದಿನ 5 ವರ್ಷಗಳಲ್ಲಿ ಇವುಗಳಲ್ಲಿ ಯಾವುದೂ ಬದಲಾಗುವ ಸೂಚನೆ ನನಗೆ ಕಾಣುತ್ತಿಲ್ಲ ಎಂದು ಯಬಾಜಿ ಅವರು ಎಕ್ಸ್ನಲ್ಲಿ ತಿಳಿಸಿದ್ದರು. ಈ ಬಗ್ಗೆ ಸಾಕಷ್ಟು ಚರ್ಚೆಯಾಗಿ, ಡಿಸಿಎಂ ಡಿಕೆ ಶಿವಕುಮಾರ್ ಖಡಕ್ ಪ್ರತಿಕ್ರಿಯೆ ನೀಡಿದ ಬಳಿಕ ಯಬಾಹಿ ಅವರು ಯೂಟರ್ನ್ ಹೊಡೆದರು.