ಜಿಲ್ಲೆ

ಪ್ರಧಾನಿ ಮೋದಿ ವಿರುದ್ಧ ಪಾಕ್​ ವಿದೇಶಾಂಗ ಸಚಿವ ಬಿಲಾವಲ್ ಕೀಳುಪದ ಬಳಕೆ: ಮಾಜಿ ಸಿಎಂ ಯಡಿಯೂರಪ್ಪ ಖಂಡನೆ

ಬೆಂಗಳೂರು: ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕುರಿತಾಗಿ ಮಾಡಿರುವ ಟೀಕೆ ಅವರ ಕೀಳು ಮನಸ್ಥಿತಿಯನ್ನು ಬಯಲು ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಪಾಕಿಸ್ತಾನದ ವಿದೇಶಾಂಗ ಸಚಿವರಾಗಿ ಅವರ ಹೇಳಿಕೆಯು ಪಾಕ್​ ಸರ್ಕಾರದ ನೀಚ ಮನಸ್ಥಿತಿಯನ್ನು ಪ್ರತಿಬಿಂಬಿಸಿದೆ. ಇಡೀ ವಿಶ್ವದಲ್ಲಿಯೇ ಶಾಂತಿ ನೆಲೆಸುವಂತಾಗಲು ಭಾರತದ ಪ್ರಧಾನ ಮಂತ್ರಿಯವರು ನೇತೃತ್ವ ವಹಿಸಬೇಕೆಂದು ವಿಶ್ವದ ಎಲ್ಲ ಪ್ರಮುಖ ದೇಶಗಳು ಕೋರುತ್ತಿರುವ ಸಂದರ್ಭದಲ್ಲಿ ಪಾಕ್​ ವಿದೇಶಾಂಗ ಸಚಿವರಿಂದ ಇಂತಹ ಹೇಳಿಕೆ ನಾಯಿಬಾಲ ಡೊಂಕು ಎಂಬಂತಹ ಪ್ರವೃತ್ತಿಯನ್ನು ಸಾಬೀತು ಪಡಿಸುತ್ತಿದೆ ಎಂದು ತಿರುಗೇಟು ನೀಡಿದ್ದಾರೆ.

ಜಾಗತಿಕ ಉಗ್ರ ಒಸಾಮ ಬಿನ್‌ ಲಾಡೆನ್‌ ಎಲ್ಲಿ ಅಡಗಿ ಕುಳಿತಿದ್ದ ಮತ್ತು ಅವನನ್ನು ಪೋಷಿಸುತ್ತಿದ್ದವರು ಯಾರು ಹಾಗೂ ವಿಶ್ವದ ಬಹುತೇಕ ಉಗ್ರ ಸಂಘಟನೆಗಳಿಗೆ ತವರು ನೆಲೆ ಪಾಕಿಸ್ತಾನ ಎಂದು ಇಡೀ ಜಗತ್ತಿಗೆ ತಿಳಿದಿರುವಾಗ ಮೋದಿಯಂತಹ ವಿಶ್ವ ನಾಯಕರ ಬಗ್ಗೆ ಟೀಕೆ ಮಾಡಿದರೆ ಜಗತ್ತಿನ ಕಣ್ಣಿನಲ್ಲಿ ತಾನು ದೊಡ್ಡ ವ್ಯಕ್ತಿಯಾಗುತ್ತೇನೆಂದು ಭಾವಿಸಿರುವಂತೆ  ಕಾಣುತ್ತಿದೆ ಎಂದು ಹರಿಹಾಯ್ದಿದ್ದಾರೆ.

ಫೆ.18, 2018 ರಲ್ಲಿ ಅಮೆರಿಕದ ವಾಷಿಂಗ್ಟನ್‌ ನಲ್ಲಿ “ಪಾಕಿಸ್ತಾನದಲ್ಲಿ ಭಯೋತ್ಪಾದನೆ ಹೆಚ್ಚಾಗುತ್ತಿದೆ” ಎಂದು ಹಾಗೂ ಮಾ.7, 2019 ರಲ್ಲಿ “ಪಾಕಿಸ್ತಾನದ ಮೂವರು ಸಚಿವರು ಉಗ್ರ ಸಂಘಟನೆಗಳ ಜತೆಗೆ ಸಂಬಂಧ ಹೊಂದಿದ್ದಾರೆ” ಎಂದು ಹೇಳಿಕೆ ನೀಡಿರುವುದನ್ನು ಮರೆತಂತೆ ಕಾಣುತ್ತಿದೆ.

ನರೇಂದ್ರ ಮೋದಿಯವರ ಕುರಿತಾದ ಕೀಳು ಮಟ್ಟದ ಇಬ್ಬಗೆತನದ ಅವರ ಹೇಳಿಕೆ ಭಾರತ ದೇಶಕ್ಕೆ ಮಾಡಿದ ಅವಮಾನ. ದೇಶಪ್ರೇಮಿ ಭಾರತೀಯರು ಇದನ್ನು ಖಂಡಿಸಿ, ಇದರ ವಿರುದ್ದ ಹೋರಾಟ ಮಾಡಬೇಕಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.