ಜಿಲ್ಲೆ

ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸಾವು

ಗುರುಪುರ: ಖಾಸಗಿ ಬಸ್ಸೊಂದು ಬೈಕ್‌ಗೆ ಡಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿದ ಘಟನೆ ಗುರುಪುರ ಹತ್ತಿರದ ಅಣೆಬಳಿಯಲ್ಲಿ ಗುರುವಾರ ಬೆಳಗ್ಗೆ ಸಂಭವಿಸಿದೆ.

ಬೈಕ್ ಸವಾರ ಸಂತೋಷ್ ಪೂಜಾರಿ(34) ಮೃತಪಟ್ಟವರು. ಸಂತೋಷ್ ಕರಿಯಂಗಳ ನಿವಾಸಿಯಾಗಿದ್ದು, ಗುರುಪುರ ವ್ಯವಸಾಯ ಸಹಕಾರಿ ಬ್ಯಾಂಕ್‌ನ ವಾಮಂಜೂರು ಶಾಖೆಯಲ್ಲಿ ತಾತ್ಕಾಲಿಕ ನೆಲೆಯಲ್ಲಿ ಉದ್ಯೋಗಿಯಾಗಿದ್ದರು. ತನ್ನ ಬೈಕ್‌ನಲ್ಲಿ ಮನೆಯಿಂದ ವಾಮಂಜೂರಿಗೆ ಕೆಲಸಕ್ಕೆ ತೆರಳುತ್ತಿದ್ದಾಗ ಗುರುಪುರದ ಬಳಿ ಮಂಗಳೂರಿನತ್ತ ಸಾಗುತ್ತಿದ್ದ ಬಸ್, ಬೈಕ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಈ ವೇಳೆ ಬಸ್‌ನಡಿಗೆ ಬೈಕ್ ಬಿದ್ದಿದ್ದು, ಸವಾರ ರಸ್ತೆಯಿಂದ ದೂರ ಎಸೆಯಲ್ಪಟ್ಟಿದ್ದಾರೆ. ಗಂಭೀರ ಗಾಯಗೊಂಡಿದ್ದ ಆತನನ್ನು ಮಂಗಳೂರಿನ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದು, ಬಳಿಕ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಂತೋಷ್ ಸಾವನ್ನಪ್ಪಿದ್ದಾರೆ.

ಕರಿಯಂಗಳದ ದಿ.ಅಣ್ಣಿ ಪೂಜಾರಿ ಅವರ ಮೂವರು ಮಕ್ಕಳಲ್ಲಿ ಹಿರಿಯವನಾದ ಸಂತೋಷ್, ಕೆಲ ಸಮಯದ ಹಿಂದಷ್ಟೇ ಗುರುಪುರ ವ್ಯವಸಾಯ ಸಹಕಾರಿ ಬ್ಯಾಂಕ್‌ಗೆ ಕೆಲಸಕ್ಕೆ ಸೇರಿದ್ದರು. ಗುರುಪುರ ವ್ಯವಸಾಯ ಸಹಕಾರಿ ಬ್ಯಾಂಕ್‌ನ ಪ್ರಧಾನ ಕಚೇರಿಯ ಮುಂಭಾಗದ ಹಂಪ್ಸ್ ಬಳಿಯೇ ಈ ಅಪಘಾತ ಸಂಭವಿಸಿದೆ. ಹಂಪ್ಸ್‌ನಲ್ಲಿ ನಿಧಾನಗತಿಯಲ್ಲಿ ಚಲಿಸುತ್ತಿದ್ದಾಗ ಬೈಕ್‌ಗೆ ಹಿಂದಿನಿಂದ ಅತಿ ವೇಗವಾಗಿ ಬಂದ ಬಸ್ ಡಿಕ್ಕಿಯಾಗಿದೆ. ಬಳಿಕ ನಿಯಂತ್ರಣ ತಪ್ಪಿದ ಬಸ್, ಶಾಲಾ ಬಸ್‌ಗೂ ಡಿಕ್ಕಿ ಹೊಡೆದಿದೆ.

ಅಪಘಾತ ಸಂಭವಿಸಿದ ಬಳಿಕ ರಾ.ಹೆ. 169 ಗುರುಪುರ ಭಾಗದಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಹೆದ್ದಾರಿ ವಾಹನ ಸಂಚಾರ ಸುಗಮಗೊಳಿಸಿದ ಬಜ್ಪೆ ಪೊಲೀಸರು, ಪ್ರಕರಣ ದಾಖಲಿಸಿ ಬಸ್ ಹಾಗೂ ಬೈಕ್‌ನ್ನು ಠಾಣೆಗೆ ಕೊಂಡೊಯ್ದಿದ್ದಾರೆ.