

ಹಾಸನ: ರಾಷ್ಟ್ರೀಯ ಹೆದ್ದಾರಿ 75 ಕಣದಹಳ್ಳಿ ಹತ್ತಿರ ಹೋಗುತ್ತಿದ್ದ ಬೈಕಿಗೆ ಅಪರಿಚಿತ ವಾಹನವೊಂದು ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಮಂಗಳವಾರ ಮೃತಪಟ್ಟಿದ್ದಾರೆ.
ಆಲೂರು ತಾಲೂಕು, ಪಾಳ್ಯ ಹೋಬಳಿಯ ಹಳೆಪಾಳ್ಯ ಗ್ರಾಮದ ಲಿಂಗರಾಜು (38) ಮೃತ ವ್ಯಕ್ತಿ.
ಲಿಂಗರಾಜು ಅವರು ಅಣ್ಣನ ತಿಥಿ ಕಾರ್ಯಕ್ಕೆಂದು ಅರ್ಚಕರನ್ನು ಕರೆದುಕೊಂಡು ಬರಲು ಮಂಗಳವಾರ ಬೆಳಗ್ಗೆ ತನ್ನ ಬೈಕ್‌ನಲ್ಲಿ ಪಾಳ್ಯಕ್ಕೆ ಹೋಗುತ್ತಿದ್ದಾಗ ಎನ್.ಎಚ್. 75 ಬಿ.ಎಂ ರಸ್ತೆಯ ಕಣದಹಳ್ಳಿ ಹತ್ತಿರ ಸಕಲೇಶಪುರ ಕಡೆಯಿಂದ ಅತೀ ವೇಗವಾಗಿ ಬಂದ ಅಪರಿಚಿತ ವಾಹನ ಬೈಕಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ರಸ್ತೆಯ ಮೇಲೆ ಬಿದ್ದ ಲಿಂಗರಾಜು ತಲೆಗೆ ಗಂಭೀರ ಪೆಟ್ಟು ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅಪಘಾತ ಮಾಡಿದ ಚಾಲಕ ವಾಹನವನ್ನು ನಿಲ್ಲಿಸದೆ ಪರಾರಿಯಾಗಿದ್ದಾನೆ. ಈ ಬಗ್ಗೆ ಕಾನೂನು ಕ್ರಮ ಜರುಗಿಸಬೇಕೆಂದು ಮೃತ ಲಿಂಗರಾಜು ತಾಯಿ ರಂಗಮ್ಮ ಆಲೂರು ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.