ಜಿಲ್ಲೆ

ಬಾಗಲಕೋಟೆಯಲ್ಲಿ ಗುಡುಗು ಸಹಿತ ಭಾರೀ ಮಳೆ! ಸಿಡಿಲು ಬಡಿದು ಓರ್ವ ಬೈಕ್ ಸವಾರ ಸಾವು

ಬಾಗಲಕೋಟೆ: ಕಳೆದ ಕೆಲವು ದಿನಗಳಿಂದ ರಾಜ್ಯದ ಹಲವೆಡೆ ಭಾರೀ ಮಳೆಯಾಗುತ್ತಿದ್ದು, ಕೆಲವೆಡೆ ಗುಡುಗು, ಮಿಂಚು ಸಹಿತ ಮಳೆ ಸುರಿಯುತ್ತಿದೆ. ಇಂದು ಬಾಗಲಕೋಟೆ ಜಿಲ್ಲೆಯ ಕೆಲವು ಭಾಗಗಳಲ್ಲಿ ಮಳೆ, ಗಾಳಿ, ಮಿಂಚು, ಗುಡುಗಿನ‌ ಅಬ್ಬರ ಜೋರಾಗಿದ್ದು, ಸಿಡಿಲು ಬಡಿದು ಓರ್ವ ಬೈಕ್ ಸವಾರ ಸಾವಿಗೀಡಾಗಿದ್ದಾರೆ.

ಜಿಲ್ಲೆಯಲ್ಲಿ ಮಳೆಗಿಂತ ಗುಡುಗು, ಸಿಡಿಲಿನ ಆರ್ಭಟ ಜೋರಾಗಿದ್ದು, ಮೃತ ಬೈಕ್​ ಸವಾರನನ್ನು ಪ್ರಕಾಶ್ ವಗ್ಗರ್ (21) ಎಂದು ಗುರುತಿಸಲಾಗಿದೆ. ಪ್ರಕಾಶ್ ಮೂಲತಃ ವಿಜಯಪುರ ಜಿಲ್ಲೆಯ ಗೋನಾಳ ಗ್ರಾಮದವರು ಎನ್ನುತ್ತಿದೆ ಪ್ರಾಥಮಿಕ ಮಾಹಿತಿ. ಪ್ರಕಾಶ್ ಬಾಗಲಕೋಟೆ ತಾಲೂಕಿನ ಬೇವೂರ ಗ್ರಾಮದಲ್ಲಿ ನೆಲೆಸಿದ್ದರು ಎಂದು ವರದಿಯಾಗಿದೆ.

ಸದ್ಯ ಜಿಲ್ಲೆಯಲ್ಲಿ ಜಿಟಿಜಿಟಿ ಮಳೆ ಮುಂದುವರೆದಿದ್ದು, ಮಿಂಚು, ಸಿಡಿಲು ಮಾತ್ರ ಕಡಿಮೆಯಾಗಿಲ್ಲ ಎಂದು ಹೇಳಲಾಗಿದೆ.