ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ-66ರ ತೆಂಕ ಎರ್ಮಾಳು ಕ್ಯಾಂಟೀನೊಂದರ ಬಳಿ ರಸ್ತೆ ದಾಟುತ್ತಿದ್ದ ಟ್ಯಾಂಕರ್ ಚಾಲಕ ಬಂಟ್ವಾಳದ ಬರಿಮಾರು ಗ್ರಾಮದ ಬಿ.ಸಂಜೀವ ಪೂಜಾರಿ(58) ಎಂಬುವರು ಬೈಕ್ ಡಿಕ್ಕಿಯಾಗಿ ಮೃತಪಟ್ಟ ಘಟನೆ ಶನಿವಾರ ನಡೆದಿದೆ.
ಬೈಕ್ ಸವಾರ ಪೂರ್ಣಪ್ರಜ್ಞ ಎಂಬುವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಟ್ಯಾಂಕರ್ ಚಾಲಕ ಸಂಜೀವ ಪೂಜಾರಿ ಕ್ಯಾಂಟೀನ್‌ನಲ್ಲಿ ಚಹಾ ಕುಡಿಯಲು ಹೆದ್ದಾರಿಯ ಒಂದು ಪಾರ್ಶ್ವದಲ್ಲಿ ಟ್ಯಾಂಕರ್ ನಿಲ್ಲಿಸಿ ರಸ್ತೆ ದಾಟುತ್ತಿದ್ದಾಗ ಬೈಕ್ ಡಿಕ್ಕಿಯಾಗಿದೆ.
ಅಪಘಾತದ ತೀವ್ರತೆಗೆ ರಸ್ತೆಗೆ ಬಿದ್ದು ತಲೆ ಹಾಗೂ ಕಾಲಿಗೆ ಗಂಭೀರ ಗಾಯಗೊಂಡಿದ್ದು, ಬೈಕ್ ಸವಾರ ಕೂಡ ರಸ್ತೆಗೆ ಬಿದ್ದು ಗಾಯಗೊಂಡಿದ್ದರು. ತಕ್ಷಣ ಅವರನ್ನು ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಸಂಜೀವ ತಡರಾತ್ರಿ ಮೃತಪಟ್ಟಿದ್ದಾರೆ. ಬೈಕ್ ಸವಾರ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.