ಬೆಂಗಳೂರು: ಕೆಲವೇ ದಿನಗಳ ಹಿಂದಷ್ಟೇ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ನಡೆದ ಕಾರು-ಬೈಕ್ ಅಪಘಾತದಲ್ಲಿ ಇಬ್ಬರು ಮೇಲಿನಿಂದ ರಸ್ತೆಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟ ಘಟನೆ ಇನ್ನೂ ಜನಮಾನಸದಲ್ಲಿರುವಾಗಲೇ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ. ದುರದೃಷ್ಟವಶಾತ್ ಇದರಲ್ಲೂ ಇಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ಬಿಎಂಟಿಸಿ ಬಸ್ ಮತ್ತು ಬೈಕ್ ನಡುವೆ ಈ ಅಪಘಾತ ಸಂಭವಿಸಿದೆ. ಎಲೆಕ್ಟ್ರಾನಿಕ್ ಸಿಟಿಯ ಯೂಟರ್ನ್ ಫ್ಲೈಓವರ್ ಮೇಲೆ ಈ ಘಟನೆ ನಡೆದಿದೆ. ಬಿಎಂಟಿಸಿ ಬಸ್ ಶಿವಾಜಿನಗರದಿಂದ ಎಲೆಕ್ಟ್ರಾನಿಕ್ ಸಿಟಿ ಮಾರ್ಗವಾಗಿ ಬಂದಿದ್ದು, ಅಲ್ಲಿಂದ ಬೆಂಗಳೂರಿನತ್ತ ಯೂ-ಟರ್ನ್ ತೆಗೆದುಕೊಳ್ಳುವಾಗ ಈ ಅಪಘಾತ ಸಂಭವಿಸಿದೆ.
ಇದನ್ನೂ ಓದಿ: ಭಾರತೀಯರ ಮನೆಯಲ್ಲೇಕೆ ಇಂಥದ್ದೊಂದು ಇರಲು ಸಾಧ್ಯವಿಲ್ಲ?; ಹೀಗೆಂದ ಕೆಲವೇ ಗಂಟೆಗಳಲ್ಲಿ ಸರಸ್ವತಿ ಟ್ರೆಂಡಿಂಗ್
ದ್ವಿಚಕ್ರ ವಾಹನಕ್ಕೆ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದಿದ್ದು, ಬೈಕ್ ಬಸ್ ಅಡಿಗೆ ಸಿಲುಕಿದ್ದರಿಂದ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಪ್ರಭಾಕರ್ (25) ಹಾಗೂ ಸಹನಾ (24) ಮೃತಪಟ್ಟವರು. ಎಲೆಕ್ಟ್ರಾನಿಕ್ ಸಿಟಿಯ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಈ ಇಬ್ಬರೂ ದಾವಣಗೆರೆ ಮೂಲದವರು. ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಶವಗಳನ್ನು ರವಾನೆ ಮಾಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.