ಕಾರವಾರ:ಇಲ್ಲಿನ ಬೈತಖೋಲ್ ಮೀನುಗಾರರ ಬಲೆಗೆ ಬಿದ್ದ ದೊಡ್ಡ ಬಂಗಡೆ ಮೀನು ಕೊಚ್ಚಿಯ ಮ್ಯೂಸಿಯಂ ಸೇರುವ ಸಾಧ್ಯತೆ ಇದೆ.
ಕೇಂದ್ರೀಯ ಕಡಲ ಮೀನುಗಾರಿಕೆ ಸಂಶೋಧನಾ ಸಂಸ್ಥೆ(ಸಿಎಂಎಫ್‌ಆರ್‌ಐ) ಹಿರಿಯ ವಿಜ್ಞಾನಿ ಪ್ರತಿಭಾ ಹಾಗೂ ವಿಜ್ಞಾನಿ ಮಹೇಶ ಅವರು ಸೋಮವಾರ ಮೀನನ್ನು ಪರಿಶೀಲನೆ ನಡೆಸಿ ವಶಕ್ಕೆ ಪಡೆದರು.
ಆನಂದ ರಾಮಾ ಹರಿಕಂತ್ರ ಅವರ ಬಲೆಗೆ ಬಿದ್ದ ಬಂಗಡೆ ಮೀನನ್ನು ಭಾನುವಾರ ನವೀನ ಹರಿಕಂತ್ರ, ವಿನಾಯಕ ಹರಿಕಂತ್ರ ಅವರು ಪಡೆದು, ಇಲ್ಲಿನ ಕವಿವಿ ಸ್ನಾತಕೋತ್ತರ ಅಧ್ಯಯನ ಕೇಂದ್ರಕ್ಕೆ ಒಪ್ಪಿಸಲು ನಿರ್ಧರಿಸಿದ್ದರು.
ಕೇಂದ್ರದ ಡಾ.ಶಿವಕುಮಾರ ಹರಗಿ ಅವರು ಪರಿಶೀಲನೆ ನಡೆಸಿ, ಇಷ್ಟು ದೊಡ್ಡ ಬಂಗಡೆ ಮೀನು ಇನ್ನೂ ಎಲ್ಲೂ ಕಾಣಿಸಿಲ್ಲ ಎಂದು ಖಚಿತಪಡಿಸಿದ್ದರು. ಈ ಬಗ್ಗೆ ಸೋಮವಾರ ಮಾಧ್ಯಮಗಳಲ್ಲಿ ಮಾಹಿತಿ ಪಡೆದ ಸಿಎಂಎಫ್‌ಆರ್‌ಐ ಕಾರವಾರದ ಅಽಕಾರಿಗಳು ಬೈತಖೋಲ್‌ಗೆ ಬಂದು ಪರಿಶೀಲನೆ ನಡೆಸಿದರು.
ಏನಿದರ ವಿಶೇಷ..?
ಇದುವರೆಗೆ ಸಿಕ್ಕ ಬಂಡಗಡೆ ಮೀನಿನಲ್ಲಿ ಗಂಡು ಗರಿಷ್ಠ 38 ಸೆಂಟಿ ಮೀಟರ್, ಹೆಣ್ಣು ಬಂಗಡೆ ಗರಿಷ್ಠ 42 ಸೆಂಮೀ ಉದ್ದವಿದೆ. ಆದರೆ, ಭಾನುವಾರ ಕಾರವಾರದಲ್ಲಿ ಸಿಕ್ಕ ಬಂಗಡೆ ಮೀನು 48 ಸೆಂಮೀ ಉದ್ದವಿದೆ. 1 ಕೆಜಿ 230 ಗ್ರಾಂ ತೂಕವಿದೆ.
ಕೊಚ್ಚಿಯಲ್ಲಿ ಸಿಎಂಎಫ್‌ಆರ್‌ಐನ ದೇಶದ ದೊಡ್ಡ ಸಾಗರ ವಿಜ್ಞಾನ ಮ್ಯೂಸಿಯಂ ಇದೆ. 38 ಸೆಂಮೀ ಉದ್ದದ ದೊಡ್ಡ ಬಂಗಡೆ ಮೀನನ್ನೂ ಅಲ್ಲೇ ಸಂರಕ್ಷಿಸಲಾಗಿದೆ.
ಇನ್ನಷ್ಟು ಅಧ್ಯಯನ ನಡೆಸಿ, ಇದು ದೊಡ್ಡ ಮೀನು ಎಂಬುದು ಖಚಿತವಾದರೆ, ಕೊಚ್ಚಿಯಲ್ಲಿ ಸಂಗ್ರಹಿಸಲು ಕ್ರಮ ವಹಿಸಲಾಗುವುದು ಎಂದು ಸಿಎಂಎಫ್‌ಆರ್‌ಐ ವಿಜ್ಞಾನಿಗಳು ತಿಳಿಸಿದ್ದಾರೆ.