ಹೆದ್ದಾರಿಯ ಡಾಂಬರೀಕರಣ ಕಾಮಗಾರಿಯಿಂದ ಬ್ರಹ್ಮಾವರದಿಂದ ಕಲ್ಯಾಣಪುರ ಸಂತೆಕಟ್ಟೆ ತನಕ ಸಂಚಾರ ತೀರಾ ಕಷ್ಟಕರವಾಗಿ ಪರಿಣಮಿಸಿದೆ.  
ಜಿಲ್ಲೆ

ರಾ.ಹೆ. ಡಾಂಬರೀಕರಣಕ್ಕೆ ಜನತೆ ಹೈರಾಣ! ಬ್ರಹ್ಮಾವರದಿಂದ ಕಲ್ಯಾಣಪುರ ಸಂತೆಕಟ್ಟೆ ಸಂಚಾರ ಕಷ್ಟಕರ

ಬಂಡೀಮಠ ಶಿವರಾಮ ಆಚಾರ್ಯ ಬ್ರಹ್ಮಾವರ

ರಾಷ್ಟ್ರೀಯ ಹೆದ್ದಾರಿ 66 ಬ್ರಹ್ಮಾವರದಿಂದ ಸಂತೆಕಟ್ಟೆ ರಸ್ತೆಯಲಲಿ ಡಾಂಬರು ಕಾಮಗಾರಿ ನಡೆಯುತ್ತಿರುವುದರಿಂದ ಜನತೆ ಹಾಗೂ ವಾಹನ ಚಾಲಕರು ಸಂಕಷ್ಟ ಎದುರಿಸುವಂತಾಗಿದೆ. ಏಕಮುಖ ಸಂಚಾರ ವ್ಯವಸ್ಥೆಯನ್ನು ಬದಲಿ ರಸ್ತೆ ಇಲ್ಲದೆ ಮಾಡುವುದರಿಂದ ಹಲವಾರು ಅಪಘಾತಗಳು ಸಾವು-ನೋವು ಸಂಭವಿಸಿವೆ.

ಬೇರೆ ರಾಜ್ಯದ ಪ್ರವಾಸಿಗರು, ಶುಭಕಾರ್ಯಕ್ಕೆ, ದೈವ ದೇವರ ಉತ್ಸವಕ್ಕೆ ಊರಿಗೆ ಬರುವ ಕಾರಣ ಮಾಮೂಲಿಗಿಂತ 4 ಪಟ್ಟು ವಾಹನ ಸಂಚಾರ ಹೆಚ್ಚಾಗಿದ್ದು, ತುರ್ತು 30 ನಿಮಿಷದ ಸಂಚಾರಕ್ಕೆ ಆಂಬುಲೆನ್ಸ್‌ಗಳೂ ಕೂಡಾ ಗಂಟೆಗಟ್ಟಲೆ ಕಾಯುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.
ಬ್ರಹ್ಮಾವರದಿಂದ ಮಣಿಪಾಲ, ಕಾರ್ಕಳಕ್ಕೆ ಹೋಗುವವರಿಗೆ ಉಪ್ಪೂರು ಮೂಲಕ ಕೊಳಲಗಿರಿ ಪರಾರಿ, ಮಣಿಪಾಲ ಅಥವಾ ಕುಕ್ಕೆಹಳ್ಳಿ, ಹಿರಿಯಡ್ಕ ಮೂಲಕ ಸಂಚಾರ ವ್ಯವಸ್ಥೆಯನ್ನು ಮಾಡಿದಲ್ಲಿ ಸಮಯ ಮತ್ತು ಇಂಧನ ಉಳಿತಾಯವಾಗಿ ಸುಗಮ ಸಂಚಾರವೂ ಸಾಧ್ಯವಾಗಲಿದೆ ಎಂಬುದು ಇಲ್ಲಿನ ಸಾರ್ವಜನಿಕರ ಅಭಿಪ್ರಾಯ.

ಬ್ರಹ್ಮಾವರದಿಂದ ಜನಸಾಮಾನ್ಯರು ಉಡುಪಿಗೆ ಆಟೋ ಸೇರಿದಂತೆ ವ್ಯವಹಾರ ಅಥವಾ ತುರ್ತು ಆಂಬುಲೆನ್ಸ್ ಸಂಚರಿಸಲೂ ಗಂಟೆಗಟ್ಟಲೇ ಕಾಯುವ ಅನಿವಾರ್ಯತೆ ಇಲ್ಲಿದೆ. ಜನಪ್ರತಿನಿಧಿಗಳಿಗೆ, ಹೆದ್ದಾರಿ ಇಲಾಖೆಗೆ ಇದು ತಿಳಿಯುತ್ತಿಲ್ಲ. ವಾಹನಗಳ ಸುಗಮ ಸಂಚಾರ ಮತ್ತು ಜನರ ಜೀವಕ್ಕೆ ಸುರಕ್ಷತೆ ನೀಡುತ್ತಿಲ್ಲ. ಕಾಮಗಾರಿಯ ನೆಪದಲ್ಲಿ ಹಣ ಸುಲಿಗೆ ಮಾಡುತ್ತಿರುವ ಹಾಗೆ ಕಂಡುಬರುತ್ತದೆ.-ಅಜ್ಮಲ್ ಅಸಾ ಬ್ರಹ್ಮಾವರ, ಸಾಮಾಜಿಕ ಕಾರ್ಯಕರ್ತ