ಜಿಲ್ಲೆ

ಭೂ ವಂದನ 8: ಭೂಮಿಗೆ ಬೇಕಿದೆ ಬದಲಿ ಪ್ಯಾಕೇಜಿಂಗ್ ವಸ್ತುಗಳು! Packaging materials

ರಮೇಶ್​ ಕುಮಾರ್​​ ಬಿ ಎಡಮೋಳೆ

Packaging materials : ಇಂದಿನ ವೇಗದ ಜೀವನಶೈಲಿಯಲ್ಲಿ ತ್ವರಿತ ಆಹಾರ ಪದ್ಧತಿಗೆ ನಮ್ಮನ್ನು ನಾವು ಅಳವಡಿಸಿಕೊಂಡಿದ್ದೇವೆ. ಇದರ ಜೊತೆಗೆ ವಿವಿಧ ಬಣ್ಣಗಳ ಹೊತ್ತು ಆಕರ್ಷಕವಾಗಿ ಕಾಣುವ ಕವರುಗಳಲ್ಲಿ ಅಡಗಿ ಕುಳಿತ ಕುರುಕಲು ತಿಂಡಿ, ಚಾಕೋಲೇಟ್ ಹೀಗೆ ಇನ್ನಿತರ 'ರೆಡಿ ಟು ಈಟ್' ಆಹಾರ ಪದಾರ್ಥಗಳ ರುಚಿಗೆ ನಾಲಿಗೆ ಶರಣಾಗಿದೆ. ಹೀಗಾಗಿಯೇ ಬಳಸಲು ಸುಲಭವಾದ ಆಹಾರಗಳು ಮನೆಗೆ ಬೇಕಾದ ತಿಂಗಳ ಸಾಮಾನಿನ ಪಟ್ಟಿಯಲ್ಲಿ ನಮಗರಿವಿಲ್ಲದಂತೆಯೇ ಸೇರಿಸುತ್ತೇವೆ.

ಯಾವುದೇ ಸಿದ್ಧ ಆಹಾರ ವಸ್ತುವನ್ನು ನಾವು ಕೊಳ್ಳುವಾಗ ಮೊದಲು ಅವುಗಳ ಪ್ಯಾಕೇಜಿಂಗ್ ನಮ್ಮ ಗಮನವನ್ನು ತನ್ನತ್ತ ಸೆಳೆಯುತ್ತದೆ. ಈ ಪ್ಯಾಕೇಜಿಂಗ್ ಕೇವಲ ನೋಡಲು ಸುಂದರವಷ್ಟೇ ಅಲ್ಲದೆ ನಾವು ಸಂಭ್ರಮಿಸಿ ತಿನ್ನುವ ವಸ್ತು ತನ್ನ ರುಚಿಯ ಜೊತೆಗೆ ತಾಜಾತನವನ್ನೂ ಉಳಿಸಿಕೊಳ್ಳುವ ಗುಣವನ್ನು ಹೊಂದಿರುತ್ತದೆ. ಸಾಮಾನ್ಯವಾಗಿಯೇ ಸಿದ್ಧ ಆಹಾರವನ್ನು ಖರೀದಿಸುವ ನಾವು ಇದೀಗ ಬಾಂಧವ್ಯ ಗಟ್ಟಿ ಮಾಡುವ ಹಬ್ಬಗಳ ಸಾಲಿನಲ್ಲಿ ಕಡಿಮೆ ಮಾಡಲು ಸಾಧ್ಯವೇ? 'ಫ್ರೆoಡ್ ಶಿಪ್ ಡೇ', ರಕ್ಷಾಬಂಧನಗಳು ಚಾಕೋಲೇಟ್​ಗಳ ವಿನಿಮಯವಾಗದೇ ನಡೆಯುವುದಾದರೂ ಹೇಗೆ? ಎನ್ನುವ ಮನೋಭಾವ ಬೆಳೆಸಿಕೊಂಡಿದ್ದೇವೆ. ನಾಲಿಗೆ ಚಪ್ಪರಿಸಿ ಸವಿದ ತಿಂಡಿಯನ್ನು ತಾಜಾವಾಗಿಡಲು ಬಳಸಿದ ಆ ಹೊದಿಕೆ ಅಥವಾ ರಾಪರ್ - ಆ ಅಲ್ಯುಮಿನಿಯಂ ಫಾಯಿಲ್ ಅನ್ನು ಕೇವಲ ತಿನ್ನುವ ವಸ್ತುಗಳಲ್ಲದೇ ಉಳಿದಂತೆಯೂ ನಾವು ಬಳಸುತ್ತಲೇ ಬಂದಿದ್ದೇವೆ. ದೇವರಿಗೆ ಏರಿಸುವ ಬಟ್ಟೆಗಳ ಅಂಚಿನಲ್ಲಿ, ಹತ್ತಿಯ ಎಳೆಗಳಲ್ಲಿ, ನಮ್ಮ ಸಮಾಜದ ಗಣ್ಯರಿಗೆ ನಾವು ಹಾಕುವ ಹಾರದಲ್ಲಿ, ಕಾರ್ಯಕ್ರಮದ ಅಲಂಕಾರದಲ್ಲಿ, ನಮ್ಮ ಪ್ರೀತಿ ಪಾತ್ರರ 'ಹುಟ್ಟಿದ ಹಬ್ಬ' ಆಚರಿಸುವಾಗ ನಾವು ಸಿಡಿಸುವ 'ಬಾಂಬ್'ಗಳಲ್ಲಿ, ಹೀಗೆ ನಾವು ಸಂಭ್ರಮಿಸುವ ಅದಿನ್ನಷ್ಟೂ ಸಂದರ್ಭಗಳಲ್ಲಿ ಮಿಣ ಮಿಣವೆಂದು ಹೊಳೆವ ಕಾಗದದ ತುಂಡುಗಳು/ಹೊದಿಕೆ ನಮ್ಮ ಸುತ್ತಲೂ. ಆದರೆ, ಆನಂದದ ಕ್ಷಣಗಳು ಘಟಿಸಿದ ನಂತರ ನಿರ್ದಾಕ್ಷಿಣ್ಯವಾಗಿ ಧರೆಗೆ ಸೇರುವ ಆ ರಾಪರ್ ನಮಗೆ ಬೇಡ. ನಮಗೆ ಬೇಡದ್ದು ಭೂಮಿಗೂ ಬೇಡ. ಕಾರಣ ಬಿಸಿ, ಬೆಳಕು ಅಥವಾ ತೇವಾಂಶ ನಿರೋಧಕವಾಗಿರುವ ವಿವಿಧ ರೂಪದಲ್ಲಿ ವಿವಿಧ ಕಾರಣಗಳಿಗೆ ಬಳಸುವ ಈ ಮಲ್ಟಿ ಲೇಯರ್ಡ್​ ಪ್ಲಾಸ್ಟಿಕ್ ಮತ್ತು ಅಲ್ಯುಮಿನಿಯಂ ಫಾಯಿಲ್ ಜೈವಿಕವಸ್ತುವಲ್ಲ. ಭೂಮಿಯಲ್ಲದು ವರ್ಷಗಳು ಕಳೆದರೂ ಕರಗುವುದಿಲ್ಲ.

ಫಾಯಿಲ್ ತಯಾರಿಕೆಗೆ ಬೇಕಾದ ಅಲ್ಯೂಮಿನಿಯಂ ಮೂಲವಾಗಿ ಬಾಕ್ಸೈಟ್ ಎಂಬ ಖನಿಜದಿಂದ ಪಡೆಯಲಾಗುತ್ತದೆ. ಭೂಮಿಯ ಆಳದಲ್ಲಿ ಹುದುಗಿರುವ ಈ ಖನಿಜವನ್ನು ಗಣಿಗಾರಿಕೆಯ ಮೂಲಕ ಪಡೆದು, ರಾಸಾಯನಿಕ ಪ್ರಕ್ರಿಯೆಯ ನಂತರ ಬಾಕ್ಸೈಟ್‌ನಿಂದ ಅಲ್ಯೂಮಿನಿಯಂ ಅಕ್ಸೈಡ್ ಅನ್ನು ಪಡೆದುಕೊಳ್ಳಲಾಗುತ್ತದೆ. ಹೀಗೆ ಪಡೆದ ಅಲ್ಯೂಮಿನಿಯಂ ಆಕ್ಸೈಡ್ ಅನ್ನು ಅಧಿಕ ತಾಪಮಾನದಲ್ಲಿ ಎಲೆಕ್ಟ್ರೋಲಿಸಿಸ್ ಪ್ರಕ್ರಿಯೆ ಮೂಲಕ ಶುದ್ಧ ಅಲ್ಯೂಮಿನಿಯಮ್‌ಗೆ ಪರಿವರ್ತಿಸಲಾಗುತ್ತದೆ. ಶುದ್ಧ ಅಲ್ಯೂಮಿನಿಯಂ ಅನ್ನು ತೆಳುವಾಗಿಸುವಂತೆ ರೋಲಿಂಗ್ ಮಾಡಿದಾಗ ಅತಿ ತೆಳ್ಳಗಿನ ಶೀಟ್‌ಗಳು – ಅಲ್ಯೂಮಿನಿಯಂ ಫಾಯಿಲ್​ನ ರೂಪದಲ್ಲಿ ನಮಗೆ ದೊರೆಯುತ್ತದೆ.

ವಿವಿಧ ಕಾರಣಳಕ್ಕಾಗಿ ಬಳಕೆಯಾಗುವ ಈ ತೆಳ್ಳನೆಯ ಹೊದಿಕೆ ಚಾಕೋಲೇಟ್ ಅಥವಾ ತಿನಸುಗಳ ಸಂರಕ್ಷಣೆಯಲ್ಲಿ ಹೆಚ್ಚಾಗಿ ಬಳಸಲಾಗುವುದು. ಮಲ್ಟಿ ಲೇಯರ್ಡ್​ ಪ್ಲಾಸ್ಟಿಕ್ ಫಿಲ್ಮಗಳಲ್ಲಿ ಬಲವರ್ಧಿತ ಪ್ಲಾಸ್ಟಿಕ್ (Biaxially Oriented Polypropylene), ಜೊತೆಗೆ ಪ್ಯಾಕೇಜುಗಳ ಸ್ಥಿರತೆಗಾಗಿ ಪೊಲಿಸ್ಟರ್ ಅಥವಾ ಪಿ.ಇ.ಟಿ, ತೇವಾಂಶ ಮತ್ತು ಬೆಳಕು ತಡೆಯಲು ಅಲ್ಯೂಮಿನಿಯಂ ಫಾಯಿಲ್​ನ ಲೇಪನವಾಗುತ್ತದೆ. ಪ್ಲಾಸ್ಟಿಕ್ ಲ್ಯಾಮಿನೇಶನ್ ಈ ಎಲ್ಲವನ್ನೂ ಒಟ್ಟಾಗಿ ಹಿಡಿದಿಡುತ್ತದೆ. ನಾವು ಸವಿದು ತಿನ್ನುವ ತಿನಸುಗಳ ಪ್ಯಾಕೇಜಿಂಗ್ ಮೇಲೆ ಮಾಡುವ ಮುದ್ರಣದ ರಾಸಾಯನಿಕವೂ ಭೂಮಿಗೆ ಸೇರುತ್ತದೆ.

ಹಾಗಾದರೆ ನಾವು ತಿನ್ನಬಾರದೇ? ಸ೦ಭ್ರಮಾಚರಣೆ ಬೇಡವೇ? ತಿನ್ನುವುದು ಬೇಡವೆಂದೇನೂ ನಾವಿಲ್ಲ ಹೇಳುತ್ತಿಲ್ಲವಲ್ಲ. ನಮ್ಮ ಮಂಥನ ನಡೆದಿರುವುದು ಖಾಲಿಯಾದ ಪ್ಯಾಕೆಟ್​ಗಳನ್ನು ವಿಸರ್ಜಿಸುವಾಗ ನಮಗಿರುವ ನಿರ್ಲಕ್ಷ್ಯದ ನಡವಳಿಕೆಯತ್ತ. ಮಲ್ಟಿ-ಲೇಯರ್ ಫಿಲ್ಮ್‌ಗಳನ್ನು ಒಂದಕ್ಕೊಂದನ್ನು ಗಟ್ಟಿ ಜೋಡಿಸಿದ್ದರಿಂದ ಪ್ಲಾಸ್ಟಿಕ್ ಮತ್ತು ಅಲ್ಯೂಮಿನಿಯಂ ವಿಭಜಿಸಲು ಮತ್ತು ಮರುಬಳಕೆ ಮಾಡಲು ಸಾಧ್ಯವಿಲ್ಲ. ಪುನರ್ ಬಳಕೆಯಾಗದ ಈ ವಸ್ತು ಕಸದಲ್ಲಿ ಬಿಸುಡುವುದರಿಂದ ಅದು ಯಾವುದೋ ನದಿಯ ದಡವನ್ನೋ ಅಥವಾ ಭೂಭಾಗವನ್ನೋ ಸೇರಿ ಪ್ರಕೃತಿಗೆ ಭಾರವಾಗುವುದಂತೂ ನಿಜ. ಹೀಗಾಗಿ ಪುನರ್ ಬಳಕೆ ಮಾಡಬಹುದಾದ ವಸ್ತುಗಳನ್ನು ಬಳಸಿ ಪ್ಯಾಕೇಜಿಂಗ್ ಮಾಡಿರುವ ವಸ್ತುಗಳನ್ನು ಕೊಳ್ಳಬಹುದೇ ಎಂದು ಯೋಚಿಸುವುದೊಳ್ಳೆಯದು. ಭೂ ವಂದನದ ಉದ್ದೇಶವೇ ನಾವು ಹೇಗೆ ಸಣ್ಣಪ್ರಯತ್ನಗಳ ಮೂಲಕ ಭೂ ಹೊರೆಯನ್ನು ಕಡಿಮೆ ಮಾಡಬಹುದು ಎನ್ನುವತ್ತಲಿರುವುದರಿಂದ ಪರ್ಯಾಯ ವಸ್ತುಗಳ ಬಳಸಿದ ಉತ್ಪನ್ನಗಳ ಖರೀದಿಯತ್ತ ನಾವು ಹೆಜ್ಜೆಯಿಟ್ಟರೆ ಹೇಗೆ? ಹಾಗೆಯೇ ಮನೆಯಲ್ಲಿ ನಾವು ಆಹಾರವನ್ನು ಪ್ಯಾಕ್ ಮಾಡಿ ಕೊಂಡೊಯ್ಯುವಾಗ ಅಲ್ಯೂಮಿನಿಯಂ ಫಾಯಿಲ್‌ಗೆ ಪರ್ಯಾಯ ವಸ್ತುವಾಗಿ ಬಾಳೆಯ ಎಲೆಗಳು, ದಪ್ಪವಾದ ಕಾಗದ, ಬೀಸ್ವಾಕ್ಸ್ ವ್ರ್ಯಾಪ್ಸ, ಪಾರ್ಚ್‌ಮೆoಟ್ ಕಾಗದ ( ಬಟರ್ ಪೇಪರ್ )ಗಳನ್ನು ಬಳಸಬಹುದು, ಬಳಸಿದ ಉತ್ಪನ್ನಗಳನ್ನು ನೋಡಿ ಕೊಳ್ಳಬಹುದು.

ಮನೆಯಲ್ಲಿ ಅಥವಾ ನಮ್ಮ ಸುತ್ತ ಸೃಷ್ಠಿಯಾಗುವ ರಾಪರ್​ಗಳು, ಅಲ್ಯಮಿನಿಯಂ ಫೋಯಿಲ್‌ಗಳನ್ನು ನಾವು ಮನೆಯಲ್ಲೇ ಇಟ್ಟಿಗೆಗಳನ್ನು ತಯಾರಿಸಿ ಬಳಸುವ ವಿಧಾನವನ್ನು ಕಲಿಯುವುದು ಉತ್ತಮ. ನಾವು ಬಳಸುವ ಏಕ ಬಳಕೆಯ ಪ್ಲಾಸ್ಟಿಕ್ ಬಾಟಲಿಗಳಲ್ಲಿ ವಿಸರ್ಜಿತ ರಾಪರ್​ಗಳನ್ನು ಒತ್ತಿಒತ್ತಿ ತುಂಬಿ ಮುಚ್ಚಳವನ್ನು ಹಾಕಿದರೆ ನಮ್ಮ ಇಟ್ಟಿಗೆ ಸಿದ್ಧ. ಹೀಗೆ ಸಿದ್ಧಪಡಿಸಿದ ಇಟ್ಟಿಗೆಗಳನ್ನು ನಮ್ಮ ಮನೆಯ ಕೈತೋಟದ ಅಲಂಕಾರಕ್ಕಾಗಿ ಬಳಸಬಹುದು. ಇದೀಗ ಬಹಳಷ್ಟು ಕಡೆ ಪೀಠೋಪಕರಣಗಳ ತಯಾರಿಕೆಯಲ್ಲಿ, ಗೃಹ ನಿರ್ಮಾಣ ಕಾರ್ಯದಲ್ಲಿ ಪ್ಲಾಸ್ಟಿಕ್ ಇಟ್ಟಿಗೆಗಳನ್ನು ಬಳಸಲಾಗುತ್ತಿದೆ. ಇದಕ್ಕಾಗಿ ಮಾರುಕಟ್ಟೆಯೂ ಸಿದ್ಧವಾಗುತ್ತಿದೆ. ನಮಗೆ ಪ್ಲಾಸ್ಟಿಕ್ ಇಟ್ಟಿಗೆಗಳನ್ನು ಮಾರಾಟಮಾಡುವ ಆಲೋಚನೆಯಿದ್ದರೆ ಮೊದಲೇ ಈ ಕುರಿತು ಒಂದಿಷ್ಟು ಸ೦ಶೋಧನೆ ಮಾಡಿ ಕೊಳ್ಳುವವರ ಮಾಹಿತಿ, ಅವುಗಳನ್ನು ಮಾರಾಟಮಾಡಬಹುದಾದ ವಿವರಗಳನ್ನು ಪಡೆದುಕೊಳ್ಳಬಹುದು. ನಮ್ಮ ಸಣ್ಣ ಪ್ರಯತ್ನದಿಂದ ಎರಡು ಬಗೆಯ ತ್ಯಾಜ್ಯಗಳ ನಿಯಂತ್ರಣ ಮಾಡಿದಂತಾಗುತ್ತದೆ. ಭೂಮಿ ಸೇರಬಹುದಾದ ಆದರೆ ಭೂಮಿಗೆ ಬೇಡವಾದ ಏಕಬಳಕೆ ಪ್ಲಾಸ್ಟಿಕ್ ಮತ್ತು ಮಲ್ಟಿ ಲೇಯರ್ಡ ಫಿಲ್ಮ್​ಗಳು, ಮರುಬಳಕೆ ಮಾಡಬಹುದಾದರೂ ಜೈವಿಕವಲ್ಲದ ಅಲ್ಯುಮಿನಿಯಂ ಫಾಯಿಲ್ ಇವುಗಳನ್ನು ಪರೋಕ್ಷವಾಗಿ ಬಳಸಿದ ಸಮಾಧಾನ.

ತ್ಯಾಜ್ಯ ವಸ್ತು ನಿರ್ವಹಣೆಯಲ್ಲಿ ಜರ್ಮನಿ ವಿಶ್ವಕ್ಕೇ ಮಾದರಿಯೆನಿಸಿದೆ. ಅಲ್ಲಿನ ಸರ್ಕಾರದ ತ್ಯಾಜ್ಯ ನಿರ್ವಹಣೆ ಕುರಿತಾದ ಯೋಜನೆಗಳಿಗಿಂತ ಜನರು ಅದೆಷ್ಟು ಕಟ್ಟುನಿಟ್ಟಾಗಿ ತ್ಯಾಜ್ಯಗಳ ವಿಲೇವಾರಿಗೆ ಮುನ್ನ ವಿಂಗಡನೆ ಮಾಡುತ್ತಿದ್ದಾರೆನ್ನುವುದನ್ನು ನಾವು ಹೆಚ್ಚು ಗಂಭೀರರಾಗಿ ನೋಡಬೇಕಿದೆ. ಕರ್ನಾಟಕದಲ್ಲೂ ಇಂತಹ ಪ್ರಯತ್ನ ಉಡುಪಿ ಜಿಲ್ಲೆಯ ವಂಡ್ಸೆ ಗ್ರಾಮದಲ್ಲಿ ನಡೆದಿತ್ತು.

ನೆನಪಿಡೋಣ ನಾವು ಪ್ರತಿದಿನ ಬಳಸುವ ಚಿಕ್ಕಚಿಕ್ಕ ವಸ್ತುಗಳ ಬಗ್ಗೆಯೂ ಜವಾಬ್ದಾರಿ ಹೊಂದಿದಾಗ ಮಾತ್ರ ನಿಜವಾದ ಪರಿಸರಸ್ನೇಹಿ ಸಮಾಜ ನಿರ್ಮಾಣವಾಗುವುದು. ದಿನಕ್ಕೆ ಒಂದು ಪ್ಲಾಸ್ಟಿಕ್ ಅಥವಾ ಫಾಯಿಲ್ ಬಳಕೆಯನ್ನು ತಪ್ಪಿಸಿದರೂ ವರ್ಷಕ್ಕೆ ಸಾವಿರದಷ್ಟು ತ್ಯಾಜ್ಯವನ್ನು ಕಡಿಮೆ ಮಾಡಿದ ನೆಮ್ಮದಿ ನಮ್ಮದಾಗಲಿ!

ಲೇಖಕರ ಪರಿಚಯ

ಲೇಖಕರು ನoದಿನಿ ಲಕ್ಷ್ಮೀಕಾಂತ್. ಆರೋಗ್ಯ ಸoಶೋಧಕರು, ಬರಹಗಾರರು ಮತ್ತು ಸಂವಹನಕಾರರು. ICSSR ಇವರನ್ನು ಹಿರಿಯ ಸoಶೋಧಕಿಯೆಂದು ಗುರುತಿಸಿದೆ. ಶ್ರೀ ಚಿದಂಬರ ರಿಸಚ್೯ ಮತ್ತು ಡೆವಲಪ್ಮೆಂಟ್, ಗುಬ್ಬಿ, ಇದರ ಕಾಯ೯ನಿವಾ೯ಹಕರು. ರಚಯಿತಾ ಟ್ರಸ್ಟ್​ನ ಸಂಸ್ಥಾಪಕರು.