ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಶಾಸ್ತ್ರೀಯ ನೃತ್ಯ ಕಲೆ ಆದಿನಾಥ ತೀರ್ಥಂಕರ ಕಾಲದಲ್ಲೇ ಆರಾಧನಾ ಪದ್ಧತಿಯಾಗಿತ್ತು. ಭರತನಾಟ್ಯದಿಂದ ನವರಸಗಳ ಪ್ರಾಮುಖ್ಯತೆ, ಸೌಂದರ್ಯ ಪ್ರಜ್ಞೆ, ಶಾಂತ ರಸ, ಭಕ್ತಿ, ಜ್ಞಾನ ರಸಗಳ ಸೌಂದರ್ಯ ನೃತ್ಯಗಾರರಿಗೆ ವಾತ್ರವಲ್ಲದೆ ನೋಡುವ ಪ್ರೇಕ್ಷಕರಿಗೂ ತಿಳಿಯುತ್ತದೆ. ನೃತ್ಯ, ಅಭಿನಯ ಮೂಲಕ ಪ್ರಸ್ತುತಗೊಳ್ಳುವ ಭರತನಾಟ್ಯ ಉತ್ತಮ ಕಲಾ ಪ್ರಜ್ಞೆ ಮೂಡಿಸುತ್ತದೆ ಎಂದು ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಹೇಳಿದರು. ಶ್ರೀದೇವಿ ನೃತ್ಯ ಕೇಂದ್ರ ಮಂಗಳೂರು ಹಾಗೂ ಧವಳತ್ರಯ ಜೈನ ಕಾಶಿ ಟ್ರಸ್ಟ್, ಶ್ರೀ ದಿಗಂಬರ ಜೈನಮಠ ಸಹಯೋಗದಲ್ಲಿ ಭಾನುವಾರ ಭರತನಾಟ್ಯ ತರಗತಿ ಉದ್ಘಾಟಿಸಿ ಆಶೀರ್ವಚನ ನೀಡಿದರು. ನೃತ್ಯ ಕೇಂದ್ರದ ಸ್ಥಾಪಕ ಟ್ರಸ್ಟಿ ಡಾ.ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿ ಮಾತನಾಡಿ, ಮೂಡುಬಿದಿರೆ ಜೈನಮಠ ಕಲೆ, ಸಾಹಿತ್ಯ, ಸಂಸ್ಕೃತಿಗೆ ನಿರಂತರ ಪ್ರೋತ್ಸಾಹ ನೀಡುತ್ತಿರುವುದು ಶ್ಲಾನೀಯ ಎಂದರು. ಟ್ರಸ್ಟಿಗಳಾದ ಪ್ರದೀಪ್ ಕುವಾರ್ ಕಲ್ಕೂರ, ಮಿಥುನ್ ರೈ, ಯುಗಪುರುಷದ ಭುವನಾಭಿರಾಮ ಉಡುಪ ಉಪಸ್ಥಿತರಿದ್ದರು. ನೃತ್ಯ ನಿರ್ದೇಶಕಿ ಡಾ.ಆರತಿ ಶೆಟ್ಟಿ ಪ್ರಸ್ತಾವನೆಗೈದರು. ವಿದುಷಿ ನಯನಾ ಕೆ. ನಿರೂಪಿಸಿದರು. ಟ್ರಸ್ಟಿ ಹರೀಶ್ ಶೆಟ್ಟಿ ವಂದಿಸಿದರು.