ಗುರುಪುರ: ಸಿಇಟಿ ಪರೀಕ್ಷೆ ಬರೆಯಲು ಬಂದಿದ್ದ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ಕತ್ತರಿಸಿದ ಪೊಲೀಸರಿಗೆ ಹಿಜಾಬ್ ಧರಿಸಿ ಬಂದು ಪರೀಕ್ಷೆ ಬರೆದ ವಿದ್ಯಾರ್ಥಿಗಳ ಮುಂದೆ ಈ ಧೈರ್ಯ ಯಾಕೆ ಬಂದಿಲ್ಲ? ಈ ಸರ್ಕಾರಕ್ಕೆ ಬ್ರಾಹ್ಮಣರ ಶಾಪ ತಟ್ಟಿದ್ದು ಇದರ ಪರಿಣಾಮ ಶೀಘ್ರ ತಿಳಿಯಲಿದೆ. ಪೊಲೀಸರ ಅತಿರೇಕದ ವರ್ತನೆ ಹೆಚ್ಚುತ್ತಿದೆ ಎಂದು ಶಾಸಕ ಡಾ.ಭರತ್ ಶೆಟ್ಟಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕಾವೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಹಿಂದುಗಳ ದಮನಿಸುವ ಮತ್ತು ಅವಮಾನಿಸುವ ಕೆಲಸ ನಡೆಯುತ್ತಿದೆ. ಹಿಂದುಪರ ಹೋರಾಟಗಾರರು ಹಾಗೂ ಶಾಸಕರ ವಿರುದ್ಧ ಕೇಸ್ ಮೇಲೆ ಕೇಸ್ ಜಡಿಯಲಾಗುತ್ತಿದೆ. ಇದೀಗ ಒಂದು ಹೆಜ್ಜೆ ಮುಂದೆ ಇಟ್ಟಿರುವ ಈ ಸರ್ಕಾರ ಬ್ರಾಹ್ಮಣರ ಜನಿವಾರ ಕತ್ತರಿಸಿದೆ ಎಂದು ಕಿಡಿ ಕಾರಿದರು. ಹಿಂದುಪರ ಯಾವುದೇ ಕೆಲಸ ಮಾಡದ ಈ ಸರ್ಕಾರ ವಕ್ಫ್ ಕಾಯ್ದೆ ಜಾರಿ ಮಾಡುದಿಲ್ಲ. ಒಂದೇ ಮತದವರ ಕ್ರಿಮಿನಲ್ ಕೇಸ್ ತೆಗೆದು ಹಾಕುತ್ತದೆ. ಅವರಿಗೆ ಶೇ.4 ಮೀಸಲಾತಿ ನೀಡುತ್ತದೆ. ಓಟ್ ಬ್ಯಾಂಕ್ ರಾಜಕೀಯಕ್ಕೆ ಶರಣಾಗಿ ಬಹುಸಂಖ್ಯಾತರಿಗೆ ಅನ್ಯಾಯ ಮಾಡುತ್ತಿದೆ. ಇದಕ್ಕೆ ಶೀಘ್ರ ಇತಿಶ್ರೀ ಸಿಗಲಿದೆ ಎಂದರು.
ಅರ್ಧ ದಿನ ಸಂಚಾರ ತೊಡಕು
ವಾಕ್ಫ್ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ರಾಜ್ಯದ ಸರ್ಕಾರ ಪ್ರೇರಿತ ಪ್ರತಿಭಟನೆ ವೇಳೆ ಮಂಗಳೂರು ಬೆಂಗಳೂರು ಹೆದ್ದಾರಿ ಅರ್ಧ ದಿನ ಸಂಚಾರ ತೊಡಕಾಗುವಂತೆ ಮಾಡಿ ಹೈಕೋರ್ಟ್ ಆದೇಶ ಉಲ್ಲಂಘಿಸಿ ತುರ್ತು ಕೆಲಸಕ್ಕೆ ಹೋಗುವ ಮಂದಿಯನ್ನು ವಿನಾಕಾರಣ ಸಂಕಷ್ಟಕ್ಕೀಡು ಮಾಡಲಾಗಿದೆ. ಹೈಕೋರ್ಟ್ ಆದೇಶ ಪಾಲಿಸುವಲ್ಲಿ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಎಡವಿದೆ. ಹೆದ್ದಾರಿ ಬಂದ್ ಮಾಡಿರುವುದು ಗೊತ್ತಿದ್ದರೂ ತಾವು ಕಾರ್ಯಕ್ರಮದಲ್ಲಿ ಪಾಲ್ಗೊಂಡದಲ್ಲದೆ ಹೆದ್ದಾರಿ ಬಂದ್ ಖಂಡಿಸದೆ, ಸಮರ್ಥಿಸಿಕೊಂಡು ತಮ್ಮ ಹಿಂದು ವಿರೋಧಿ ನೀತಿ ಜಗಜ್ಜಾಹೀರು ಮಾಡಿದ್ದಾರೆ. ಇಂತಹ ಹೋರಾಟಗಾರರ ಬಗ್ಗೆ ಜನತೆ ಎಚ್ಚರಿಕೆ ವಹಿಸಿ, ಪ್ರತಿಭಟನೆ ಆಯೋಜಕರ ವಿರುದ್ಧ ಸೂಕ್ತ ದಂಡನ ಕ್ರಮ ಹಾಗೂ ಹೆದ್ದಾರಿ ಕಾನೂನಿನಂತೆ ಐದು ನಿಮಿಷಕ್ಕಿಂತ ಹೆಚ್ಚು ಹೆದ್ದಾರಿ ತಡೆ ಮಾಡಿದ ಆರೋಪದ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಹೆದ್ದಾರಿ ಇಲಾಖೆಯನ್ನು ಡಾ.ಭರತ್ ಶೆಟ್ಟಿ ಆಗ್ರಹಿಸಿದ್ದಾರೆ.