ಗುರುಪುರ: ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮಹತ್ವ ತಿಳಿದುಕೊಂಡಿದೆ. ಸಂಸ್ಥೆಗೆ ಸರ್ಕಾರಗಳಿಂದ ಸೂಕ್ತ ಉತ್ತೇಜನ ಸಿಗುತ್ತಿದೆ. ವಿಪತ್ತು ಸಂದರ್ಭಗಳಲ್ಲಿ ಸಂಸ್ಥೆಯ ಸ್ವಯಂಸೇವಕರು ದೇಶದಲ್ಲಿ ಅರೆ ಸೈನಿಕರಂತೆ ಕೆಲಸ ನಿರ್ವಹಿಸಬೇಕು. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ವಿಪತ್ತು ನಿರ್ವಹಣಾ ತಂಡ ರಚಿಸುವಂತೆ ಸರ್ಕಾರಕ್ಕೆ ಕೇಳಿಕೊಂಡಿದ್ದೇವೆ ಎಂದು ರಾಜ್ಯದ ಭಾರತ್ ಸ್ಕೌಟ್ಸ್-ಗೈಡ್ಸ್‌ನ ಮುಖ್ಯ ಆಯುಕ್ತ, ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಹೇಳಿದರು.
ಮೂಡುಶೆಡ್ಡೆ ಪಿಲಿಕುಳದಲ್ಲಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ದ.ಕ.ಜಿಲ್ಲಾ ತರಬೇತಿ ಕೇಂದ್ರದಲ್ಲಿ ಕಳೆದ ಒಂದು ವಾರದಿಂದ ದ.ಕ ಮತ್ತು ಕೊಡಗು ಜಿಲ್ಲೆಯ ರೋವರ್ಸ್ ಮತ್ತು ರೇಂಜರ್ಸ್‌ಗಳಿಗಾಗಿ ‘ಯುವ ಆಪದ್ ಮಿತ್ರ’ ಯೋಜನೆಯಡಿ ಆಯೋಜಿಸಲಾದ ವಿಪತ್ತು ನಿರ್ವಹಣೆ ತರಬೇತಿ ಕಾರ್ಯಕ್ರಮದ ಸಮಾರೋಪದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತರಬೇತಿಯಲ್ಲಿ ಪಾಲ್ಗೊಂಡ ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲಾ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಸಿಂಧ್ಯಾ ಅವರನ್ನು ಸನ್ಮಾನಿಸಲಾಯಿತು. ತೇಜಸ್ವಿನಿ, ದೀಕ್ಷಾ, ಉಮಾವತಿ, ಅಕ್ಷಯ್ ಮತ್ತು ರೋಶನ್ 7 ದಿನದ ತರಬೇತಿಯಲ್ಲಿ ಕಲಿತ ವಿಷಯ ಹಾಗೂ ಊಟೋಪಚಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕೊಡಗು ಜಿಲ್ಲಾ ಗೈಡ್ಸ್ ಆಯುಕ್ತೆ ರಾಣಿ ಮಾಚಯ್ಯ ಮಾತನಾಡಿದರು. ರಾಜ್ಯ ಸಂಸ್ಥೆಯ ಗೈಡ್ ಆಯುಕ್ತೆ ಲತಾ ಎಂ., ದ.ಕ.ಜಿಲ್ಲಾ ಆಯುಕ್ತ ಬಿ.ಮುಹಮ್ಮದ್ ತುಂಬೆ, ಪ್ರತೀಮ್, ಹ್ಯಾಮ್(ಎಚ್‌ಎಎಂ ರೇಡಿಯೋ) ನಿರ್ದೇಶಕ ಮಂಜು ಬೆಂಗಳೂರು, ದ.ಕ.ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ ಪೂಜಾರಿ, ಗುರುಪುರ ಸ್ಥಳೀಯ ಸಂಸ್ಥೆ ಉಪಾಧ್ಯಕ್ಷ ಸುನೀಲ್ ಗಂಜಿಮಠ, ಜಿಲ್ಲಾ ಜಂಟಿ ಕಾರ್ಯದರ್ಶಿ ಜಯವಂತಿ ಸೋನ್ಸ್ ಉಪಸ್ಥಿತರಿದ್ದರು. ಎಎಸ್‌ಒಸಿ ಭರತ್‌ರಾಜ್ ಸ್ವಾಗತಿಸಿ, ನಿರೂಪಿಸಿದರು. ಜಿಲ್ಲಾ ಕಾರ್ಯದರ್ಶಿ ಪ್ರತಿಮ್ ಕುಮಾರ್ ವಂದಿಸಿದರು.