ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಮಾನವರನ್ನು ಮೆಚ್ಚಿಸುವುದಕ್ಕಿಂತ ಭಗವಂತನನ್ನು ಮೆಚ್ಚಿಸುವುದು ಮುಖ್ಯ. ಕಲಿಯುಗದಲ್ಲಿ ಭಗವಂತನನ್ನು ಒಲಿಸಿಕೊಳ್ಳಲಿರುವ ಏಕೈಕ ಮಾರ್ಗ ಭಜನೆ ಎಂದು ವಕೀಲೆ ಸಹನಾ ಕುಂದರ್ ಹೇಳಿದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಆಯೋಜಿಸಿರುವ 27ನೇ ವರ್ಷದ ಭಜನಾ ತರಬೇತಿ ಕಮ್ಮಟದ 6ನೇ ದಿನದ ಕಾರ್ಯಾಗಾರದಲ್ಲಿ ಶುಕ್ರವಾರ ‘ಸಾಮಾಜಿಕ ಸಾಮರಸ್ಯ ಮೂಡಿಸುವಲ್ಲಿ ಭಜನೆಯ ಪಾತ್ರ’ ವಿಚಾರದ ಕುರಿತು ಉಪನ್ಯಾಸ ನೀಡಿದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಪಾಧ್ಯಕ್ಷ ಡಿ.ಹರ್ಷೇಂದ್ರ ಕುಮಾರ್ ಮಾತನಾಡಿ, ಭಜನೆ ಎಂಬುದು ನಿತ್ಯ, ನಿರಂತರ, ನೂತನವಾಗಬೇಕು. ಇಂದು ವಿದ್ಯಾವಂತ ಮತ್ತು ವಿಚಾರವಂತರಾದ ನಾವು ಆಚಾರವಂತರಾಗಬೇಕಿದೆ ಎಂದರು.
ಉಜಿರೆ ಶ್ರೀ ಜನಾರ್ದನ ದೇವಸ್ಥಾನ ಆನುವಂಶಿಕ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡ್ವೆಟ್ನಾಯ ಮಾತನಾಡಿದರು. ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಸೇವಾ ಪ್ರತಿಷ್ಠಾನದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಭಜನಾ ಕಮ್ಮಟ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್, ಕಾರ್ಯದರ್ಶಿ ಎ.ವಿ.ಶೆಟ್ಟಿ, ಭಜನಾ ಪರಿಷತ್ ಅಧ್ಯಕ್ಷ ಚಂದ್ರಶೇಖರ ಸಾಲ್ಯಾನ್, ಉಪಾಧ್ಯಕ್ಷ ರಾಜೇಂದ್ರ ಕುಮಾರ್ ಬಸ್ರೂರು, ಪದ್ಮರಾಜ್ ಜೈನ್, ಭಜನಾ ಕಮ್ಮಟ ಸಮನ್ವಯಾಧಿಕಾರಿಗಳಾದ ಸಂತೋಷ್ ಪಿ.ಅಳಿಯೂರು ಹಾಗೂ ರವೀಂದ್ರ ಉಪಸ್ಥಿತರಿದ್ದರು. ಶಿಕ್ಷಕ ನಿಶಾಂತ್ ಕಾರ್ಯಕ್ರಮ ನಿರೂಪಿಸಿದರು.
ಒಳ್ಳೆಯ ಕಾರ್ಯಗಳನ್ನು ಮಾಡಿದರೆ ಸಜ್ಜನರು ಮತ್ತು ಭಗವಂತನೂ ಒಲಿಯುತ್ತಾನೆ. ಇಂದಿನ ಪೀಳಿಗೆಗೆ ಆಧ್ಯಾತ್ಮಿಕ ಮತ್ತು ನೈತಿಕ ಶಿಕ್ಷಣ ಅಗತ್ಯ. ಅದನ್ನು ಪರಿಪೂರ್ಣಗೊಳಿಸುವ ಹೊಣೆಗಾರಿಕೆ ಪಾಕರದ್ದು. ಬದುಕು ಬದಲಾಯಿಸಬಲ್ಲ ಧೀಮಂತ ಶಕ್ತಿಯಾದ ಭಜನೆಯ ಆಸಕ್ತಿಯನ್ನು ಯುವ ಮನಸ್ಸುಗಳಲ್ಲಿ ಬಿತ್ತಬೇಕಿದೆ. ಸಹನಾ ಕುಂದರ್ ವಕೀಲೆ