ಹೆಪ್ಪನಡ್ಕ ಸೇತುವೆ ಮಧ್ಯಭಾಗದಲ್ಲಿ ಹೊಂಡ ನಿರ್ಮಾಣಗೊಂಡಿರುವುದು  
ಜಿಲ್ಲೆ

ಎಚ್ಚರ… ಸೇತುವೆ ಕುಸಿದಿದೆ! ಹೆಪ್ಪನಡ್ಕ ಸೇತುವೆ ಮಧ್ಯೆ ಹೊಂಡ : ಪ್ರಾಣಭಯದಲ್ಲೇ ಸಂಚಾರ

ಇಂದಿರಾ ಎನ್ ಕೆ

ಹರಿಪ್ರಸಾದ್ ನಂದಳಿಕೆ ಕಾರ್ಕಳ

ಕೆರ್ವಾಶೆಯಿಂದ ಶಿರ್ಲಾಲು ಗ್ರಾಮ ಸಂಪರ್ಕಿಸುವ ಪ್ರಮುಖ ಕೊಂಡಿಯಾಗಿರುವ ಹೆಪ್ಪನಡ್ಕ ಸೇತುವೆ ಮಧ್ಯ ಭಾಗ ಕುಸಿದಿದ್ದು ವಾಹನ ಸವಾರರು, ಪಾದಚಾರಿಗಳ ಸಹಿತ ಎರಡೂ ಗ್ರಾಮದ ಜನ ಆತಂಕಕ್ಕೀಡಾಗಿದ್ದಾರೆ.

ತಾಲೂಕಿನ ಶಿರ್ಲಾಲು ಹಾಗೂ ಕೆರ್ವಾಶೆ ಗ್ರಾಮೀಣ ಭಾಗವಾಗಿದ್ದು, ಈ ರಸ್ತೆಯಲ್ಲಿ ನಿತ್ಯ ನೂರಾರು ವಾಹನಗಳು ಓಡಾಟ ನಡೆಸುತ್ತವೆ. ಗ್ರಾಮದ ಜನತೆ ಇದೇ ಸೇತುವೆಯನ್ನು ಅವಲಂಬಿಸಿದ್ದು, ಶಾಲೆ, ಕಾಲೇಜಿಗೆ ವಿದ್ಯಾರ್ಥಿಗಳು ಇದೇ ಸೇತುವೆ ದಾಟಿಕೊಂಡು ಸಾಗಬೇಕಾಗಿದೆ. ಎರಡು ವಾರಗಳ ಹಿಂದೆ ಸೇತುವೆ ಮಧ್ಯಭಾಗದಲ್ಲೇ ಕುಸಿತವಾಗಿದೆ. ಜನರು ಅತ್ತಿತ್ತ ಸಾಗಲು ಭಯಪಡುವ ವಾತಾವರಣ ನಿರ್ಮಾಣಗೊಂಡಿದೆ. ಘನ ವಾಹನ ಓಡಾಟ ಅಪಾಯಕಾರಿಯಾಗಿದೆ. ನಿತ್ಯ ವಾಹನ ಸಂಚಾರದಿಂದ ಹೊಂಡ ಮತ್ತಷ್ಟು ದೊಡ್ಡದಾಗಿ ಸೇತುವೆ ಕುಸಿಯುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಈ ಭಾಗದಲ್ಲಿ ಸಂಚಾರ ನಡೆಸುವ ಮಂದಿ ಪ್ರಾಣಭಯದಲ್ಲೇ ಸಾಗುವಂತಾಗಿದೆ.

ಪ್ರಮುಖ ಸಂಪರ್ಕ ಕೊಂಡಿ

ಹೆಪ್ಪನಡ್ಕ ಸೇತುವೆಯಾಗಿ ಸಾಗುವ ರಸ್ತೆ ಸುತ್ತಮುತ್ತಲಿನ ಹಲವು ಗ್ರಾಮಗಳಿಗೆ ಸಂಪರ್ಕ ಕೊಂಡಿಯಾಗಿದೆ. ಹೆಬ್ರಿ, ಕುಂದಾಪುರ, ಶಿವಮೊಗ್ಗ ಕಡೆಯಿಂದ ಕಳಸ, ಹೊರನಾಡು, ಧರ್ಮಸ್ಥಳ ಭಾಗಗಳಿಗೆ ಸಂಚರಿಸುವ ವಾಹನ ಸವಾರರು ಇದೇ ಸೇತುವೆ ಅವಲಂಬಿಸಿದ್ದಾರೆ. ಹೆಬ್ರಿ, ಮುನಿಯಾಲು, ಕಾಡುಹೊಳೆ, ಅಂಡಾರು, ಶಿರ್ಲಾಲು, ಕೆರ್ವಾಶೆ ಮಾರ್ಗವಾಗಿ ಬಜಗೋಳಿ ಮೂಲಕ ಧರ್ಮಸ್ಥಳ, ಹೊರನಾಡು ಅಥವಾ ಮುನಿಯಾಲು ಕಾಡುಹೊಳೆ, ಅಂಡಾರು ಶಿರ್ಲಾಲು ಬಂಗ್ಲೆಗುಡ್ಡೆ ಮೂಲಕ ಕೂಡುಬೆಟ್ಟು ಮಾರ್ಗವಾಗಿ ಮಾಳ, ಕಳಸ ಹೊರನಾಡು ಸಂಪರ್ಕಿಸಲು ಹತ್ತಿರದ ರಸ್ತೆಯಾಗಿದೆ. ನಿತ್ಯ ಹೊರ ಜಿಲ್ಲೆ ಹಾಗೂ ಹೊರ ರಾಜ್ಯದ ಪ್ರವಾಸಿ ವಾಹನಗಳು ಇದೇ ರಸ್ತೆಯಲ್ಲಿ ಸಂಚಾರಿಸುತ್ತವೆ. ಹೀಗಾಗಿ ಹೊಸದಾಗಿ ಬರುವ ವಾಹನ ಸವಾರರು ಸೇತುವೆ ಕುಸಿದಿರುವ ಅಡಿವಿಲ್ಲದೆ ಎಡವಟ್ಟು ಮಾಡಿಕೊಳ್ಳುವ ಪರಿಸ್ಥಿತಿ ಇದೆ.

ಹಳೆಯ ಸೇತುವೆ

1967ರಲ್ಲಿ ಲೋಕೋಪಯೋಗಿ ಇಲಾಖೆಯಿಂದ ಈ ಸೇತುವೆ ನಿರ್ಮಾಣಗೊಂಡಿದ್ದು, ಸುಮಾರು 57 ವರ್ಷ ಕಳೆದಿವೆ. ಆ ಬಳಿಕ ದುರಸ್ತಿ ಕಾರ್ಯ ನಡೆದಿರಲಿಲ್ಲ. ಇದೀಗ ಎರಡು ವರ್ಷಗಳ ಹಿಂದೆ ಈ ಸೇತುವೆ ದುರಸ್ತಿಗೊಳಿಸಲಾಗಿತ್ತು. ಕೆಳಭಾಗದ ಕಂಬಗಳಿಗೆ ಹಾಕಲಾಗಿದ್ದ ಸಿಮೆಂಟ್ ಕಿತ್ತು ಹೋಗಿದ್ದು ಮತ್ತೆ ಕಾಂಕ್ರೀಟ್ ಹಾಕಿ ಸರಿಪಡಿಸಲಾಗಿತ್ತು. ರಸ್ತೆ ತಡೆಗೋಡೆ ಕೂಡ ಸರಿಪಡಿಸಿ ಸಂಚಾರಕ್ಕೆ ಯೋಗ್ಯ ಸೇತುವೆಯಾಗಿ ಮಾರ್ಪಡಿಸಲಾಗಿತ್ತು. ಎರಡು ವರ್ಷಗಳ ಹಿಂದೆ ನಿರ್ವಹಣೆಯನ್ನು ಲೋಕೋಪಯೋಗಿ ಇಲಾಖೆ ಮಾಡಿದ್ದರೂ ಸೇತುವೆ ಮಧ್ಯ ಭಾಗದಲ್ಲೇ ಕುಸಿತಗೊಂಡಿದೆ.

ಹೊಸ ಸೇತುವೆ ನಿರ್ಮಾಣ ಎಂದು?

ಸೇತುವೆ ಮತ್ತಷ್ಟು ಕುಸಿಯುವ ಮುನ್ನ ಇಲಾಖೆ ಹಾಗೂ ಜನಪ್ರತಿನಿಧಿಗಳು ಸರ್ಕಾರ ಎಚ್ಚೆತ್ತು, ನೂತನ ಸೇತುವೆ ನಿರ್ಮಾಣಕ್ಕೆ ಮನ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಹಳೆಯ ಸೇತುವೆಯಾದ ಕಾರಣ ಹೊಸ ಸೇತುವೆ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯಲು ಮುಂದಾಗಿದ್ದಾರೆ.

ಹೊಸ ಸೇತುವೆ ನಿರ್ಮಾಣ ಬೇಡಿಕೆ ಇದ್ದು, ಈ ಬಗ್ಗೆ ಉನ್ನತಾಧಿಕಾರಿಗಳಿಗೆ ಪತ್ರ ಬರೆಯಲಾಗುವುದು. ಸೇತುವೆ ಮಧ್ಯಭಾಗ ಕುಸಿತವಾದ ಬಗ್ಗೆ ಈಗಾಗಲೇ ಮಾಹಿತಿ ಬಂದಿದೆ. ಆದಷ್ಟು ಬೇಗ ಸರಿಪಡಿಸಲು ಕಾಮಗಾರಿ ಕೈಗೊಳ್ಳಲಾಗುವುದು.-ಸೋಮಶೇಖರ್ ಸಿ., ಲೋಕೋಪಯೋಗಿ ಇಲಾಖೆ ಅಭಿಯಂತರರು ಕಾರ್ಕಳ
ಮಳೆಗಾಲದಲ್ಲಿ ತುಂಬಿ ಹರಿಯುವ ಈ ಸೇತುವೆಯಲ್ಲಿ ಸಣ್ಣಪುಟ್ಟ ವಾಹನಗಳು ಅತ್ತಿತ್ತ ಓಡಾಡಿದರೂ ಇಡೀ ಸೇತುವೆ ಅಲುಗಾಡುತ್ತದೆ. ಯಾವ ಸಂದರ್ಭ ಕುಸಿದು ಬೀಳುತ್ತದೆ ಎನ್ನುವ ಭಯ ಕಾಡುತ್ತದೆ. ನಿತ್ಯ ನಾವು ಇದೇ ಸೇತುವೆ ದಾಟಿ ಸಾಗಬೇಕಾಗಿದ್ದು ಪ್ರಾಣಭಯದಲ್ಲೇ ಸಾಗುವಂತಾಗಿದೆ.-ಸುಚಿತ್ರಾ, ಗ್ರಾಮಸ್ಥರು