ಬೆಂಗಳೂರು: ನಗರದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ನಿಯಂತ್ರಣಾ ಕೊಠಡಿ/ಸಹಾಯವಾಣಿಗಳಿಗೆ ಸಾರ್ವಜನಿಕರಿಂದ ಬರುವ ಕರೆಗಳನ್ನು ಸ್ವೀಕರಿಸಿ ತಕ್ಷಣ ಸ್ಪಂದಿಸಬೇಕು. ಕರೆ ಸ್ವೀಕರಿಸದೇ ಇರುವ ಬಗ್ಗೆ ದೂರುಗಳು ಬಂದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ನಡೆದ ಸಭೆಯಲ್ಲಿ ಮಾತನಾಡಿದರು.
ನಗರದಲ್ಲಿ ಯಾವುದೇ ಸಾವು, ನೋವು ಸಂಭವಿಸದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು. ಬಿಬಿಎಂಪಿ, ಪೊಲೀಸ್, ಅರಣ್ಯ, ಸಾರಿಗೆ ಹಾಗೂ ಅಗ್ನಿಶಾಮಕ ಇಲಾಖೆಗಳು ಸಮನ್ವಯ ಸಾಧಿಸಿ ಕೆಲಸ ಮಾಡಬೇಕು ಎಂದು ಆದೇಶಿಸಿದರು.
ಇದನ್ನೂ ಓದಿ ಮಾಸ್ಕ್ ಹಾಕಿದರಷ್ಟೇ ದೇವರ ದರ್ಶನ ಭಾಗ್ಯ
ಅಪಾಯಕಾರಿ ರೆಂಬೆ- ಕೊಂಬೆ ಗಳನ್ನು ಗುರುತಿಸಿ ಕತ್ತರಿಸಬೇಕು. ಎರಡು ದಿನಗಳಲ್ಲಿ ನಗರದಲ್ಲಿ ಮಳೆಯಿಂದ ಬಿದ್ದ ಮರಗಳನ್ನು ತೆರವುಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ನಗರ ಸಂಚಾರಕ್ಕೆ ಬಂದ ಸಂದರ್ಭದಲ್ಲಿ ಲೋಪ ಕಂಡುಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಮರಗಳ ನೆರಳಲ್ಲಿ ಯಾವುದೇ ವಾಹನಗಳನ್ನು ನಿಲ್ಲಿಸದಂತೆ ಮುನ್ನೆಚ್ಚರಿಕೆ ವಹಿಸಿ ಅನಾಹುತವಾಗುವುದನ್ನು ತಡೆಗಟ್ಟಬೇಕು. ನಗರದ 8 ವಲಯಗಳಲ್ಲಿ ಮ್ಯಾನ್ಹೋಲ್ಗಳನ್ನು ಮುಚ್ಚಬೇಕು. ಜೆಟ್ಟಿಂಗ್ ಮಷಿನ್ಗಳು ಲಭ್ಯವಿರಬೇಕು ಎಂದರು.
ಸಚಿವ ಭೈರತಿ ಬಸವರಾಜ್, ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್ ಕುಮಾರ್, ಬೆಂಗಳೂರು ನಗರ ಪೋಲೀಸ್ ಆಯುಕ್ತ ಭಾಸ್ಕರ್ ರಾವ್, ನಗರಾಭಿವೃದ್ಧಿ ಇಲಖೆ ಅಪರ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ಉಪಸ್ಥಿತರಿದ್ದರು.
ಇದನ್ನೂ ಓದಿ ಎಸಿಬಿ ವಿಚಾರಣೆ ಎದುರಿಸಿದ ಎಸಿಪಿ
ಮುಖ್ಯಾಂಶಗಳು
ಮರಗಳ ಕೆಳಗೆ ಯಾವುದೇ ವಾಹನಗಳನ್ನು ನಿಲ್ಲಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು.
ಬೆಂಗಳೂರು ನಗರದ 8 ವಲಯಗಳಲ್ಲಿ ಮ್ಯಾನ್ಹೋಲ್ಗಳನ್ನು ಮುಚ್ಚಬೇಕು.
ಜೆಟ್ಟಿಂಗ್ ಮಷಿನ್ಗಳು ಲಭ್ಯವಿರುವಂತೆ ನೋಡಿಕೊಳ್ಳಬೇಕು.
ಇಲಾಖೆಗಳು ಸಮನ್ವಯ ಸಾಧಿಸಿ ಕೆಲಸ ಮಾಡಿ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು.