ಗಂಗಾವತಿ: ಕರ್ನಾಟಕ ಬೆಳೆಯಬೇಕಾದರೆ ಕನ್ನಡ ಭಾಷೆ ಹೆಚ್ಚು ಪ್ರೀತಿಸಬೇಕು. ಜತೆಗೆ ಇನ್ನೊಬ್ಬರಿಗೆ ಭಾಷೆ ಕಲಿಸಲು ಪ್ರೇರಣೆಯಾಗಬೇಕಿದೆ ಎಂದು ರಾಯಚೂರು ಆಕಾಶವಾಣಿ ವಿಶ್ರಾಂತ ಮುಖ್ಯಸ್ಥ ಡಾ.ಬಿ.ಎಂ.ಶರಭೇಂದ್ರಸ್ವಾಮಿ ಸಲಹೆ ನೀಡಿದರು.
ನಗರದ ಬೇತೆಲ್ ಆಂಗ್ಲ ಮಾಧ್ಯಮ ಶಾಲೆ ಆವರಣದಲ್ಲಿ ಬೇತೆಲ್ ಸಮೂಹ ಶಿಕ್ಷಣ ಸಂಸ್ಥೆಯಿಂದ ನಾಡಹಬ್ಬದ ತಿಂಗಳ ಕಾರ್ಯಕ್ರಮ ನಿಮಿತ್ತ ಶನಿವಾರ ಹಮ್ಮಿಕೊಂಡಿದ್ದ ಕನ್ನಡ ನುಡಿ ಹಬ್ಬ ಉದ್ಘಾಟಿಸಿ ಮಾತನಾಡಿದರು. ಕನ್ನಡ ಕೇವಲ ಭಾಷೆಯಲ್ಲ. ಅದು ಬದುಕಿನ ಸಂಸ್ಕೃತಿ. ಜೀವನ, ಮಮತೆ ಮತ್ತು ಅಭಿಮಾನದಿಂದ ತುಂಬಿರುವ ಭಾಷೆಯ ಹೆಚ್ಚು ಪಸರಿಸುವ ಅಗತ್ಯವಿದೆ ಎಂದರು.
ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನ ಪ್ರಭಾರ ಪ್ರಾಚಾರ್ಯ ಡಾ.ಜಾಜಿ ದೇವೇಂದ್ರಪ್ಪ ಮಾತನಾಡಿ, ಕನ್ನಡ ಭಾಷೆಗೆ ಪ್ರೇಮ, ಕಾಳಜಿ ಬೇಕಿದೆ. ನರ್ಸರಿಯಿಂದ ಪದವಿ ಶಿಕ್ಷಣದ ಮಹತ್ವ ಪಡೆದ ಸಂಸ್ಥೆಗಳಲ್ಲಿ ಕನ್ನಡ ಸಂಘ ರಚಿಸುವ ಅಗತ್ಯವಿದೆ. ಇದರಿಂದ ಸಾಹಿತಿಗಳು, ಕವಿಗಳು ಮತ್ತು ಬರಹಗಾರರು ಸೃಷ್ಟಿಯಾಗಲಿದ್ದಾರೆ ಎಂದರು.
ನುಡಿ ಹಬ್ಬದ ಪ್ರಯುಕ್ತ ನಾಟಕ, ಕನ್ನಡ ಗೀತೆಗಳ ಗಾಯನದೊಂದಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಸಂಸ್ಥೆ ಆಡಳಿತಾಧಿಕಾರಿ ಸುಮಿತ್ರಾ ಸುಧಾಕರ ದಯಾಶೀಲ, ಗೌರವ ಆಡಳಿತಾಧಿಕಾರಿ ಪ್ರೊ.ಬಿ.ಸಿ.ಐಗೋಳ, ಅಧ್ಯಕ್ಷ ಬೆಜಲಿಯಲ್ ಜೋಸ್ೆ ರಾಜು, ಕಾರ್ಯದರ್ಶಿ ಬ್ಯಾಬೇಜ್ ಮಿಲ್ಟನ್, ಸದಸ್ಯೆ ಸುಜಾತರಾಜು, ಪಿಯು ಕಾಲೇಜಿನ ಪ್ರಾಚಾರ್ಯ ಬಿಂಗಿ ವೆಂಕಟೇಶ್, ಸಹ ಪ್ರಾಚಾರ್ಯ ಹನುಮಂತಪ್ಪ, ಮುಖ್ಯಶಿಕ್ಷಕರಾದ ಮನೋಜಸ್ವಾಮಿ ನವಲಿ ಹಿರೇಮಠ, ಪುಷ್ಪಾವತಿ, ಶಿಕ್ಷಕರಾದ ಗೀತಾ ಅಂಗಡಿ, ಶ್ವೇತಾ ಅಂಗಡಿ, ಭಾರತಿ ಹಿರೇಮಠ, ರೇಣುಕಾ, ಲಕ್ಷ್ಮೀ ಇತರರಿದ್ದರು.