ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸ್ಟಿಂಗ್ ಆಪರೇಷನ್ ಪ್ರಕರಣ ಭಾರಿ ಸದ್ದು ಮಾಡುತ್ತಿದೆ. ಜೆಡಿಎಸ್ ಪಕ್ಷದ ಸಾಮಾಜಿಕ ಜಾಲತಾಣ ನಿರ್ವಾಹಕರನ್ನು ಪೊಲೀಸರು ವಶಕ್ಕೆ ಪಡೆದಿದ್ದನ್ನು ಖಂಡಿಸಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಸರ್ಕಾರ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ( HDK vs Priyank Kharge ) ವಿರುದ್ಧ ಇಂದು ವಾಗ್ದಾಳಿ ನಡೆಸಿದರು. ಇದರ ಬೆನ್ನಲ್ಲೇ ಗೃಹ ಸಚಿವರು ಕೂಡ ಎಚ್ಡಿಕೆಗೆ ಟ್ವೀಟ್ ಮೂಲಕ ಟಾಂಗ್ ನೀಡಿದ್ದು, ಇದಕ್ಕೆ ಎಚ್ಡಿಕೆ ಕೂಡ ಖಾರವಾಗಿ ಪ್ರತಿಕ್ರಿಯಿಸಿದ್ದು, ಸದ್ಯ ಉಭಯ ನಾಯಕರ ನಡುವೆ ಟ್ವೀಟ್ ವಾರ್ ಜೋರಾಗಿದೆ. ಯಾರು ಏನೆಂದರು? ಯಾವ ವಿಚಾರಗಳ ಬಗ್ಗೆ ಮಾತನಾಡಿದರು? ಎಂಬುದರ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ಇಂದು ಬೆಳಗ್ಗೆ ಸುದ್ದಿಗೋಷ್ಠಿ ನಡೆಸಿದ ಎಚ್.ಡಿ.ಕುಮಾರಸ್ವಾಮಿ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದರು. ಸ್ಟಿಂಗ್ ಆಪರೇಷನ್ ಮಾಡಿದ ಆರೋಪಿಯನ್ನು ಬಿಟ್ಟು ನಮ್ಮ ಪಕ್ಷದ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ. ತಾಕತ್ತಿದ್ದರೆ ನನ್ನನ್ನು ಬಂಧಿಸಲಿ ಎಂದು ಆಕ್ರೋಶ ಹೊರಹಾಕಿದರು. ಇಷ್ಟಕ್ಕೆ ಸುಮ್ಮನಾಗದ ಎಚ್ಡಿಕೆ ಸೀದಾ ನಗರ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿ, ದೂರು ನೀಡಿದರು. ಅಲ್ಲದೆ, ತನಿಖೆ ಆಗುವುದಾದರೆ ನನ್ನ ಮೇಲೆ ಆಗಲಿ, ನನ್ನ ಕಾರ್ಯಕರ್ತರನ್ನು ಏಕೆ ವಶಕ್ಕೆ ಪಡೆಯಬೇಕಿತ್ತು. ಈ ಬಗ್ಗೆ ತನಿಖೆ ಆಗಲೇಬೇಕೆಂದು ಪ್ರತಿಭಟನೆಗೆ ಕುಳಿತರು. ಅಲ್ಲದೆ, ತನಿಖೆ ಆಗದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಡಿಕೆ ಎಚ್ಚರಿಕೆ ನೀಡಿದರು .
ಎಚ್ಡಿಕೆ ಹೇಳಿಕೆ ಬೆನ್ನಲ್ಲೇ ಟ್ವೀಟ್ ಮಾಡಿರುವ ಪ್ರಿಯಾಂಕ್ ಖರ್ಗೆ, ಆರ್ಎಸ್ಎಸ್ನ ಹೊಸ 'ಅಚ್ಚುಮೆಚ್ಚಿನ ಹುಡುಗ', ಮಾಧ್ಯಮಗಳ ಮುಂದೆ ಉಗ್ರವಾಗಿ ವರ್ತಿಸುತ್ತಾ ತನಿಖೆಗೆ ಆಗ್ರಹಿಸುತ್ತಾನೆ. ತನಿಖೆ ಆರಂಭವಾಗುತ್ತಿದ್ದಂತೆಯೇ, ಅವನು ಪೊಲೀಸ್ ಆಯುಕ್ತರ ಬಳಿ ಓಡಿಹೋಗಿ, "ನನ್ನ ಹುಡುಗರ ವಿರುದ್ಧ ತನಿಖೆ ನಡೆಸಬೇಡಿ!" ಎಂದು ಅಂಗಲಾಚುತ್ತಾನೆ. ಇತರರಿಗೆ ಹೊಣೆಗಾರಿಕೆ. ತನ್ನವರಿಗೆ ರಕ್ಷಣೆ (ವಿನಾಯಿತಿ) ಎಂದು ವಾಗ್ದಾಳಿ ನಡೆಸಿದರು.
ಇದಕ್ಕೂ ಮುನ್ನ ವಿಧಾನಸೌಧದ ಮುಂದೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಕಳೆದ ಮೂರು ವರ್ಷಗಳಲ್ಲಿ ಎಷ್ಟು ಸುದ್ದಿಗೋಷ್ಠಿ ಮಾಡಿದ್ರು? ಕೇಂದ್ರದಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ, ನಿರುದ್ಯೋಗಿ ಆಗಿದ್ದಾರೆ. ಸಿದ್ದರಾಮಯ್ಯನವರ ಘನತೆ ಹಾಗೂ ಗೌರವ ನಮಗೆ ಮುಖ್ಯವಾಗಿದೆ. ಇಲ್ಲಿ ಯಾರನ್ನೂ ರಕ್ಷಣೆ ಮಾಡಲ್ಲ, ಪಾರದರ್ಶಕ ತನಿಖೆ ಮಾಡುತ್ತೇವೆ. ಇವತ್ತು ಸಂಪುಟ ಸಭೆಯಲ್ಲಿ ಸ್ಟಿಂಗ್ ವಿಚಾರ ಚರ್ಚೆ ಮಾಡಿಲ್ಲ. ನಮಗೆ ತುಂಬಾ ಜವಾಬ್ದಾರಿ ಇದೆ. ರಾಜ್ಯದಲ್ಲಿ ಬರವಿದೆ. ಕುಮಾರಸ್ವಾಮಿ ಅನುಭವಕ್ಕೆ ಗೌರವ ಕೊಟ್ಟು ಸಾಕಾಗಿದೆ ಎಂದು ಆಕ್ರೋಶ ಹಾಕಿದರು.
ಕುಮಾರಸ್ವಾಮಿ ಪ್ರತಿಭಟನೆ ಮಾಡಲು ಕಾರಣ ಏನು? ದಿನ ಮಾಧ್ಯಮಗಳ ಬಳಿ ಬಂದು ಬಾಯಿ ಬಡಿದಕೊಳ್ತಿದ್ರು. ತನಿಖೆ ಶುರು ಮಾಡಿದ ಮೇಲೆ ಕೆಲ ಹೆಸರುಗಳು ಬಂದವು. ಅವರನ್ನು ಕರೆದು ವಿಚಾರಣೆ ಮಾಡಿದೆವು. ಸುಮ್ಮನೆ ವ್ಯೆಯಕ್ತಿಕವಾಗಿ ನಿಂದನೆ ನಮ್ಮ ಮೇಲೆ ಸರಿಯಲ್ಲ. ದಯವಿಟ್ಟು ಮರ್ಯಾದೆ ಚೌಕಟ್ಟಿನಲ್ಲಿರಿ. ಅದನ್ನು ಮೀರಿದ್ರೆ ನಾನು ಮಾತಾಡಬೇಕಾಗುತ್ತದೆ. ತನಿಖೆ ನಾನು ಮಾಡಿಸ್ತಿದ್ದೀನಾ ಅವರು ಮಾಡಿಸ್ತಾ ಇದ್ದಾರಾ? ಅವರ ಬಳಿ ಮಾಹಿತಿಗಳು, ಸಾಕ್ಷಿಗಳು ಇದ್ರೆ ಕೊಡಲಿ. ಕಮಿಷನರ್ಗೆ ಹೋಗಿ ಬೆದರಿಸೋದು ಸರಿಯಲ್ಲ. ಕೇಂದ್ರದಲ್ಲಿ ನಿರುದ್ಯೋಗ ಮಂತ್ರಿ ಇದ್ದರೆ ನಂಬರ್ ಒನ್ ಕುಮಾರಸ್ವಾಮಿ ಅವರೇ. ಕೇಂದ್ರದ ಸಚಿವರಾಗಿ ಇದೇ ರೀತಿನಾ ಕೆಲಸ ಮಾಡೋದು ಎಂದು ಟೀಕಿಸಿದರು.
ಯಾರನ್ನು ಕರೆಸಿದ್ದೇವೆ? ಯಾರನ್ನು ಕರೆಸಿಲ್ಲ ಅಂತಾ ಇವರಿಗೆ ಹೇಗೆ ಗೊತ್ತಾಗುತ್ತದೆ? ನಾವು ಪಾರದರ್ಶಕವಾಗಿ ಕೆಲಸ ಮಾಡ್ತಿದ್ದೇವೆ. ನೀವು ಹೇಳಿದಂತೆ ನಾವು ಮಾಡಲ್ಲ. ಪ್ರಶಾಂತ್ ಇರಬಹುದು, X ಇರಬಹುದು ಅಥವಾ ಕಸ್ತೂರಿ ಚಾನಲ್ನಲ್ಲಿ ಕೆಲಸ ಮಾಡ್ತಾ ಇರಬಹುದು ಅವರನ್ನೂ ಕರೆಸುತ್ತೇವೆ. ಅದೇ ರೀತಿ ಸುರ್ಜೇವಾಲಾ ಜೊತೆ ಇರೋರನ್ನು ಕರೆಸುತ್ತೇವೆ. ಕುಮಾರಸ್ವಾಮಿಯವರಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲ. ಕಳೆದ ಮೂರು ತಿಂಗಳಿಂದ ಎಷ್ಟು ಆ್ಯಕ್ಟೀವ್ ಆಗಿದ್ದಾರೆ ನೋಡಿ. ಇರಲಾರದ ಪ್ರೀತಿ ನನ್ನ ಮೇಲೆ ಬಂದು ಬಿಟ್ಟಿದೆ ಕುಮಾರಸ್ವಾಮಿಯವರಿಗೆ. ಆರ್ಎಸ್ಎಸ್ನವರು ಕಾಂಟ್ರಾಕ್ಟ್ ಕೊಟ್ಟಿದ್ದಾರೆ. ಮೇನ್ ಆಫೀಸ್ನವರಿಂದ ಏನು ಆಗುತ್ತಿಲ್ಲ, ಅದಕ್ಕಾಗಿ ಆರ್ಎಸ್ಎಸ್ ಇವರನ್ನು ಬಿಟ್ಟಿದ್ದಾರೆ. ನಮಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಘನತೆ ಗೌರವಕ್ಕಿಂತ ಬೇರೆ ಏನೂ ಇಲ್ಲ. ಇದನ್ನು ಯಾರೇ ಮಾಡಿದ್ರು ಸುಮ್ಮನೆ ಬಿಡಲ್ಲ. ಸಿದ್ದರಾಮಯ್ಯ ಕೂಡ ಸ್ಪಷ್ಟವಾಗಿ ಹೇಳಿದ್ದಾರೆ. ಅದರಂತೆ ನಾವು ತನಿಖೆ ಕೈಗೊಂಡಿದ್ದೇವೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಪ್ರಿಯಾಂಕ್ ಖರ್ಗೆ ಹೇಳಿಕೆಗಳಿಗೆ ಹಾಗೂ ಟ್ವೀಟ್ಗೆ ಟ್ವೀಟ್ ಮೂಲಕವೇ ಉತ್ತರ ನೀಡಿರುವ ಎಚ್ಡಿಕೆ, ಸಿದ್ದರಾಮಯ್ಯ ವಿರುದ್ಧ ನಡೆದ ಸ್ಟಿಂಗ್ ಸಂಚಿನಲ್ಲಿ ಶಾಮೀಲಾಗಿ ಅವರ ಪದಚ್ಯುತಿಗೆ ಕಾರಣನಾದ ನೀಲಿಕಣ್ಣಿನ ಮಂತ್ರಿ ಪ್ರಿಯಾಂಕ್ ಖರ್ಗೆ, ಸ್ಟಿಂಗ್ ಮಾಡಿದ ಅಸಲಿ ಕಿರಾತಕನನ್ನು ಬಿಟ್ಟು ಅಮಾಯಕರ ಬೆನ್ನತ್ತಿದ ನೀವು ಗೃಹಮಂತ್ರಿ ಹುದ್ದೆಗೆ ನಾಲಾಯಕ್ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಿದ್ದಾರ್ಥ, ಡಾ.ಅಂಬೇಡ್ಕರ್ ಹೆಸರಿನಲ್ಲಿ ಲೂಟಿ ಮೇಲೆ ಲೂಟಿ ಮಾಡಿದ 'ಬಲಿತ ದಲಿತ'ನೇ, ನಿಮ್ಮ ಮೀಸಲು ಕ್ಷೇತ್ರವನ್ನು ದುರ್ಬಲ ದಲಿತನಿಗೆ ಬಿಟ್ಟುಕೊಟ್ಟು ಸಾಮಾನ್ಯ ಕ್ಷೇತ್ರದಿಂದ ಗೆದ್ದು ಬನ್ನಿ. ನಿಮಗೆ, ನಿಮ್ಮಪ್ಪನಿಗೆ ಇನ್ನೆಷ್ಟು ವರ್ಷ ಮೀಸಲು ಕ್ಷೇತ್ರಗಳು ಬೇಕು? ಇನ್ನೆಷ್ಟು ವರ್ಷ ದಲಿತರ ಹೆಸರಿನಲ್ಲಿ ಅಧಿಕಾರ? ಅಸಲಿ ದಲಿತರಿಗೆ ಅಧಿಕಾರ ಕೊಡಿ. ನನ್ನ ಹುಡುಗರನ್ನು ರಕ್ಷಿಸಿಕೊಳ್ಳುವುದು ನನಗೆ ಗೊತ್ತು. ಓಡುವುದು ನನ್ನ ಜಾಯಮಾನವಲ್ಲ. ನಾನು ಕೆಪಿಎಸ್ಸಿ, ಸ್ಟಿಂಗ್ ವಿಷಯ ಪ್ರಸ್ತಾಪಿಸಿದ ಕೂಡಲೇ ಎಷ್ಟು ಕಡೆ ರನ್ನಿಂಗ್ ರೇಸ್ ಮಾಡಿದ್ದೀರಿ ಎಂದು ನನಗೆ ಗೊತ್ತಿದೆ. ಅಂಗಲಾಚುವವನಲ್ಲ ಈ ಕುಮಾರಸ್ವಾಮಿ. ನಿಮ್ಮ ಪೊಲೀಸ್ ಕಮಿಷನರ್ ಬಳಿ ಏನು ಹೇಳಿದ್ದೇನೆ ಎಂಬುದನ್ನು ತಿಳಿದುಕೊಳ್ಳಿ ಎಂದು ತಿರುಗೇಟು ನೀಡಿದ್ದಾರೆ.
ನಿಮ್ಮ ಪಕ್ಷದ ಹಿರಿಯ ನಾಯಕನನ್ನು ಸ್ಟಿಂಗ್ ಮಾಡಿದ ನಟೋರಿಯಸ್ ಸ್ಟಿಂಗ್'ಪಿನ್ ನನ್ನೇ ಬಂಧಿಸಲು ಯೋಗ್ಯತೆ ಇಲ್ಲ ನಿಮಗೆ. ಅವನು ಬಂದು ನಿಮ್ಮ ಡಿಸಿಪಿ ಮುಂದೆ ಕಾಲು ಮೇಲೆ ಕಾಲು ಹಾಕಿ ಕೂರುತ್ತಾನೆ, ನಿಮ್ಮ ಇಲಾಖೆಯ ನಿವೃತ್ತ IPS ಅಧಿಕಾರಿಗೆ ಕೊಲೆ ಬೆದರಿಕೆ ಹಾಕ್ತಾನೆ, ನಿಮ್ಮ ಪೊಲೀಸ್ ಅಧಿಕಾರಿಗಳ ಸ್ಟಿಂಗ್ ಮಾಡಿ ಹಫ್ತಾ ವಸೂಲಿ ಮಾಡ್ತಾನೆ. ಅವನನ್ನು ಹಿಡಿದು ಸೆದೆಬಡಿಯುವುದು ಬಿಟ್ಟು ಪುಂಗಿ ಬಿಡ್ತಾ ಇದ್ದೀರಿ. ಏಕೆಂದರೆ, ಸ್ಟಿಂಗ್ ಸಾಮ್ರಾಟನ ಸಿಂಡಿಕೇಟ್ನಲ್ಲಿ ನೀವು ಒಂದು ಭಾಗ ಎಂಬುದು ನನಗೆ ಗ್ಯಾರಂಟಿ ಆಗಿದೆ ಎಂದು ಎಚ್ಡಿಕೆ ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ.