ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸ್ಟಿಂಗ್ ಆಪರೇಷನ್ ದೊಡ್ಡ ಕೋಲಾಹಲ ಸೃಷ್ಟಿಸಿದ್ದು, ಸಿಎಂ ಡಿಕೆ ಶಿವಕುಮಾರ್ ಮತ್ತು ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ನಡುವಿನ ದಾಖಲೆಗಳ ಬಿಡುಗಡೆ ವಿಚಾರವೂ ಸದ್ಯ ತಾರಕಕ್ಕೇರಿದೆ. ಈ ಮಧ್ಯೆ, ಕುಮಾರಸ್ವಾಮಿ ಅವರು ತಮ್ಮ ವಿರುದ್ಧ ಮಾಡುತ್ತಿರುವ ಆರೋಪಗಳು ಮತ್ತು ಏಕವಚನದ ಮಾತುಗಳಿಗೆ ಕೆರಳಿರುವ ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ನಾನು ಮಾತಾಡೋಕೆ ನಿಂತರೆ, ಅವರಿಗೆ ಇನ್ನೊಂದು ಓಪನ್ ಹಾರ್ಟ್ ಸರ್ಜರಿ ಆಗುತ್ತೆ ಎಂದು ತೀವ್ರ ಕಿಡಿಕಾರಿದ್ದಾರೆ.
ಏಕವಚನದಲ್ಲಿ ಮಾತನಾಡಿದರೆ ನಾನು ಹೆದರಲ್ಲ. ಅವರಂತೆ ಮಾತನಾಡೋಕೆ ನನಗೂ ಬರುತ್ತೆ. ನಮ್ಮ ಅಪ್ಪನ ವಿಚಾರ ಮಾತಾನಾಡಿದರೆ ಅವರಿಗೂ ಹಾಗೆ ಮಾತನಾಡಬೇಕಾಗುತ್ತೆ. ಏಕವಚನದಲ್ಲಿ ಮಾತನಾಡಿದ ತಕ್ಷಣ ಪ್ರಿಯಾಂಕ್ ಖರ್ಗೆ ಹೆದರಿಕೊಳ್ಳುತ್ತಾನೆ. ಅವನನ್ನು ಹೆದರಿಸಬಹುದು, ಬೆದರಿಸಬಹುದು ಅಂದ್ರೆ ಅದು ಅವರ ಕಲ್ಪನೆ ಅಷ್ಟೇ. ಮಾರ್ಯದೆ ಕೊಟ್ಟು ಮಾತನಾಡೋ ಆಗಿದ್ರೆ, ನಾವು ಕೇಳಲು ರೆಡಿ ಇದ್ದೇವೆ. ನಿಮಗೆ ಯಾವ ಭಾಷೆ ಬರುತ್ತೆ, ಅದೇ ಭಾಷೆಯಲ್ಲಿ ಮಾತನಾಡೋಕೆ ನಾವು ರೆಡಿ ಎಂದಿದ್ದಾರೆ.
ಗಾಳಿಯಲ್ಲಿ ಗುಂಡು ಹಾರಿಸುವುದಕ್ಕಿಂತ, ಮಾಹಿತಿ ಇದ್ರೆ ಕೊಡಿ ಅಂತ ನಾವು ಹೇಳಿದ್ದು. ಇದ್ದರೆ ಕೊಡಿ, ಅದು ಬಿಟ್ಟು ನನ್ನ ಮೇಲೆ ಬಾಯಿಗೆ ಬಂದ ಹಾಗೆ ಮಾತನಾಡಿದರೆ, ನಿಮಗೆ ಅದೇ ಭಾಷೆ ಅರ್ಥ ಆಗೋದಾದ್ರೆ, ನಾನು ಅದೇ ಭಾಷೆಯಲ್ಲಿಯೇ ಮಾತನಾಡ್ತೀನಿ. ತನಿಖೆ ಮಾಡೋವಾಗ ಕೆಲವರ ಹೆಸರು ಬಂದಿದೆ. ಅದಕ್ಕೆ ಕರೆದು ವಿಚಾರಣೆ ಮಾಡುತ್ತಿದ್ದೇವೆ. ನಾನು ಬೇರೆ ಅವರಿಂದ ಏನೂ ಕಲಿಯಬೇಕಿಲ್ಲ. ಅದು ಕೂಡ ಕುಮಾರಸ್ವಾಮಿ ಅವರಿಂದ ಅಂತು ಅಲ್ವೇ ಅಲ್ಲ. ಅವರಿಗೆ ಹೇಗೆ ಗೊತ್ತು? ಅವರೇನು ಕಾವಲು ಕಾಯುತ್ತಿದ್ದಾರಾ? ಅವರು ಮಾತಾಡಿದ್ರೆ ನಾನು 100ಕ್ಕೂ ನೂರು ಕೇಳುವವನು ಅಲ್ಲ ಎಂದರು.
ಹೀಗೆ ಮಾತಾಡಿದ್ರೆ ಸರಿ ಇರುತ್ತಾ ಅವರಿಗೆ? ಇದೊಂದು ಭಾಷೆಯಲ್ಲಿ ಮಾತಾಡಿದ್ರೆ ಅವರಿಗೆ ಸರಿ ಅನಿಸುತ್ತಾ? ಕಮಿಷನರ್ ಅವರಿಗೆ ದೂರು ಕೊಡಲಿ, ಸಾಕ್ಷಿ ಕೊಡಲಿ. ಹೆಚ್ಚಿನ ಮಾಹಿತಿ ಇದ್ರೆ ಕೊಡಬೇಕು. ನೀವು ನನಗೆ ನಿಂದನೆ ಮಾಡುವುದರಿಂದ ಏನು ಸಾಧನೆ ಆಗಲ್ಲ. ನಿಮಗೆ ನಿಮ್ಮ ನಾಲಿಗೆ ಮೇಲೆ ಹಿಡಿತವಿರಲಿ. ನಾನು ಅವರ ಲೆವೆಲ್ಗೆ ಇಳಿಯೋಕೆ ಆಗಲ್ಲ. ದಾಖಲೆ ಇದ್ದರೆ ಕೊಡಲಿ, ಸುಮ್ಮನೆ ಏನೇನೋ ಮಾತನಾಡೋದಲ್ಲ. ಅಸೂಯೆಗೆ ಮದ್ದಿಲ್ಲ. ಎವಿಡೆನ್ಸ್ ಬೇಕಲ್ಲ? ಸುಮ್ಮನೆ ಮೌಂಟ್ ಕಾರ್ಮೆಲ್ ಪಕ್ಕ, ಸಿಎಂ ಕಚೇರಿ ಪಕ್ಕ ಪಂಚತಾರ ಹೋಟೆಲ್ ಅಂದರೆ ದಾಖಲೆ ಅನ್ನೋದು ಬೇಕಲ್ವಾ? ಎಂದು ಪ್ರಶ್ನಿಸಿದ್ದಾರೆ.