ನೈಸ್‌ ಸಂಸ್ಥೆಗೆ ಕಾನೂನು ಸಮರದಲ್ಲಿ ಭಾರಿ ಹಿನ್ನಡೆ: ಹೈಕೋರ್ಟ್​ ಆದೇಶಕ್ಕೆ ತಡೆ ನೀಡಲು ಸುಪ್ರೀಂ ನಕಾರ 
ಬೆಂಗಳೂರು

ನೈಸ್‌ ಸಂಸ್ಥೆಗೆ ಕಾನೂನು ಸಮರದಲ್ಲಿ ಭಾರಿ ಹಿನ್ನಡೆ: ಹೈಕೋರ್ಟ್​ ಆದೇಶಕ್ಕೆ ತಡೆ ನೀಡಲು ಸುಪ್ರೀಂ ನಕಾರ, ರೈತರಿಗೆ ಬಿಗ್​ ರಿಲೀಫ್​! NICE Land Acquisition Case

ಬೆಂಗಳೂರು ನೈಸ್ ರಸ್ತೆ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಕರ್ನಾಟಕ ಹೈಕೋರ್ಟ್‌ನಲ್ಲಿ ಮೊಕದ್ದಮೆ ದಾಖಲಾಗಿತ್ತು. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ್ದ ಹೈಕೋರ್ಟ್, ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಸ್ಪಷ್ಟ ನಿರ್ದೇಶನ ನೀಡಿತ್ತು.

ನವದೆಹಲಿ/ಬೆಂಗಳೂರು: ಬೆಂಗಳೂರು-ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ (NICE) ಯೋಜನೆ ವಿವಾದಕ್ಕೆ ( NICE Land Acquisition Case ) ಸಂಬಂಧಿಸಿದ ಕಾನೂನು ಸಮರದಲ್ಲಿ ನೈಸ್ ಕಂಪನಿಗೆ ಭಾರಿ ಹಿನ್ನಡೆ ಉಂಟಾಗಿದೆ. ಭೂಸ್ವಾಧೀನ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಸಮಗ್ರ ತನಿಖೆಗೆ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ನಿರಾಕರಿಸಿದ್ದು, ದಶಕಗಳಿಂದ ನ್ಯಾಯಕ್ಕಾಗಿ ಹೋರಾಡುತ್ತಿರುವ ನೊಂದ ರೈತರಿಗೆ ಬಿಗ್​ ರಿಲೀಫ್​ ಸಿಕ್ಕಂತಾಗಿದೆ.

ಬೆಂಗಳೂರು ನೈಸ್ ರಸ್ತೆ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಕರ್ನಾಟಕ ಹೈಕೋರ್ಟ್‌ನಲ್ಲಿ ಮೊಕದ್ದಮೆ ದಾಖಲಾಗಿತ್ತು. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ್ದ ಹೈಕೋರ್ಟ್, ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಸ್ಪಷ್ಟ ನಿರ್ದೇಶನ ನೀಡಿತ್ತು. ಹೈಕೋರ್ಟ್‌ನ ಈ ಆದೇಶದಿಂದ ಕಂಗಾಲಾಗಿದ್ದ ನೈಸ್ (NICE) ಕಂಪನಿಯು, ತನಿಖೆಗೆ ಮಧ್ಯಂತರ ತಡೆ ಕೋರಿ ಸುಪ್ರೀಂ ಕೋರ್ಟ್‌ನ ಕದ ತಟ್ಟಿತ್ತು ಹಾಗೂ ಅರ್ಜಿ ಸಲ್ಲಿಸಿ ತುರ್ತು ಪರಿಹಾರಕ್ಕಾಗಿ ಮನವಿ ಮಾಡಿತ್ತು.

ಮಧ್ಯಂತರ ತಡೆ ನೀಡಲು ನಕಾರ

ನೈಸ್ ಕಂಪನಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯವು, ಪ್ರಕರಣದ ಸಮಗ್ರ ಹಾಗೂ ಆಳವಾದ ಪರಿಶೀಲನೆ ನಡೆಸುವವರೆಗೆ ಹೈಕೋರ್ಟ್ ಆದೇಶಕ್ಕೆ ಯಾವುದೇ ಮಧ್ಯಂತರ ತಡೆ ನೀಡಲು ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ತಿಳಿಸಿದೆ. ಇದರಿಂದಾಗಿ ಹೈಕೋರ್ಟ್ ನಿರ್ದೇಶನದಂತೆ ನೈಸ್ ಭೂಸ್ವಾಧೀನ ಅಕ್ರಮಗಳ ತನಿಖಾ ಪ್ರಕ್ರಿಯೆ ಯಾವುದೇ ತಡೆಯಿಲ್ಲದೆ ಮುಂದುವರಿಯಲಿದೆ. ಸುಪ್ರೀಂ ಕೋರ್ಟ್‌ನ ಈ ನಿರ್ಧಾರವು ಕಂಪನಿಗೆ ತೀವ್ರ ಹಿನ್ನಡೆಯನ್ನುಂಟು ಮಾಡಿದೆ.

ವಿಚಾರಣೆ ಮುಂದೂಡಿಕೆ

ನ್ಯಾಯಾಲಯದ ವಿಚಾರಣೆಯ ವೇಳೆ ಪೀಠವು ಈ ಪ್ರಕರಣದ ಮುಂದಿನ ವಾದ-ಪ್ರತಿವಾದ ಹಾಗೂ ಅಂತಿಮ ಪರಿಶೀಲನೆಗಾಗಿ ನವೆಂಬರ್ 2ರ ದಿನಾಂಕವನ್ನು ನಿಗದಿಪಡಿಸಿದೆ. ಅಂದಿನವರೆಗೆ ತನಿಖೆಗೆ ಯಾವುದೇ ರಕ್ಷಣೆ ಸಿಗದ ಕಾರಣ ತನಿಖಾಧಿಕಾರಿಗಳು ತಮ್ಮ ಕೆಲಸಗಳನ್ನು ಚುರುಕುಗೊಳಿಸುವ ಸಾಧ್ಯತೆಯಿದೆ. ಮತ್ತೊಂದೆಡೆ, ಭೂಮಿ ಕಳೆದುಕೊಂಡು ದೀರ್ಘಕಾಲದಿಂದ ನ್ಯಾಯಕ್ಕಾಗಿ ಹೋರಾಡುತ್ತಿರುವ ರೈತ ವರ್ಗಕ್ಕೆ ಸುಪ್ರೀಂ ಕೋರ್ಟ್‌ನ ಈ ನಿಲುವು ಹೊಸ ಭರವಸೆಯನ್ನು ತಂದುಕೊಟ್ಟಿದೆ.

ರೈತರ ಪರ ಹಿರಿಯ ವಕೀಲ ಶಶಿಧರ್ ಹೇಳಿದ್ದೇನು?

ಇವತ್ತು ಸುಪ್ರೀಂ ಕೋರ್ಟ್‌ನಲ್ಲಿ ನೈಸ್ ಪ್ರಕರಣದ ವಿಚಾರಣೆ ನಡೆದಿದ್ದು, ನ್ಯಾಯಾಲಯವು ಹೈಕೋರ್ಟ್ ಆದೇಶಕ್ಕೆ ಮಧ್ಯಂತರ ತಡೆ ನೀಡಲು ಸ್ಪಷ್ಟವಾಗಿ ನಿರಾಕರಿಸಿದೆ ಹಾಗೂ ಯಾವುದೇ ನೋಟೀಸ್ ಜಾರಿ ಮಾಡಿಲ್ಲ. ಬದಲಿಗೆ, ಈ ಕುರಿತಾದ ರಾಜ್ಯ ಸರ್ಕಾರದ ಅರ್ಜಿಯನ್ನೂ ಸೇರಿದಂತೆ ಎಲ್ಲಾ ಅರ್ಜಿಗಳನ್ನು ಒಟ್ಟುಗೂಡಿಸಿ ನವೆಂಬರ್ 2 ರಂದು ವಿಚಾರಣೆ ನಡೆಸುವುದಾಗಿ ಕೋರ್ಟ್ ತಿಳಿಸಿದೆ. ಈ ಹಂತದಲ್ಲಿ ನೈಸ್ ಕಂಪನಿಯ ವಾದವನ್ನು ಸುಪ್ರೀಂ ಕೋರ್ಟ್ ಪರಿಗಣಿಸಿಲ್ಲ ಎಂದು ಹಿರಿಯ ವಕೀಲ ಶಶಿಧರ್ ಸ್ಪಷ್ಟಪಡಿಸಿದ್ದಾರೆ.

ನ್ಯಾಯಾಲಯದ ಮುಂದೆ ನೈಸ್ ಕಂಪನಿಯು ತಾನು ಶೇ. 25 ರಷ್ಟು ಕೆಲಸ ಮಾಡಿದ್ದು, 1100 ಎಕರೆ ಭೂಮಿ ಬಳಸಲಾಗಿದೆ ಎಂದು ವಾದಿಸಿ, ಭೂಮಿ ಕಳೆದುಕೊಂಡ ರೈತರಿಗೆ ಈಗಾಗಲೇ ಪರಿಹಾರ ನೀಡಿರುವುದಾಗಿ ಹೇಳಿಕೊಂಡಿದೆ. ಆದರೆ, ವಾಸ್ತವದಲ್ಲಿ ರೈತರಿಗೆ ಯಾವುದೇ ಪರಿಹಾರ ನೀಡಿಲ್ಲ ಎಂದು ವಕೀಲ ಶಶಿಧರ್ ತಿಳಿಸಿದ್ದಾರೆ. ಇದಕ್ಕೆ ಪುಷ್ಟಿ ನೀಡುವಂತೆ ಅವರು ಕೋರ್ಟ್‌ನಲ್ಲಿ 2 ಪ್ರಮುಖ ಪ್ರಕರಣಗಳ ಉದಾಹರಣೆಗಳನ್ನು ನೀಡಿ, ನೈಸ್ ಕಂಪನಿಯ ವಾದದಲ್ಲಿನ ಹುರುಳಿಲ್ಲದಿರುವುದನ್ನು ವಿವರಿಸಿದ್ದಾರೆ.