ಆರೋಪಿ ಸುದೀಪ್  
ಬೆಂಗಳೂರು

ಸುತ್ತಿಗೆಯಿಂದ 18 ವರ್ಷದ ಮಗನನ್ನು ಕೊಂದ ಮಲತಂದೆ; ಪತ್ನಿಯನ್ನು ಕೊಠಡಿಯಲ್ಲಿ ಬಂಧಿಸಿ ಪರಾರಿ, 3 ದಿನದ ಬಳಿಕ ಅರೆಸ್ಟ್..Bengaluru

  • ಬೆಂಗಳೂರಿನ ಬನಶಂಕರಿ ಪೊಲೀಸ್​ ಠಾಣಾ ವ್ಯಾಪ್ತಿ ಭೀಕರ ಕೊಲೆ ಪ್ರಕರಣ ಬೆಳಕಿಗೆ.

  • 18 ವರ್ಷದ ಮಗನನ್ನು ಕೊಂದು ಪರಾರಿಯಾಗಿದ್ದ ಮಲತಂದೆ ಅರೆಸ್ಟ್.

  • ಪತ್ನಿಯನ್ನು ಕೋಣೆಯಲ್ಲಿ ಕೂಡಿಹಾಕಿ ಮೂರು ದಿನದಿಂದ ನಾಪತ್ತೆಯಾಗಿದ್ದ ಬ್ಯಾಂಕ್ ಉದ್ಯೋಗಿ.

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ನಡೆದಿದ್ದ ಏಳು ಜನರನ ಕೊಲೆ ಕೇಸ್ ಮಾಸುವ ಮುನ್ನವೇ ಮತ್ತೊಂದು ಅಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹೌದು, ಕೌಟುಂಬಿಕ ಕಲಹದಿಂದಾಗಿ ಮಲತಂದೆಯೊಬ್ಬ 18 ವರ್ಷದ ಮಗನಿಗೆ ಸುತ್ತಿಗೆಯಿಂದ ಹೊಡೆದು ಬರ್ಬರವಾಗಿ ಕೊಂದ ಘಟನೆ ಬನಶಂಕರಿ ಠಾಣಾ ವ್ಯಾಪ್ತಿ ಬೆಳಕಿಗೆ ಬಂದಿದೆ.

ಸೋಹಂ ದಾಸ್ ಮೃತ ಯುವಕ ಎಂದು ಗುರುತಿಸಲಾಗಿದ್ದು, ಕೊಲೆಗೆ ಕಾರಣನಾದ ಸುದೀಪ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ತನ್ನ ಪತ್ನಿ ಸೀಮಾ ದಾಸ್​ರನ್ನು ಕೋಣೆಯಲ್ಲಿ ಬಂಧಿಸಿದ್ದ ಎನ್ನುವ ಮಾಹಿತಿಯನ್ನು ಪೊಲೀಸರು ಹಂಚಿಕೊಂಡಿದ್ದಾರೆ.

ಬ್ಯಾಂಕ್ ಉದ್ಯೋಗಿ ಸುದೀಪ್ ಅರೆಸ್ಟ್

ಆರೋಪಿ, ಬ್ಯಾಂಕ್​ ಉದ್ಯೋಗಿ ಸುದೀಪ್​​​​​​ ಮತ್ತು ಸೀಮಾ ದಾಸ್​ ಕಳೆದ ಎರಡು ವರ್ಷದಿಂದ..ಅಂದರೆ, 2024 ರಿಂದ ಪದ್ಮನಾಭನಗರದ ರಾಘವೇಂದ್ರ ಲೇಔಟ್‌ನ ಅಪಾರ್ಟ್​ಮೆಂಟ್​​ನಲ್ಲಿ ಮಗನೊಂದಿಗೆ ವಾಸವಾಗಿದ್ದರು. ಕಳೆದ ಆರು ತಿಂಗಳಿಂದ ಇಬ್ಬರ ಮಧ್ಯೆ ಆಗಾಗ್ಗೆ ಜಗಳವಾಗುತ್ತಿತ್ತು. ಈ ಬಗ್ಗೆ ಅಕ್ಕ-ಪಕ್ಕದ ಜನರು ಮಾಲೀಕರಿಗೆ ದೂರು ಕೊಟ್ಟಿದ್ದರು. ಇದರಿಂದ ಬೇಸತ್ತಿದ್ದ ಮಾಲೀಕ ಫ್ಲ್ಯಾಟ್​ ಖಾಲಿ ಮಾಡುವಂತೆ ಸೂಚನೆ ಕೊಟ್ಟಿದ್ದ ಎನ್ನಲಾಗಿದೆ.

ಕೊಲೆಯಾದ ದಿನ ಅಂದರೆ, ನ.16ರಂದು ಮತ್ತೆ ಇಬ್ಬರ ಮಧ್ಯೆ ಜಗಳವಾಗಿತ್ತು. ಈ ಬಗ್ಗೆ ಮಾಲೀಕರಿಗೆ ಮತ್ತೆ, ನೆರೆಹೊರೆ ಮನೆಯವರು ದೂರು ನೀಡಿದ್ದರು. ಬೇರೊಂದು ಕೆಲಸದಲ್ಲಿ ಮಾಲೀಕ ಬಿಜಿ ಇದ್ದ ಕಾರಣ, ಈ ಬಗ್ಗೆ ವಾಚ್​ಮನ್​ಗೆ ತಿಳಿಸಿ, ವಿಚಾರಿಸಲು ತಾಕೀತು ಮಾಡಿದ್ದರು. ಕೋಣೆಯ ಬಳಿ ಬಂದು ನೋಡಿದ ವಾಚ್​ಮನ್​ಗೆ ಯಾವುದೇ ಸದ್ದು ಕೇಳದ ಹಿನ್ನಲೆ, ಮಾಲೀಕನಿಗೆ ಜಗಳ ನಿಂತಿದ್ದ ಬಗ್ಗೆ ತಿಳಿಸಿದ್ದ. ಯಾವುದೇ ಗದ್ದಲ ಇಲ್ಲ ಎಂದಿದ್ದ.

ಆದರೆ, ಮೂರು ದಿನ ಕಳೆದರು ದಂಪತಿ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಫ್ಲ್ಯಾಟ್​ ಖಾಲಿ ಮಾಡುವ ಬಗ್ಗೆ ಯಾವುದೇ ಮಾಹಿತಿ ಹಂಚಿಕೊಂಡಿರಲ್ಲಿಲ್ಲ. ಹೀಗಾಗಿ, ಮಾಲೀಕರು ಪೊಲೀಸರಿಗೆ ದೂರು ಕೊಟ್ಟರು. ಘಟನಾ ಸ್ಥಳಕ್ಕೆ ಬಂದು ಪರಿಶೀಲಿಸಿದ ಪೊಲೀಸರಿಗೆ ಪ್ಲ್ಯಾಟ್ ಲಾಕ್​ ಆಗಿರುವುದು ಗೊತ್ತಾಯಿತು. ಸೀಮಾದಾಸ್ ಸ್ನೇಹಿತರ ಸಮ್ಮುಖದಲ್ಲಿ ಬಾಗಿಲು ತೆರೆದಾಗ ನೆಲ ಮತ್ತು ಬಾಗಿಲ ಮೇಲೆ ರಕ್ತ ಹರಡಿತ್ತು. ಕೋಣೆಯಿಂದ ಮಹಿಳೆ ಕೂಗುವ ಶಬ್ಧ ಕೇಳಿ ಬಂದಿತ್ತು. ಬಾಗಿಲು ತೆರೆದು ಒಳ ನಡೆದ ಪೊಲೀಸರಿಗೆ ಸೀಮಾ ದಾಸ್​ ಸಿಕ್ಕರು. ಇನ್ನೂ ಸ್ನಾನಗೃಹದಲ್ಲಿ ರಕ್ತದ ಮಡುವಿನಲ್ಲಿ ಸೋಹಂ ದಾಸ್ ಬಿದ್ದಿರುವುದು ಪತ್ತೆಯಾಗಿದೆ.

ಪತ್ನಿ ಕೊಲೆಗೂ ಯತ್ನ

ಬ್ಯಾಂಕ್​ ಉದ್ಯೋಗಿ ಸುದೀಪ್​​​​​​ ಮಗ ಮತ್ತು ಪತ್ನಿಯ ಕೊಲೆಗೆ ಸಂಚು ರೂಪಿಸಿದ್ದ. ಆಕೆಯನ್ನು ಒಂದು ಕೋಣೆಯಲ್ಲಿ ಕೂಡಿಹಾಕಿ, ಸೋಹಂನನ್ನು ಸುತ್ತಿಗೆಯಿಂದ ಕೊಂದು ಫ್ಲ್ಯಾಟ್ ಲಾಕ್​ ಮಾಡಿ ಪರಾರಿಯಾಗಿದ್ದ. ಈ ಘಟನೆ ನಡೆದು ಮೂರು ದಿನದ ಬಳಿಕ ವಿಚಾರ ಬೆಳಕಿಗೆ ಬಂದಿದೆ.

ದೂರು ದಾಖಲು

ಮನೆ ಮಾಲೀಕರ ದೂರಿನ ಆಧಾರದ ಮೇಲೆ, ಆರೋಪಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 103(1) ಹಾಗೂ 109(1) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮೇಲ್ಕೋಟಕ್ಕೆ ಇದೊಂದು ಕುಟುಂಬ ಕಲಹದಿಂದ ನಡೆದ ಘಟನೆ ಎಂದು ಶಂಕಿಸಲಾಗಿದೆ. ಆದರೆ, ಪೊಲೀಸರು ಸಂಪೂರ್ಣ ಮಾಹಿತಿ ಕಲೆ ಹಾಕುತ್ತಿದ್ದಾರೆ ಎನ್ನಲಾಗಿದೆ, (ಏಜೆನ್ಸೀಸ್)