ತಾಳಿ ಕಟ್ಟಬೇಕಿದ್ದವನೇ ಪ್ರಾಣ ತೆಗೆದ WEB
ಬೆಂಗಳೂರು

ತಾಳಿ ಕಟ್ಟಬೇಕಿದ್ದವನೇ ಪ್ರಾಣ ತೆಗೆದ ! ಪ್ರೇಯಸಿಯನ್ನು 3ನೇ ಮಹಡಿಯಿಂದ ತಳ್ಳಿ ಆತ್ಮಹತ್ಯೆ ಕಥೆ ಹೆಣೆದ| Love Affair

ಪ್ರೀತಿಸಿ ಮದುವೆಯಾಗುವ ಕನಸು ಕಂಡಿದ್ದ ಯುವತಿಯ ಬದುಕು ಹೋಟೆಲ್‌ನ ಮೂರನೇ ಮಹಡಿಯ ಕಿಟಕಿಯಿಂದ ಬಿದ್ದು ದುರಂತ ಅಂತ್ಯ ಕಂಡಿದೆ. ಆರಂಭದಲ್ಲಿ ಆತ್ಮಹತ್ಯೆ ಎಂದು ಭಾವಿಸಲಾಗಿದ್ದ ಪ್ರಕರಣ ಇದೀಗ ಕೊಲೆ ಆರೋಪದ ತಿರುವು ಪಡೆದುಕೊಂಡಿದೆ. ಪ್ರಿಯಕರನೇ ಯುವತಿಯನ್ನು ಕಿಟಕಿಯಿಂದ ತಳ್ಳಿದ್ದಾನೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದಿರುವ ಈ ಘಟನೆ ತೀವ್ರ ಆಘಾತ ಮೂಡಿಸಿದೆ.Love Affair

ಬೆಂಗಳೂರು: ಪ್ರೀತಿಸಿ ಮದುವೆಯಾಗುವ ಕನಸು ಕಂಡಿದ್ದ ಯುವತಿಯ ಬದುಕು ಹೋಟೆಲ್‌ನ ಮೂರನೇ ಮಹಡಿಯ ಕಿಟಕಿಯಿಂದ ಬಿದ್ದು ದುರಂತ ಅಂತ್ಯ ಕಂಡಿದೆ. ಆರಂಭದಲ್ಲಿ ಆತ್ಮಹತ್ಯೆ ಎಂದು ಭಾವಿಸಲಾಗಿದ್ದ ಪ್ರಕರಣ ಇದೀಗ ಕೊಲೆ ಆರೋಪದ ತಿರುವು ಪಡೆದುಕೊಂಡಿದೆ. ಪ್ರಿಯಕರನೇ ಯುವತಿಯನ್ನು ಕಿಟಕಿಯಿಂದ ತಳ್ಳಿದ್ದಾನೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದಿರುವ ಈ ಘಟನೆ ತೀವ್ರ ಆಘಾತ ಮೂಡಿಸಿದೆ.

ಮೃತ ಯುವತಿಯನ್ನು 26 ವರ್ಷದ ಐಶ್ವರ್ಯ ಎಂದು ಗುರುತಿಸಲಾಗಿದೆ. ಮೂಲತಃ ಹಾಸನದವರಾದ ಅವರು ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಸಂತೋಷ್ ಎಂಬಾತನೊಂದಿಗೆ ಪ್ರೀತಿಯಲ್ಲಿದ್ದ ಐಶ್ವರ್ಯ ಮದುವೆಯಾಗುವ ಕನಸು ಕಂಡಿದ್ದರು. ಇಬ್ಬರೂ ವಿವಾಹವಾಗಲು ನಿರ್ಧರಿಸಿದ್ದರೂ, ಸಂತೋಷ್ ಪದೇಪದೆ ಮದುವೆಯನ್ನು ಮುಂದೂಡುತ್ತಿದ್ದ ಎನ್ನಲಾಗಿದೆ.

ಖಾಸಗಿ ಫೋಟೋ, ವಿಡಿಯೋ ಇಟ್ಟುಕೊಂಡು ಬೆದರಿಕೆ?

ಪೊಲೀಸರ ತನಿಖೆಯ ಪ್ರಕಾರ, ಸಂತೋಷ್ ಬಳಿ ಐಶ್ವರ್ಯ ಅವರ ಖಾಸಗಿ ಫೋಟೋಗಳು ಮತ್ತು ವಿಡಿಯೋಗಳಿದ್ದವು ಎನ್ನಲಾಗಿದೆ. ಅವುಗಳನ್ನು ಬಳಸಿಕೊಂಡು ಯುವತಿಗೆ ಬೆದರಿಕೆ ಹಾಕುತ್ತಿದ್ದ ಹಾಗೂ ತನ್ನನ್ನು ಭೇಟಿಯಾಗುವಂತೆ ಒತ್ತಡ ಹೇರುತ್ತಿದ್ದ ಎಂಬ ಆರೋಪವೂ ಕೇಳಿಬಂದಿದೆ.ನವೆಂಬರ್ 19ರಂದು ಕೆಲಸದ ಸಂದರ್ಶನಕ್ಕೆ ಹೋಗುತ್ತಿರುವುದಾಗಿ ಐಶ್ವರ್ಯ ಮನೆಯವರಿಗೆ ತಿಳಿಸಿದ್ದರು. ಬಳಿಕ ಸಂತೋಷ್‌ನನ್ನು ಭೇಟಿಯಾಗಲು ಹೋಟೆಲ್‌ಗೆ ತೆರಳಿದ್ದರು. ಇಬ್ಬರೂ ಹೋಟೆಲ್‌ನಲ್ಲಿ ಕೊಠಡಿ ಪಡೆದುಕೊಂಡಿದ್ದು, ಮದ್ಯ ಸೇವಿಸಿದ್ದರು ಎಂದು ಪಿಟಿಐ ವರದಿಯನ್ನು ಉಲ್ಲೇಖಿಸಿ ಪೊಲೀಸರು ತಿಳಿಸಿದ್ದಾರೆ.

ಮಾತಿಗೆ ಮಾತು ಬೆಳೆದು ವಿಕೋಪಕ್ಕೆ

ಅಂದು ಸಂಜೆ ಇಬ್ಬರ ನಡುವೆ ಯಾವುದೋ ವಿಚಾರಕ್ಕೆ ವಾಗ್ವಾದ ಆರಂಭವಾಗಿದೆ ಎನ್ನಲಾಗಿದೆ. ಈ ವೇಳೆ ತನ್ನನ್ನು ಪ್ರಿಯಕರನೂ ನಂಬುತ್ತಿಲ್ಲ, ಮನೆಯವರೂ ನಂಬುತ್ತಿಲ್ಲ ಎಂದು ಐಶ್ವರ್ಯ ಬೇಸರ ವ್ಯಕ್ತಪಡಿಸಿದ್ದರು. ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದರೆನ್ನಲಾಗಿದೆ. ಇದಕ್ಕೆ ಸಂತೋಷ್, ನಿನಗೆ ಏನು ಬೇಕಾದರೂ ಮಾಡಿಕೋ ಎಂದು ಹೇಳಿ ಕೈಯಿಂದ ಆಕೆಯನ್ನು ತಳ್ಳಿದ್ದಾನೆ ಎಂದು ತನಿಖಾಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ. ಪರಿಣಾಮ ಸಮತೋಲನ ಕಳೆದುಕೊಂಡ ಐಶ್ವರ್ಯ ಮೂರನೇ ಮಹಡಿಯ ಕಿಟಕಿಯಿಂದ ಕೆಳಗೆ ಬಿದ್ದಿದ್ದಾರೆ ಎಂಬುದು ಪೊಲೀಸರ ಆರೋಪ.

ವಿದ್ಯುತ್ ಕಂಬಕ್ಕೆ ಬಿದ್ದು ಗಂಭೀರ ಗಾಯ

ಹೋಟೆಲ್‌ನಿಂದ ಕೆಳಗೆ ಬಿದ್ದ ಐಶ್ವರ್ಯ ವಿದ್ಯುತ್ ಕಂಬದ ಮೇಲೆ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ನವೆಂಬರ್ 19ರಂದು ಸಂಜೆ 7.53ಕ್ಕೆ ಮಹಿಳೆಯೊಬ್ಬರು ಕೆಳಗೆ ಬೀಳುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ವರದಿಯಾಗಿದೆ.

ಆತ್ಮಹತ್ಯೆ ಪ್ರಕರಣಕ್ಕೆ ಕೊಲೆ ತಿರುವು

ಆರಂಭದಲ್ಲಿ ಪೊಲೀಸರು ಇದನ್ನು ಶಂಕಿತ ಆತ್ಮಹತ್ಯೆ ಪ್ರಕರಣವೆಂದು ದಾಖಲಿಸಿಕೊಂಡಿದ್ದರು. ಆದರೆ ತನಿಖೆಯ ವೇಳೆ ಲಭ್ಯವಾದ ಸಾಕ್ಷ್ಯಗಳು ಐಶ್ವರ್ಯ ಅವರನ್ನು ಕಿಟಕಿಯಿಂದ ತಳ್ಳಿರಬಹುದು ಎಂಬ ಅನುಮಾನಕ್ಕೆ ಕಾರಣವಾಗಿವೆ. ಬಳಿಕ ಯುವತಿಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಸಂತೋಷ್‌ನನ್ನು ಬಂಧಿಸಲಾಗಿದೆ. ಸದ್ಯ ಆರೋಪಿ ಪೊಲೀಸ್ ಕಸ್ಟಡಿಯಲ್ಲಿದ್ದು, ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದೆ. ಪ್ರೀತಿಸಿ ಮದುವೆಯಾಗುವ ಭರವಸೆ ನೀಡಿದ್ದ ವ್ಯಕ್ತಿಯ ವಿರುದ್ಧವೇ ಇಂತಹ ಗಂಭೀರ ಆರೋಪ ಕೇಳಿಬಂದಿರುವುದು ಪ್ರಕರಣದ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.