ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಇತ್ತೀಚೆಗೆ ಹೆಚ್ಚಾಗಿ ಕೇಳಿಬರುತ್ತಿರುವ ಒಂದೇ ಒಂದು ಪದವೆಂದರೆ ಅದು ಸ್ಟಿಂಗ್ ಆಪರೇಷನ್. ಯಾವಾಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಂಪುಟ ಸಭೆಯಲ್ಲಿ ಈ ಮಾತನ್ನು ಉಲ್ಲೇಖಿಸಿದರೋ ಅಂದಿನಿಂದ ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ ನಿತ್ಯವೂ ಚರ್ಚೆಯಾಗುತ್ತಲೇ ಇದೆ. ಈ ವಿಚಾರವಾಗಿ ಧ್ವನಿ ಎತ್ತಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ( HD Kumaraswamy ) ನಿರಂತರವಾಗಿ ಸುದ್ದಿಗೋಷ್ಠಿ ಮಾಡುತ್ತಾ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಲ್ಲೇ ಇದಾರೆ. ಇಂದೂ ಕೂಡ ಅನೇಕ ಪ್ರಶ್ನೆಗಳನ್ನು ಎತ್ತಿರುವ ಎಚ್ಡಿಕೆ ಸರ್ಕಾರಕ್ಕೆ ನೇರ ಸವಾಲು ಎಸೆದಿದ್ದಾರೆ. ಅಷ್ಟಕ್ಕೂ ಇಂದು ಎಚ್ಡಿಕೆ ಹೇಳಿದ್ದೇನು? ಹಾಲಿ ಸಿಎಂ ಡಿಕೆಶಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಬಗ್ಗೆ ಹೇಳಿದ್ದೇನು? ಸರ್ಕಾರಕ್ಕೆ ಹಾಕಿರುವ ಸವಾಲುಗಳು ಏನು? ಎಂಬ ವಿವರಗಳನ್ನು ತಿಳಿಯೋಣ.
ಜೆಪಿ ಭವನದಲ್ಲಿ ಇಂದು ತುರ್ತು ಸುದ್ದಿಗೋಷ್ಠಿ ನಡೆಸಿದ ಎಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯರ ಸುತ್ತು ಸುತ್ತಿಕೊಂಡಿರುವ ಸ್ಟಿಂಗ್ ಆಪರೇಷನ್ ಬಗ್ಗೆ ಉಲ್ಲೇಖಿಸುತ್ತಾ, ಪಾಪ ಸಿದ್ದರಾಮಯ್ಯ ಅವರ ಪೆನ್ಡ್ರೈವ್ ಕೊಟ್ಟ ಆ ಹೆಣ್ಣು ಮಗಳು ಯಾರು ಮಿಸ್ಟರ್ ಡಿ.ಕೆ. ಶಿವಕುಮಾರ್ ಎಂದು ಪ್ರಶ್ನಿಸಿದರು. ಆ ಹೆಣ್ಣು ಮಗಳನ್ನು ಕೂರಿಸಿಕೊಂಡು ಎಕ್ಸ್ ಪ್ಲೈನ್ ಮಾಡಿದ್ದೀರಾ? ಸ್ಟಿಂಗ್ ಆಪರೇಷನ್ ವಿಚಾರವಾಗಿ ಸಿದ್ದರಾಮಯ್ಯ ಎಲ್ಲಿ ದೂರು ಕೊಟ್ಟಿದ್ದಾರೆ? ಆ ಬಗ್ಗೆ ಮಾಹಿತಿ ಇಲ್ಲ ಏಕೆ? ಎಫ್ಐಆರ್ ಆದಮೇಲೆ ಅಪ್ಡೇಟ್ ಆಗಬೇಕು, ಏಕೆ ಆಗಿಲ್ಲ? ಎಂದು ಸಾಲು ಸಾಲು ಪ್ರಶ್ನೆಗಳನ್ನು ಹಾಕಿದರು.
ಡಿಕೆಶಿ ವಿರುದ್ಧ ವಾಗ್ದಾಳಿ ಮಾಡಿದ ಎಚ್ಡಿಕೆ, ಇವರು ಬೆಳೆದು ಬಂದಿರುವ ಗರಡಿ ಯಾವುದು? ಸಿನಿಮಾ ತಗೆದಂಗಾ ರಾಜ್ಯ ಆಳೋದು? ಕಾಂಗ್ರೆಸ್ನ ನಾಯಕರೇ ನಿಮ್ಮ ಆತ್ಮಸಾಕ್ಷಿಗೆ ತಕ್ಕಂತೆ ಮಾತಾಡಿ. ಸಿದ್ದರಾಮಯ್ಯ ಅವರನ್ನು ಏಕೆ ಸಿಎಂ ಸ್ಥಾನದಿಂದ ಕೆಳಗೆ ಇಳಿಸಿದರು? ಸಿದ್ದರಾಮಯ್ಯ ಅವರು ಸ್ಟೇ ಏಕೆ ತೆಗೆದುಕೊಂಡರು ಎಂದು ಪ್ರಶ್ನಿಸಿದ ಎಚ್ಡಿಕೆ, ನೀವು ಹರಕೆಯ ಕುರಿ ಆಗಬಾರದು, ಈ ಪ್ರಕರಣವನ್ನು ಧೈರ್ಯವಾಗಿ ಎದುರಿಸಿ ಎಂದು ಸಿದ್ದರಾಮಯ್ಯರಿಗೆ ಕರೆ ನೀಡಿದರು.
ಯಾರ್ರಿ ಅವನು ಶೆಟ್ಟಿ ಇನ್ವೆಸ್ಟಿಗೇಶನ್ ಮಾಡೋಕೆ? ಎಷ್ಟು ಜನರ ಮನೆ ಹಾಳು ಮಾಡಿದ್ದಾನೆ ಇವನು? ಇವನಿಗೆ ಪೊಲೀಸ್ ಸೆಕ್ಯುರಿಟಿ ಬೇರೆ ಕೊಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದ ಎಚ್ಡಿಕೆ, ಸಿದ್ದರಾಮಯ್ಯ ಅವರೇ ನೀವು ಅಧಿಕಾರದಲ್ಲಿದ್ದಾಗ ಈ ವ್ಯಕ್ತಿ ಮನೆಯ ಗೃಹ ಪ್ರವೇಶಕ್ಕೆ ಹೋಗಿದ್ರಿ. ಹಾಗಾದರೆ, ಎಷ್ಟು ಬಾರಿ ಆ ವ್ಯಕ್ತಿಯ ಕಾರ್ಯಕ್ರಮಕ್ಕೆ ನೀವು ಹೋಗಿದ್ರಿ? ಅವನ ಮನೆಗೆ ಏಕೆ ಹೋಗಿದ್ರಿ? ಇವನ ಹಿನ್ನೆಲೆ ಏನು ಅಂತಾ ನಿಮಗೆ ಗೊತ್ತಿಲ್ವಾ? ನಿಮಗೆ ಎಷ್ಟು ವರ್ಷಗಳಿಂದ ಬ್ಲಾಕ್ ಮೇಲ್ ಮಾಡಿದ್ದಾರೆ? ಇವರ ಜತೆ ಸೇರಿಕೊಂಡಿದ್ದಾರಲ್ಲ ಆ ಹೆಣ್ಣು ಮಗಳು ಯಾವ ಪಾರ್ಟಿ? ಆಕೆಯನ್ನು ಯಾವುದಕ್ಕೆ ಚೇರ್ಮನ್ ಮಾಡಿದ್ರು? ಆ ಹೆಣ್ಣು ಮಗಳ ಹೆಸರು ಕೃಪಾ ಆಳ್ವಾ ಅಂತಾ ಹೇಳುತ್ತಿದ್ದಾರೆ. ಆ ಹೆಣ್ಣು ಮಗಳನ್ನು ಅಧ್ಯಕ್ಷರು ಮಾಡಿದ್ದು ಯಾರು? 2024ರಲ್ಲೇ ರಮೇಶ್ ಜಾರಕಿಹೊಳಿ ಅವರು ಹೇಳಿದ್ದರು. ಸಿದ್ದರಾಮಯ್ಯ ಅವರೇ ಮುಂದಿನ ಬಾರಿ ನಿಮ್ಮದು ಬರುತ್ತೆ ಅಂತ ಎಂದು ಸಿದ್ದರಾಮಯ್ಯ ಅವರನ್ನು ಉಲ್ಲೇಖಿಸಿ ಹೇಳಿದ ಎಚ್ಡಿಕೆ, ಡಿಕೆಶಿ ಸರ್ಕಾರಕಕ್ಕೆ ಮುಂದುವರಿಯಲು ಯಾವ ನೈತಿಕತೆಯೂ ಇಲ್ಲ. ಡಿಕೆಶಿ ಅವರೇ ಮೊದಲು ನಿಮ್ಮ ಫೋನಿನ ತನಿಖೆ ಆಗಬೇಕು. ನೀವು ಯಾವೆಲ್ಲ ಅಧಿಕಾರಿಗಳ ಜತೆ ಯಾವಗೆಲ್ಲ ಮಾತನಾಡಿದ್ದೀರಿ ಅನ್ನೋದು ಗೊತ್ತಾಗಲಿ ಎಂದು ಎಚ್ಡಿಕೆ ಆರೋಪ ಮಾಡಿದರು.
ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ ಚರ್ಚೆ ಪ್ರಾರಂಭ ಅಗಿದೆ. ಇದು ಕುಮಾರಸ್ವಾಮಿ ಸೃಷ್ಟಿ ಮಾಡಿದ್ದಾ? ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಆಯಿತು ಅಂತ ಮಾಧ್ಯಮದಲ್ಲಿ ಪ್ರಸಾರ ಆಯ್ತು. ಅಷ್ಟಕ್ಕೂ ಸಚಿವ ಸಂಪುಟ ಸಭೆ ನಡೆಯೋದು ರಹಸ್ಯವಾಗಿ. ಅಲ್ಲಿ ನಡೆದಿರೋದನ್ನು ಸುದ್ದಿ ಮಾಡಿ ಎಂದು ಹೇಳಿದ್ದು ಯಾರು? ಸಚಿವ ಸಂಪುಟ ಸಭೆಗೆ ಹೋಗುವ ಮುನ್ನ ಫೈಲ್ ತೆಗೆದುಕೊಂಡು ಹೋಗಿದ್ದು ಯಾರು? ನಾನು ನೈಸ್ ವಿಚಾರದ ಬಗ್ಗೆ ಸುದ್ದಿಗೋಷ್ಠಿ ಮಾಡಿದ್ದೆ. 11 ಗಂಟೆಗೆ ಸ್ಟಿಂಗ್ ಬಗ್ಗೆ ಸುದ್ದಿ ಆಗಬೇಕು ಅಂತ ಹೇಳಿದ್ದು ಯಾರು? ನೈಸ್ ವಿಚಾರ ಡ್ರೈವರ್ಟ್ ಆಗಬೇಕು ಅಂತ ಮಾಡಿದ್ದಾರೆ. ನೈಸ್ ವಿಚಾರದಲ್ಲಿ ಹಲವಾರು ಆರೋಪ ಮಾಡಿದ್ದೇನೆ. ಅದು ಬಿಡಿ ಶಾಂಗ್ರಿಲಾ ಹೋಟೆಲ್ಗೆ ಕರೆಸಿಕೊಂಡ ವ್ಯಕ್ತಿ ಯಾರು? ಅದಕ್ಕಿಂತ ಎರಡು ದಿನ ಮುಂಚೆ ಆ ವ್ಯಕ್ತಿಯನ್ನ ಮನೆಗೆ ಕರೆದುಕೊಂಡಿದ್ರಿ. ನೈಸ್ ಕಂಪನಿ ಗುತ್ತಿಗೆದಾರನ ಇಂಟರ್ವ್ಯೂವ್ ಕೂಡ ಮಾಡಿದ್ದಾರೆ ಎಂದು ಎಚ್ಡಿಕೆ ಹೇಳಿದರು.
ಸ್ಟಿಂಗ್ ಆಪರೇಷನ್ ಬಗ್ಗೆ ನಿನ್ನೆಯಿಂದ ತನಿಖೆ ಆರಂಭ ಮಾಡಿದ್ದಾರೆ. ನಿನ್ನೆ ಗೃಹ ಸಚಿವರು ಅತ್ಯಂತ ಕಠಿಣ ಪದಗಳನ್ನು ಬಳಸಿ ಮಾತನಾಡಿದ್ದಾರೆ. ಇಡಿ ಅವರು ಬಂದಿಲ್ಲ ಅಂದಿದ್ರೆ ಇವರು ಕೆಪಿಎಸ್ಸಿ ಕರ್ಮಕಾಂಡವನ್ನು ಮುಚ್ಚಿ ಹಾಕ್ತಾ ಇದ್ರು. ಆರ್ಡಿಪಿಆರ್ ಇಲಾಖೆ ಅಕ್ರಮ ನೇಮಕಾತಿ ಬಗ್ಗೆಯೂ ಆರೋಪ ಮಾಡಿದ್ದೆ. ಬಳಿಕ ಹೈಕೋರ್ಟ್ ತನಿಖೆ ಮಾಡೋಕೆ ಆದೇಶ ಮಾಡಿತ್ತು. ಪ್ರಿಯಾಂಕ್ ಖರ್ಗೆ ಅವರೇ ನೀವು ಪ್ರಾಮಾಣಿಕತೆ ಪ್ರದರ್ಶನ ಮಾಡುವಂತಹವರು. ನೀವು ಸುಪ್ರೀಂಕೋರ್ಟ್ಗೆ ಹೋಗಿದ್ದೀರಿ. ಅಲೋಕ್ ಕುಮಾರ್ ಅವರು ತನಿಖೆಯಿಂದ ಹಿಂದೆ ಸರಿದ್ದಾರೆ. ನೀವು ಅಷ್ಟು ಪ್ರಾಮಾಣಿಕರಾಗಿದ್ದರೆ AEE ನೇಮಕಾತಿಯನ್ನು ತನಿಖೆಗೆ ಕೋಡಬೇಕಿತ್ತು ಎಂದು ಸವಾಲು ಹಾಕಿದರು.
ನಮ್ಮ ಸೋಷಿಯಲ್ ಮೀಡಿಯಾದಲ್ಲಿ ಕೆಲಸ ಮಾಡೋ ಯುವಕನನ್ನು ನಿನ್ನೆ ಬೆಳಗ್ಗೆ 6.30ಕ್ಕೆ ಕರೆದುಕೊಂಡು, ರಾತ್ರಿ 8 ಗಂಟೆವರೆಗೆ ಇಟ್ಕೊತಾರೆ. ಅದ್ಯಾವ್ದೋ ಗೋಡೋನ್ಗೆ ಕರೆದುಕೊಂಡು ಆ ಧೂಳಿನಲ್ಲಿ ಕೂರಿಸಿಕೊಂಡು ಅದೇಳು ಇದೇಳು ಅಂತಾ ಕಿರುಕುಳು ನೀಡಿದ್ದಾರೆ. ನಮ್ಮ ವಾರ್ ರೂಮ್ನಲ್ಲಿ ಕೆಲಸ ಮಾಡೋನಿಗೆ ಫೋನ್ ಮಾಡಿ ಅದೇಳು ಇದೇಳು ಅಂತಾ ಕಿರುಕುಳ ಕೊಟ್ಟಿದ್ದಾರೆ. ನಿಮ್ಮ ಸಿಎಂ ಕಚೇರಿಯಲ್ಲಿ ಇದ್ದಾರಲ್ಲಾ ಅಧಿಕಾರಿಗಳು ಅವರ ಪೋನ್ ಟ್ಯಾಬ್ ತಗೊಂಡು ತನಿಖೆ ಮಾಡಿ ಎಲ್ಲಾ ಸಿಗುತ್ತದೆ. ನಾನಾ ಈ ಎಲ್ಲವನ್ನೂ ಮಾಡಿದ್ದು? ಸೈಬರ್ ಕ್ರೈಮ್ ಪೊಲೀಸ್ನವರು ನಿನ್ನೆ ರಾತ್ರಿ ನೋಟೀಸ್ ಕೊಡ್ತಾರೆ? ಯಾವ ಆಧಾರದ ಮೇಲೆ ಎಕ್ಸ್ಟ್ರಾಕ್ಷನ್ ಮಾಡಿದ್ದಾನೆ ಅಂತಾ ನೋಟೋಸ್ ಕೊಡ್ತೀರಿ? ಎಂದು ಪ್ರಶ್ನೆ ಮಾಡಿದ ಎಚ್ಡಿಕೆ, ಇದೇ ಸಂದರ್ಭದಲ್ಲಿ ಪೊಲೀಸ್ನವರು ಸೋಷಿಯಲ್ ಮೀಡಿಯಾ ಹ್ಯಾಂಡಲ್ ಮಾಡೋ ಯುವಕನ ಮನೆಗೆ ಹೋದ ವಿಡಿಯೋ ಬಿಡುಗಡೆ ಮಾಡಿದರು. ನಮ್ಮ ಹುಡುಗ ಮೋಹನ್ ಗೌಡ. ಪಾಪ ಅವರ ಮನೆಗೆ ರಾತ್ರಿ 8 ಗಂಟೆಗೆ ಹೋಗಿ ಮನೆ ಬಾಗಿಲು ತಟ್ಟಿದರೆ ಆ ರಾತ್ರಿ ಹೆಣ್ಣು ಮಗಳಿಗೆ ಏನು ಆಗಬೇಕು? ಪೊಲೀಸ್ನವರು ಹೇಳ್ತಾರೆ ನಿಮ್ಮ ಮೊಬೈಲ್, ಲ್ಯಾಪ್ ಟಾಪ್ ಎಲೆಕ್ಟ್ರಾನಿಕ್ ಉಪಕರಣಗಳನ್ನು ಕೊಡಿ ಅಂತಾ ಕೇಳ್ತಾರೆ. ನಾನು ಪೊಲೀಸ್ ಕಮಿಷನರ್ಗೆ ಕೇಳ್ತೀನಿ, ಬೇರೆ ಎಲ್ಲೋ ಯಾಕೆ ಹುಡುಕುತ್ತೀರಾ ನಿಮ್ಮ ಸಿಎಂ ಮನೆಗೆ ಹೋಗಿ ಎಂದು ಎಚ್ಡಿಕೆ ಹೇಳಿದರು.
ಇನ್ನು ಸ್ಟಿಂಗ್ ಆಪರೇಷನ್ ಪ್ರಕರಣವನ್ನು ಸಿಬಿಐಗೆ ವಹಿಸಿದರೆ ಸಿದ್ದರಾಮಯ್ಯ ಮಾನ ಮರ್ಯಾದೆ ಏಕೆ ಹೋಗುತ್ತದೆ ಎಂದ ಎಚ್ಡಿಕೆ, ಹೋದರೆ ಈ ಸರ್ಕಾರದ್ದು ಹೋಗುತ್ತದೆ. ಹಾಲಿ ನ್ಯಾಯಾಧೀಶರ ಮೂಲಕ ತನಿಖೆ ಮಾಡಿಸಲಿ ಸರ್ಕಾರ. ಸದ್ಯ ರಾಜ್ಯದಲ್ಲಿ ಅನಾಗರೀಕ ಸರ್ಕಾರ ಇದೆ. ನನ್ನ ಹಾಗೂ ನಿಖಿಲ್ ವಿರುದ್ಧ ಪೋಸ್ಟರ್ ಹಚ್ಚಿದಾಗ ಪ್ರಿಯಾಂಕ ಖರ್ಗೆ ಎಲ್ಲಿಗೆ ಹೋಗಿದ್ದರು? ನನಗೆ ಭಯವಿಲ್ಲ, ನಮ್ಮ ಕಾರ್ಯಕರ್ತರು ತಪ್ಪು ಮಾಡಿಲ್ಲ ಎಂದು ಕುಮಾರಸ್ವಾಮಿ ಸರ್ಕಾರದ ವಿರುದ್ಧ ಕಿಡಿಕಾರಿದರು.