ನಡುರಸ್ತೆಯಲ್ಲಿ ಬಿಯರ್ ಹೀರುತ್ತಾ, ವಾಹನ ಚಲಾಯಿಸುತ್ತಿರುವ ವಿಡಿಯೋ ವೈರಲ್
- ಸಿಲಿಕಾನ್ ಸಿಟಿ ಬದಲು ಕುಡುಕರ ಕಿಂಗ್ಡಮ್ ಆದ ಬೆಂಗಳೂರು
- ನಡುರಸ್ತೆಯಲ್ಲಿ ಬಿಯರ್ ಹೀರುತ್ತಾ, ವಾಹನ ಚಲಾಯಿಸುತ್ತಿರುವ ವಿಡಿಯೋ ವೈರಲ್
- ಈ ಪುಂಡರನ್ನು ಆದಷ್ಟು ಬೇಗ ಬಂಧಿಸುತ್ತೇವೆ ಎಂದ ಟ್ರಾಫಿಕ್ ಪೊಲೀಸರು
ಬೆಂಗಳೂರು: ಸಿಲಿಕಾನ್ ಸಿಟಿ, ಐಟಿ ಸಿಟಿ ಮತ್ತು ಉದ್ಯಾನಗಳ ನಗರ ಎಂದು ಕರೆಸಿಕೊಳ್ಳುತ್ತಿದ್ದ ಬೆಂಗಳೂರು ಈಗ ಸದ್ಯ ಕುಡುಕರ ಕಿಂಗ್ಡಮ್ ಎಂದು ಕುಖ್ಯಾತಿ ಗಳಿಸುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.
ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ಹರಿದಾಡುತ್ತಿದ್ದು, ಅದರಲ್ಲಿ ಬೆಂಗಳೂರಿನ ಅತ್ಯಂತ ಬ್ಯುಸಿ ರಸ್ತೆಯಾದ ಬಿಟಿಎಮ್ ಲೇಔಟ್ನಲ್ಲಿ ಪಾನಮತ್ತರಾದ ಯುವಕರು ಸ್ಕೂಟಿಯನ್ನು ಮನಬಂದಂತೆ ಚಲಾಯಿಸುತ್ತಿರುವ ವಿಡಿಯೋ ವೈರಲ್ (Viral Video) ಆಗುತ್ತಿದೆ.
ವಿಡಿಯೋನಲ್ಲಿ ಏನಿದೆ?
ಒಂದು ಸ್ಕೂಟಿಯಲ್ಲಿ ಮೂರು ಜನ ಯುವವಕರು ಕುಳಿತಿದ್ದು, ಕೊನೆಯಲ್ಲಿ ಕುಳಿತಿರುವ ಯುವಕ ವಾಹನ ಚಲಾಯಿಸುತ್ತಿರುವಾಗಲೇ ಬಿಯರ್ನ್ನು ಬಾಯಿಗೆ ಸುರಿದು ಕೊಳ್ಳುತ್ತಿರುವ ದೃಶ್ಯವನ್ನು ವಿಡಿಯೋನಲ್ಲಿ ನೋಡಬಹುದಾಗಿದೆ.
ಈ ಯುವಕರ ಸುತ್ತಲೂ ಇತರೆ ವಾಹನಗಳಿದ್ದರೂ ಸಹ ಈ ಮೂವರು ಹೆಲ್ಮಟ್ ಧರಿಸದೇ, ತ್ರಿಬಲ್ ರೈಡಿಂಗ್ ಮಾಡುತ್ತಾ ಸಾರ್ವಜನಿಕ ಸ್ಥಳಗಳಲ್ಲಿ ಮಧ್ಯ ಸೇವನೆ ಮಾಡುವ ಮೂಲಕ ಟ್ರಾಫಿಕ್ ನಿಯಮಗಳನ್ನು ಗಾಳಿಗೆ ತೂರಿದ್ದಾರೆ.
ರೊಚ್ಚಿಗೆದ್ದ ಬೆಂಗಳೂರಿನ ಜನತೆ!
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಬೆಂಗಳೂರಿಗರು ರೊಚ್ಚಿಗೆದ್ದಿದ್ದು, ಈ ಹಾಳಾದ ಜನರಿಂದ ನಮ್ಮ ನಗರದ ಮಾನ ಹರಾಜಾಗುತ್ತಿದೆ ಎಂದು ಒಬ್ಬರು ಹೇಳಿದರೆ, ಈ ಮೂರ್ಖರನ್ನು ಕೂಡಲೇ ಬಂಧಿಸಬೇಕೆಂದು ಮತ್ತೊಬ್ಬರು ಟ್ರಾಫಿಕ್ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.
ಪೊಲೀಸರಿಂದ ಮುಂದುವರೆದ ಶೋಧ
ಈ ವಿಡಿಯೋ ಎಲ್ಲಾ ಕಡೆ ಹರಿದಾಡಲು ಪ್ರಾರಂಭವಾದಾಗ ಎಚ್ಚೆತ್ತ ಪೊಲೀಸ್ ಇಲಾಖೆ, ಈ ಕುಡುಕರ ಪತ್ತೆಗೆ ಮುಂದಾಗಿದೆ. ಸ್ಥಳದಲ್ಲಿದ್ದ ಸಿಸಿಟಿವಿಯನ್ನು ಪರಿಶೀಲಿಸಿರುವ ಟ್ರಾಫಿಕ್ ಪೊಲೀಸರು ಶೀಘ್ರದಲ್ಲಿ ಪುಂಡ ಯುವಕರನ್ನು ಬಂಧಿಸುವುದಾಗಿ ಭರವಸೆ ನೀಡಿದ್ದಾರೆ,(ಏಜನ್ಸೀಸ್).