ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸದ್ಯ ಸಂಚಲನ ಮೂಡಿಸಿರುವ 'ಸ್ಟಿಂಗ್ ಆಪರೇಷನ್' ಎಚ್ಚರಿಕೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ವಿಜಯದಶಮಿ ನಂತರ ರಾಜ್ಯದಲ್ಲಿ ದೊಡ್ಡ ಮಟ್ಟದ ರಾಜಕೀಯ ಬೆಳವಣಿಗೆಗಳು ಆಗಲಿವೆ ಎಂದು ಈ ಹಿಂದೆ ನೀಡಿದ್ದ ಮುನ್ಸೂಚನೆಗೂ ಮುನ್ನವೇ ಈಗ ಆಡಳಿತ ಪಕ್ಷದಲ್ಲಿ ಬೆಳವಣಿಗೆಗಳು ಆರಂಭವಾಗಿವೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ( HD Kumaraswamy ) ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, ಸಿಎಂ ನೀಡಿರುವ ಹೇಳಿಕೆಗಳು ಹಾಗೂ ಸರ್ಕಾರದ ನಡೆಯ ಹಿಂದೆ ದೊಡ್ಡ ಅನುಮಾನಗಳಿವೆ ಎಂದು ಅವರು ಕಿಡಿಕಾರಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯದ ಮುಖ್ಯಮಂತ್ರಿಗಳೇ ತಮ್ಮ ಸಂಪುಟದ ಸಚಿವರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿರುವುದು ಹಾಗೂ ಸ್ಟಿಂಗ್ ಆಪರೇಷನ್ ಮಾಹಿತಿಯ ಫೈಲ್‌ಗಳನ್ನು ಇಟ್ಟುಕೊಂಡು ಚರ್ಚೆ ನಡೆಸಿರುವುದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಆರೋಪಿಸಿದ್ದಾರೆ. ಸ್ವತಃ ಸಿಎಂ ಅವರೇ ಈ ಸೂಕ್ಷ್ಮ ವಿಚಾರಗಳಿಗೆ ವೇದಿಕೆ ಸಿದ್ಧಪಡಿಸಿಕೊಟ್ಟಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಇತ್ತೀಚೆಗೆ ರಾಜ್ಯದಲ್ಲಿ ನಡೆದಿರುವ ಸ್ಟಿಂಗ್ ಆಪರೇಷನ್ ಬಗ್ಗೆ ಬಿಜೆಪಿ ನಾಯಕರು ದೂರು ನೀಡಲಿ, ತನಿಖೆ ಮಾಡಿಸುತ್ತೇವೆ ಎಂದು ಗೃಹ ಸಚಿವರು ಹೇಳಿಕೆ ನೀಡಿರುವುದನ್ನು ಎಚ್‌ಡಿಕೆ ಪ್ರಶ್ನಿಸಿದ್ದಾರೆ. ಯಾವುದೇ ಅಧಿಕೃತ ದೂರುಗಳು ಇಲ್ಲದಿದ್ದರೂ ಹಿಂದಿನ ಪ್ರಕರಣಗಳಲ್ಲಿ ತನಿಖೆಗಳನ್ನು ನಡೆಸಿಲ್ಲವೇ? ಈಗ ಮಾತ್ರ ಯಾಕೆ ದೂರಿನ ನೆಪ ಒಡ್ಡುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಟಿಂಗ್ ಆಗಿರುವುದು ಸಿಎಂಗೆ ಮಾತ್ರ ಗೊತ್ತಿತ್ತು ಎಂದಿದ್ದಾರೆ. ಹಾಗಾದರೆ, ಆ ಸ್ಟಿಂಗ್ ಫೈಲ್ ಅನ್ನು ಮುಖ್ಯಮಂತ್ರಿಗೆ ಹಸ್ತಾಂತರಿಸಿದ ವ್ಯಕ್ತಿ ಯಾರು ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಅಲ್ಲದೆ, ನೀವು ಎಂತಹ ಅಧಿಕಾರಿಗಳನ್ನು ಇಟ್ಟುಕೊಂಡಿದ್ದಿರಾ? ಅಧಿಕಾರಿಗಳಿಗೆ ಬಹುಮಾನ ಕೊಟ್ರಲ್ಲಾ ಪರಮೇಶ್ವರ್, ಇದನ್ನ ಯಾಕೆ ತನಿಖೆ ಮಾಡ್ತಿಲ್ಲಾ? ಯಾತಕ್ಕೆ ಮೌನಕ್ಕೆ ಶರಣಾಗಿದ್ದಿರಾ? ಎಲ್ಲವನ್ನು ಯಾಕೆ ಮುಚ್ಚಿಟ್ಟುಕೊಂಡಿದ್ದಿರಾ? ತೆರೆಮರೆಯಲ್ಲಿ ನಡೆಯುತ್ತಿರುವ ಈ ನಾಟಕಗಳ ಹಿಂದಿನ ಸತ್ಯ ಹೊರಬರಬೇಕು ಎಂದು ಆಡಳಿತ ವ್ಯವಸ್ಥೆಯ ವಿರುದ್ಧ ಎಚ್‌ಡಿಕೆ ಹರಿಹಾಯ್ದಿದ್ದಾರೆ.
ರಾಜ್ಯದಲ್ಲಿ ಇಷ್ಟೆಲ್ಲಾ ರಾಜಕೀಯ ಬೆಳವಣಿಗೆಗಳು ಮತ್ತು ಸ್ಟಿಂಗ್ ಗದ್ದಲಗಳು ನಡೆಯುತ್ತಿದ್ದರೂ, ಮುಖ್ಯಮಂತ್ರಿಗಳು ಹೋಗಿ ತಾಯಿ ಚಾಮುಂಡೇಶ್ವರಿಯ ಪೂಜೆ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ. ಸಚಿವರ ಮೇಲೆ ಕ್ರಮ ಕೈಗೊಳ್ಳಿ ಎನ್ನುತ್ತಿಲ್ಲ, ಬದಲಿಗೆ ಸಚಿವರ ಮೇಲೆ ಅಕ್ರಮವಾಗಿ ಸ್ಟಿಂಗ್ ಆಪರೇಷನ್ ಮಾಡಿದವರ ವಿರುದ್ಧ ಯಾಕೆ ತನಿಖೆ ನಡೆಸುತ್ತಿಲ್ಲ ಎಂದು ಆಗ್ರಹಿಸಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಮುಂಬರುವ ಹಿರಿಯೂರು ಉಪಚುನಾವಣೆ, ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತ್ ಚುನಾವಣೆಗಳಿಗೆ ತಾಲೀಮು ಆರಂಭವಾಗಿರುವುದಾಗಿ ತಿಳಿಸಿದ್ದಾರೆ. ಈ ಚುನಾವಣೆಯಲ್ಲಿ ಬಿಜೆಪಿಗೆ ಜೆಡಿಎಸ್ ಬೆಂಬಲ ಕೋರಿರುವ ವಿಚಾರ ಹಾಗೂ ಮೈತ್ರಿ ಕುರಿತಂತೆ ಪಕ್ಷದ ಒಳಗೆ ಗಂಭೀರ ಚರ್ಚೆಗಳು ನಡೆಯುತ್ತಿವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸ್ಥಳೀಯ ಸಂಸ್ಥೆಗಳು ಹಾಗೂ ಉಪಚುನಾವಣೆಗಳಲ್ಲಿ ಅನುಸರಿಸಬೇಕಾದ ರಣತಂತ್ರಗಳ ಕುರಿತು ಪಕ್ಷದ ಮುಖಂಡರೊಂದಿಗೆ ಸಮಾಲೋಚನೆ ನಡೆಸುತ್ತಿರುವುದಾಗಿ ಎಚ್‌ಡಿಕೆ ತಿಳಿಸಿದ್ದಾರೆ. ರಾಜ್ಯ ಸರ್ಕಾರದ ವೈಫಲ್ಯಗಳು ಹಾಗೂ ಈ ಸ್ಟಿಂಗ್ ಆಪರೇಷನ್ ವಿವಾದಗಳನ್ನು ಮುಂದಿನ ಚುನಾವಣೆಯಲ್ಲಿ ಪ್ರಮುಖ ಅಸ್ತ್ರಗಳಾಗಿ ಬಳಸಿಕೊಳ್ಳುವ ಬಗ್ಗೆಯೂ ರಾಜಕೀಯ ವಲಯದಲ್ಲಿ ಚರ್ಚೆಗಳು ಗರಿಗೆದರಿವೆ, (ಏಜೆನ್ಸೀಸ್).