ಪತ್ನಿ ಸೇರಿದಂತೆ 7 ಮಂದಿಯನ್ನು ಕೊಲೆ ಮಾಡಿದ ಕ್ಯಾಬ್ ಚಾಲಕ .
ಪತ್ನಿ ಕುಟುಂಬಸ್ಥರನ್ನು ಕೊಂದು ಚಿಕ್ಕಬಳ್ಳಾಪುರದಲ್ಲಿ ಶವ ಬಿಸಾಡಿದ್ದ ಆರೋಪಿ ಅರೆಸ್ಟ್.
ಕ್ಯಾಬ್ ಚಾಲಕ ಶೇಖರ್ ಅಲಿಯಾಸ್ ಇಂದುಶೇಖರ್ (45 ) ಬಂಧನ.
ಬೆಂಗಳೂರು: ಪತ್ನಿ ತವರು ಮನೆಯವರೊಂದಿಗೆ ಸಂಬಂಧವನ್ನು ಮುಂದುವರಿಸಿದ್ದಕ್ಕೆ ಅಸಮಾಧಾನಗೊಂಡಿದ್ದ ಪತಿ, ಆಕೆಯನ್ನು ಸೇರಿದಂತೆ ಕುಟುಂಬದ 7 ಸದಸ್ಯರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.(Bengaluru Family Murder)
ಕ್ಯಾಬ್ ಚಾಲಕ ಶೇಖರ್ ಅಲಿಯಾಸ್ ಇಂದುಶೇಖರ್ (45 ) ಬಂಧಿತ ಆರೋಪಿ. ಶ್ರೀರಾಮಪುರದ ರೂಪವತಿ, ಆಕೆಯ ಮಗಳು ಸುನೀತಾ, ಪುತ್ರರಾದ ಶಿವಕುಮಾರ್ ಮತ್ತು ಶಂಕರ್, ಸೊಸೆ ದಿವ್ಯಾ ಮತ್ತು ನಳಿನಿ ಹಾಗೂ ಏಳು ವರ್ಷದ ಮೊಮ್ಮಗ ಪುನೀತ್ ಮೃತಪಟ್ಟ ದುರ್ದೈವಿಗಳು.
ರಾಜಾಜಿನಗರದ ಭಾಷ್ಯಂ ವೃತ್ತದ ಬಳಿಯ ತನ್ನ ಮನೆಯಲ್ಲಿಯೇ ಎರಡು ದಿನಗಳ ಕಾಲ ಈ ಕೃತ್ಯ ಎಸಗಿರುವ ಆರೋಪಿ, ಬಳಿಕ ಕೆಲ ಶವಗಳನ್ನು ಚಿಕ್ಕಬಳ್ಳಾಪುರ ಸಮೀಪದ ವಿವಿಧ ಸ್ಥಳಗಳಲ್ಲಿ ವಿಲೇವಾರಿ ಮಾಡಿದ್ದಾನೆ. ರಾಜಾಜಿನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ತನಿಖೆ ಮುಂದುವರೆಸಿದ್ದಾರೆ.
ಇಂದುಶೇಖರ್ ಮತ್ತು ಸುನೀತಾ ಕಳೆದ 20 ವರ್ಷದ ಹಿಂದೆ ಮದುವೆಯಾಗಿ ಅನೋನ್ಯವಾಗಿ ಜೀವನ ನಡೆಸುತ್ತಿದ್ದರು. ಆದರೆ, ಆತನಿಗಿದ್ದ ಒಂದೇ ಒಂದು ಸಮಸ್ಯೆ ಎಂದರೆ, ಅದು ಪತ್ನಿ ತನ್ನ ತವರಿನೊಂದಿಗೆ ಸಂಬಂಧ ಮುಂದುವರೆಸುವುದು. ಈ ವಿಚಾರವಾಗಿ ಇಬ್ಬರ ಮಧ್ಯೆ ಆಗಾಗ ಕಲಹವಾಗುತ್ತಿತ್ತು. ಪತ್ನಿಯ ತಾಯಿ ಮತ್ತು ಸಹೋದರರು ಆಕೆಯ ಪರವಾಗಿ ನಿಲ್ಲುತ್ತಿದ್ದದ್ದನ್ನು ಶೇಖರ್ ಸಹಿಸುತ್ತಿರಲಿಲ್ಲ. ಪತ್ನಿಯ ಕುಟುಂಬದವರೇ ತಮ್ಮ ದಾಂಪತ್ಯ ಜೀವನದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಶಂಕಿಸಿದ ಶೇಖರ್, ಅವರನ್ನು ಸಂಪೂರ್ಣವಾಗಿ ಮುಗಿಸಲು ನಿರ್ಧರಿಸಿದ್ದನು.
ಮೊದಲು ರೂಪವತಿಯನ್ನು ಮನೆಯಲ್ಲಿಯೇ ರುಬ್ಬುವ ಕಲ್ಲಿನಿಂದ ಕೊಂದ ಆತ, ತನ್ನ ಕುಟುಂಬಸ್ಥರಿಗೆ ಯಾವುದೇ ಅನುಮಾನ ಬಾರದಂತೆ ಇರಲು, ಪತ್ನಿ ಪ್ರವಾಸಕ್ಕೆ ತೆರಳಿದ್ದಾಳೆ ಎಂದು ಸುಳ್ಳು ಹೇಳಿದ್ದಾನೆ. ನಂತರ ಮದ್ಯಪಾನದ ನೆಪದಲ್ಲಿ ಶಿವಕುಮಾರ್ ಮತ್ತು ಶಂಕರ್ನನ್ನು ಮನೆಗೆ ಕರೆಸಿ ಅದೇ ರುಬ್ಬುವ ಕಲ್ಲಿನಿಂದ ಹತ್ಯೆ ಮಾಡಿದ್ದಾನೆ.ಆನಂತರ ಬಾಮೈದರ ಪತ್ನಿಯರಾದ ನಳಿನಿ, ದಿವ್ಯಾ, ಪತ್ನಿಯ ತಾಯಿ ರೂಪವತಿ ಹಾಗೂ ಬಾಲಕ ಪುನೀತ್ನನ್ನು ಕೊಂದಿದ್ದಾನೆ ಎನ್ನಲಾಗಿದೆ.
ನಳಿನಿ ನಾಪತ್ತೆಯಾದ ಹಿನ್ನೆಲೆಯಲ್ಲಿ ಅವರ ತಾಯಿ ಶ್ರೀರಾಮಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆಯ ವೇಳೆ ಪೊಲೀಸರಿಗೆ ಶೇಖರ್ ಮೇಲೆಯೇ ಸಂಶಯ ಬಂದು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ವಿಚಾರ ಬೆಳಕಿಗೆ ಬಂದಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಬೆಟ್ಟದ ಸಮೀಪ 7 ವರ್ಷದ ಬಾಲಕ ಪುನೀತ್ ಮೃತದೇಹ ಪತ್ತೆಯಾಗಿದ್ದು, ಇನ್ನುಳಿದ ಶವಗಳನ್ನು ಆರೋಪಿ ಎಲ್ಲೆಲ್ಲಿ ಎಸೆದಿದ್ದಾನೆ ಎಂಬುದನ್ನು ಪತ್ತೆ ಹಚ್ಚಲು ಪೊಲೀಸರು ಶ್ರಮಿಸುತ್ತಿದ್ದಾರೆ, (ಏಜೆನ್ಸೀಸ್).