ಬೆಂಗಳೂರು

ಐಟಿ ಉದ್ಯೋಗಿಗಳಿಗೆ ಗುಡ್ ನ್ಯೂಸ್; KR ಪುರ - ದೊಡ್ಡನೆಕ್ಕುಂದಿ ಮೆಟ್ರೋ ಪ್ರಾಯೋಗಿಕ ಸಂಚಾರಕ್ಕೆ ಚಾಲನೆ; ಎಂದಿನಿಂದ ಸಾರ್ವಜನಿಕ ಸೇವೆಗೆ ಮುಕ್ತ?

  • ನಮ್ಮ ಮೆಟ್ರೋ ಬ್ಲೂ ಲೈನ್ ಹಂತ 2A ವಿಭಾಗದಲ್ಲಿ ಪ್ರಾಯೋಗಿಕ ಸಂಚಾರ ಆರಂಭ.

  • ಕೆ.ಆರ್. ಪುರದಿಂದ ಮಹದೇವಪುರ ಕಡೆಯ ಮೊದಲ ನಾಲ್ಕು ನಿಲ್ದಾಣಗಳಲ್ಲಿ ಪ್ರಾಯೋಗಿಕ ಸಂಚಾರ.

  • ಕೆ.ಆರ್. ಪುರ - ಸೆಂಟ್ರಲ್ ಸಿಲ್ಕ್ ಬೋರ್ಡ್ ಮಾರ್ಗದಲ್ಲಿ 13 ನಿಲ್ದಾಣಗಳಿದ್ದು, 2027ರ ಮಧ್ಯಭಾಗದಲ್ಲಿ ಸಾರ್ವಜನಿಕರಿಗೆ ಮುಕ್ತಗೊಳಿಸುವ ಗುರಿ.

ಬೆಂಗಳೂರು: ಕೆಆರ್ ಪುರ - ಸೆಂಟ್ರಲ್ ಸಿಲ್ಕ್ ಬೋರ್ಡ್ ಮಾರ್ಗದಲ್ಲಿ ಉಂಟಾಗುತ್ತಿರುವ ಸಂಚಾರ ದಟ್ಟಣೆ ತಪ್ಪಿಸಲು ನಿರ್ಮಾಣವಾಗುತ್ತಿರುವ ನೀಲಿ ಮಾರ್ಗದ ಮೆಟ್ರೋ ಕಾರಿಡಾರ್‌ನ ಮೊದಲ ಹಂತದಲ್ಲಿ ಪ್ರಾಯೋಗಿಕ ಸಂಚಾರ ಆರಂಭವಾಗಿದೆ. 2027ರ ಮಧ್ಯಭಾಗದ ವೇಳೆಗೆ ಪೂರ್ಣ ಪ್ರಮಾಣದ ಪ್ರಯಾಣಿಕರ ಸೇವೆಯನ್ನು ಆರಂಭಿಸುವ ಗುರಿ ಹೊಂದಲಾಗಿದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಮಂಗಳವಾರ ಕೆ.ಆರ್. ಪುರದಿಂದ ಮಹದೇವಪುರ ಕಡೆಯ ಮೊದಲ ನಾಲ್ಕು ನಿಲ್ದಾಣಗಳ ವ್ಯಾಪ್ತಿಯಲ್ಲಿ ಪರೀಕ್ಷಾರ್ಥ ಸಂಚಾರ ಆರಂಭವಾಗಿದ್ದು, ಮುಂಬರುವ ವಾರಗಳಲ್ಲಿ ಇತರ ನಿಲ್ದಾಣಗಳಿಗೂ ವಿಸ್ತರಿಸಲಾಗುವುದು ಎಂದು ದೊಡ್ಡನೆಕ್ಕುಂದಿ ಮೆಟ್ರೋ ನಿಲ್ದಾಣದಲ್ಲಿ ಕಾಮಗಾರಿ ಪರಿಶೀಲನೆ ನಡೆಸಿದ ಬಳಿಕ ಈ ಬಗ್ಗೆ ಮಾಹಿತಿ ಹಂಚಿಕೊಂಡರು.

ಎಕ್ಸ್​ ಪೋಸ್ಟ್​ನಲ್ಲಿ ಏನಿದೆ?

ನೀಲಿ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ ಆರಂಭವಾಗುತ್ತಿರುವ ಬಗ್ಗೆ ಮಾಹಿತಿ ಹಂಚಿಕೊಂಡ ಸಚಿವ ಕೃಷ್ಣ ಬೈರೇಗೌಡ ಅವರು, ನೀಲಿ ಮಾರ್ಗದ ಮೆಟ್ರೋ ಬೆಂಗಳೂರಿನ ಸಮೂಹ ಸಾರಿಗೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರಲಿರುವ ಯೋಜನೆ ಆಗಲಿದೆ.

ಕೆ.ಆರ್. ಪುರದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ವರೆಗಿನ ಸಂಪರ್ಕ ಮಾರ್ಗವನ್ನು ಕಾರ್ಯಗತಗೊಳಿಸಲು ನಾವು ನಿರಂತರವಾಗಿ ಶ್ರಮಿಸುತ್ತಿದ್ದೇವೆ. ಇದೀಗ ನಾವು ಪ್ರಮುಖ ಮೈಲಿಗಲ್ಲೊಂದನ್ನು ತಲುಪಿದ್ದು, ಈ ವಿಭಾಗದಲ್ಲಿ ಪ್ರಾಯೋಗಿಕ ಸಂಚಾರ ಆರಂಭವಾಗಿದೆ. ಸದ್ಯ ಕೆ.ಆರ್. ಪುರದಿಂದ ದೊಡ್ಡನೆಕ್ಕುಂದಿವರೆಗೆ ರೈಲು ಸಂಚರಿಸುತ್ತಿದೆ. ಇನ್ನೆರಡು ತಿಂಗಳಲ್ಲಿ ಸ್ವಯಂಚಾಲಿತ ಸಿಗ್ನಲಿಂಗ್ ವ್ಯವಸ್ಥೆ ಕಾರ್ಯಾರಂಭ ಮಾಡಲಿದೆ. ಆ ಬಳಿಕ ನಾವು ಸುರಕ್ಷತಾ ಪ್ರಮಾಣೀಕರಣಕ್ಕೆ ಸಿದ್ಧರಾಗಲಿದ್ದೇವೆ. ಆದಷ್ಟು ಬೇಗ ಈ ಮಾರ್ಗವನ್ನು ಸಾರ್ವಜನಿಕರ ಬಳಕೆಗೆ ಸಮರ್ಪಿಸಲು ಪ್ರತಿ ಹಂತದಲ್ಲೂ ಸಕ್ರಿಯವಾಗಿ ಪ್ರಯತ್ನಿಸುತ್ತಿದ್ದೇವೆ.

ಬೆಂಗಳೂರಿನ ಸಂಚಾರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಮ್ಮ ಸಮಗ್ರ ಯೋಜನೆಗಳ ಸರಣಿಗೆ ಮುಂದಿನ ಪ್ರಮುಖ ಸೇರ್ಪಡೆಯಾಗಿರುವ 'ಬ್ಲೂ ಲೈನ್'ನ ಮೊದಲ ನೋಟ ನಿಮಗಾಗಿ ಇಲ್ಲಿದೆ ಎಂದು ವಿಡಿಯೋ ಹಂಚಿಕೊಂಡಿದ್ದಾರೆ .

ಐಟಿ ಕಂಪನಿ ಉದ್ಯೋಗಿಗಳಿ ಗುಡ್​ನ್ಯೂಸ್

ಕೆಆರ್​ ಪುರಂನಿಂದ ಸಿಲ್ಕ್​ಬೋರ್ಡ್ ಮಾರ್ಗದಲ್ಲಿ ಸಾಕಷ್ಟು ಮೆಟ್ರೋ ರೈಲುಗಳಿವೆ. ನಿತ್ಯ ಹೊರವರ್ತುಲ ರಸ್ತೆಯ ಈ ಮಾರ್ಗದಲ್ಲಿ ಸುಮಾರು 11 ರಿಂದ 12 ಲಕ್ಷ ಜನರು ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನ ಆರ್ಥಿಕ ಚಟುವಟಿಕೆ ಹಾಗೂ ರಾಜ್ಯ ಮತ್ತು ದೇಶದ ಬೆಳವಣಿಗೆಗೆ ಈ ಕಾರಿಡಾರ್ ಅತ್ಯಂತ ಮಹತ್ವದ ಸ್ಥಳವಾಗಿದೆ. ಈ ಭಾಗದಲ್ಲಿ ಪ್ರಯಾಣಿಕರು ನಿತ್ಯ ಸಂಚಾರ ದಟ್ಟಣೆ ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗಿ ನೀಲಿ ಮಾರ್ಗದ ಮೆಟ್ರೋ ರೈಲು ದೀರ್ಘಕಾಲಿಕ ಪರಿಹಾರ ನೀಡಲಿದೆ ಎಂದು ಗೌಡರು ಹೇಳಿದರು.

2016-17ರಲ್ಲಿ ಹೊರವರ್ತುಲ ರಸ್ತೆಗೆ ಮೆಟ್ರೋ ಸಂಪರ್ಕದ ಅಗತ್ಯವನ್ನು ಗುರುತಿಸಿ ಹಂತ 2A ಮತ್ತು 2B ಯೋಜನೆ ರೂಪಿಸಲಾಗಿತ್ತು. 2017ರಲ್ಲಿ ರಾಜ್ಯ ಸಚಿವ ಸಂಪುಟದ ಅನುಮೋದನೆ ಪಡೆದು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು ಹಾಗೂ 2020ರಲ್ಲಿ ನಿರ್ಮಾಣ ಕಾಮಗಾರಿ ಆರಂಭವಾಗಿತ್ತು.

ಆರ್ಥಿಕ ಸವಾಲುಗಳು

ಮೆಟ್ರೋ ವಿಸ್ತರಣೆಯ ಆರ್ಥಿಕ ಸವಾಲುಗಳ ಕುರಿತು ಮಾತನಾಡಿದ ಸಚಿವರು, ಹಣದ ಕೊರತೆಯಿಂದ ಯೋಜನೆಗಳಿಗೆ ತೊಂದರೆಯಾಗದಂತೆ ರಾಜ್ಯ ಸರ್ಕಾರ ನೋಡಿಕೊಳ್ಳುತ್ತಿದೆ. ಸಾಲ ಮರುಪಾವತಿಯ ವೆಚ್ಚವನ್ನು ರಾಜ್ಯವೇ ಭರಿಸುತ್ತಿದ್ದು, ಮೆಟ್ರೋ ನಿಗಮದ ಕಾರ್ಯಾಚರಣೆಯ ನಷ್ಟವನ್ನು ತುಂಬಲು ಆರ್ಥಿಕ ನೆರವು ನೀಡುತ್ತಿದೆ. ಸಾಲ ಪಡೆದಾಗ ಸುಮಾರು 70-80 ರೂ. ಇದ್ದ ಡಾಲರ್ ಮೌಲ್ಯ ಈಗ ಸುಮಾರು 100 ರೂ.ಗೆ ಏರಿಕೆಯಾಗಿರುವುದರಿಂದ ವಿದೇಶಿ ವಿನಿಮಯ ಏರಿಳಿತದಿಂದ ಸಾಲದ ಹೊರೆ ಸುಮಾರು ಶೇ. 30ರಷ್ಟು ಹೆಚ್ಚಾಗಿದೆ. ಯೋಜನೆಗಳ ಅನುಮೋದನೆಯಲ್ಲಿನ ವಿಳಂಬವೂ ನಿರ್ಮಾಣ ಸಾಮಗ್ರಿಗಳ ಬೆಲೆ ಮತ್ತು ಒಟ್ಟಾರೆ ಯೋಜನಾ ವೆಚ್ಚ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಅವರು ಆರೋಪಿಸಿದರು. ಆದರೂ, ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟು ಅಗತ್ಯಕ್ಕೆ ತಕ್ಕಂತೆ ಹಣ ಬಿಡುಗಡೆ ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ಟಿಕೆಟ್ ದರ ಏರಿಕೆ ಸದ್ಯಕ್ಕಿಲ್ಲ:

ಮೆಟ್ರೋ ನಿಗಮದ ಆದಾಯ ಹೆಚ್ಚಿಸಿ ಆರ್ಥಿಕ ಸ್ವಾವಲಂಬನೆ ಸಾಧಿಸುವ ಮಾರ್ಗಗಳ ಬಗ್ಗೆ ಸರ್ಕಾರ ಪರಿಶೀಲಿಸುತ್ತಿದೆ. ಸದ್ಯಕ್ಕೆ ಟಿಕೆಟ್ ಆದಾಯವು ಇಡೀ ಕಾರ್ಯಾಚರಣೆ ವೆಚ್ಚವನ್ನು ಭರಿಸಲು ಸಾಕಾಗುತ್ತಿಲ್ಲ. ಸವಕಳಿ ವೆಚ್ಚವನ್ನೂ ಸೇರಿಸಿದರೆ ನಿಗಮವು ವಾರ್ಷಿಕ ಸುಮಾರು 600-700 ಕೋಟಿ ರೂ. ನಷ್ಟ ದಾಖಲಿಸುತ್ತಿದೆ. ಸವಕಳಿ ಹೊರತುಪಡಿಸಿದರೆ 50-60 ಕೋಟಿ ರೂ. ಕಾರ್ಯಾಚರಣೆ ಹೆಚ್ಚುವರಿ ಹೊಂದಿದೆ. ಬ್ಲೂ ಲೈನ್ ಸೇವೆ ಆರಂಭವಾದ ಬಳಿಕ ಕಾರ್ಯಾಚರಣೆ ವೆಚ್ಚ ಇನ್ನಷ್ಟು ಹೆಚ್ಚಾಗಲಿದೆ. ಸರ್ಕಾರದ ಅನುದಾನವನ್ನೇ ಸಂಪೂರ್ಣವಾಗಿ ಅವಲಂಬಿಸದೆ ದೈನಂದಿನ ವೆಚ್ಚ ನಿಭಾಯಿಸುವ ಆರ್ಥಿಕವಾಗಿ ಸುಸ್ಥಿರ ಮೆಟ್ರೋ ವ್ಯವಸ್ಥೆ ನಿರ್ಮಿಸುವುದು ನಮ್ಮ ಗುರಿಯಾಗಿದೆ. ಆದಾಗ್ಯೂ, ಮೆಟ್ರೋ ಟಿಕೆಟ್ ದರ ಹೆಚ್ಚಿಸುವ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. ಅಲ್ಲದೆ, ದೆಹಲಿ ಮೆಟ್ರೋದೊಂದಿಗೆ ಹೋಲಿಕೆ ಮಾಡುವಾಗ ಕೇಂದ್ರ ಸರ್ಕಾರದ ಆರ್ಥಿಕ ನೆರವು, ಜಾಲದ ಉದ್ದ ಮತ್ತು ಪ್ರಯಾಣಿಕರ ಸಂಖ್ಯೆಯಲ್ಲಿನ ವ್ಯತ್ಯಾಸಗಳನ್ನು ಪರಿಗಣಿಸಬೇಕು ಎಂದು ಹೇಳಿದರು.

ರೆಡ್ ಲೈನ್ ಮತ್ತು ಡಬಲ್ ಡೆಕ್ಕರ್​ಗೆ ಸಿಕ್ಕಿಲ್ಲ ಅನುಮತಿ

ರೆಡ್ ಲೈನ್ ಮೆಟ್ರೋ ವಿಸ್ತರಣೆ ಪ್ರಸ್ತಾವನೆಯ ಕುರಿತು ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಲಾಗಿದೆ. ಸಿಎಂ ಡಿಕೆ ಶಿವಕುಮಾರ್ ಮತ್ತು ತಾವು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿ ಸುಮಾರು 22 ತಿಂಗಳು ಕಳೆದರೂ ಅಂತಿಮ ಅನುಮೋದನೆ ಇನ್ನೂ ಬಾಕಿ ಇದೆ. ಇತ್ತೀಚೆಗೆ ದೆಹಲಿಯಲ್ಲಿ ಕೇಂದ್ರ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಈ ಬಗ್ಗೆ ರಚನಾತ್ಮಕ ಚರ್ಚೆ ನಡೆದಿದ್ದರೂ ಅಂತಿಮ ನಿರ್ಧಾರವಾಗಿಲ್ಲ ಎಂದು ತಿಳಿಸಿದರು. ಇದರೊಂದಿಗೆ, ಸರ್ಜಾಪುರ ರಸ್ತೆಯಲ್ಲಿ ಹೆಚ್ಚುತ್ತಿರುವ ವಸತಿ, ವಾಣಿಜ್ಯ ಬೆಳವಣಿಗೆ ಮತ್ತು ಸಂಚಾರ ದಟ್ಟಣೆಯನ್ನು ನಿಭಾಯಿಸಲು ಸರ್ಜಾಪುರದಿಂದ ಇಬ್ಬಲೂರು ಜಂಕ್ಷನ್ ಮೂಲಕ ಸೇಂಟ್ ಜಾನ್ಸ್‌ವರೆಗೆ ಮೆಟ್ರೋ ಮತ್ತು ರಸ್ತೆ ಮೂಲಸೌಕರ್ಯ ಒಳಗೊಂಡ 'ಡಬಲ್ ಡೆಕ್ಕರ್' ಕಾರಿಡಾರ್ ನಿರ್ಮಿಸುವ ಪ್ರಸ್ತಾವನೆಯನ್ನೂ ಕೇಂದ್ರಕ್ಕೆ ಸಲ್ಲಿಸಲಾಗಿದೆ ಎಂದು ಹೇಳಿದರು, (ಏಜೆನ್ಸೀಸ್).