ಬೆಂಗಳೂರು

ಡಿ.5ರಿಂದ 4 ದಿನ ಬಸವನಗುಡಿ ಕಡಲೆಕಾಯಿ ಪರಿಷೆ; 500 ವರ್ಷಗಳ ಇತಿಹಾಸವಿರುವ ಈ ಜಾತ್ರೆಯ ಹಿಂದಿರೋ ಕಥೆ ಏನು?..Kadalekayi Parishe

  • ಮಲ್ಲೇಶ್ವರಂ, ಬಸವನಗುಡಿ ಕಡಲೆ ಕಾಯಿ ಪರಿಷೆಗೆ ದಿನಾಂಕ ಫಿಕ್ಸ್.

  • ಡಿ.5ರಿಂದ ಡಿ.8ರವರೆಗೂ ನಡೆಯಲಿರುವ ಕಡಲೆಕಾಯಿ ಪರಿಷೆ.

  • ನ.28 ರಿಂದ 30ರವರೆಗೆ ಮಲ್ಲೇಶ್ವರಂನಲ್ಲಿ ಕಡಲೆಕಾಯಿ ಪರಿಷೆ ಇರಲಿದೆ.

ಬೆಂಗಳೂರು: ನಗರದಲ್ಲಿ ನಡೆಯುವ ಕರಗಕ್ಕೆ ಎಷ್ಟು ಪ್ರಾಮುಖ್ಯತೆ ಇದೆಯೋ, ಅದರಷ್ಟೇ ಮಹತ್ವ ಬಸವನಗುಡಿ ಕಡಲೇಕಾಯಿ ಪರಿಷೆ ಪಡೆದುಕೊಂಡಿದೆ. 500 ವರ್ಷಗಳ ಇತಿಹಾಸ ಹೊಂದಿರುವ ಈ ಜಾತ್ರೆ ಈ ವರ್ಷ ಎಂದು ಜರುಗಲಿದೆ ಎನ್ನುವ ಮಾಹಿತಿ ಸಿಕ್ಕಿದೆ.

ಕಾರ್ತಿಕ ಮಾಸ ಶುರುವಾಗುತ್ತಲೇ ಬೆಂಗಳೂರಿಗರಿಗೆ ನೆನಪಾಗೋದು ಕಡಲೆಕಾಯಿ ಪರಿಷೆ..ಹಲವಾರು ಜಿಲ್ಲೆಗಳಿಂದ ಬರುವ ರೈತರು ಬುಲ್​​ ಟೆಂಪಲ್​ ಹಾಗೂ ಗಾಂಧಿ ಬಜಾರ್​ ರಸ್ತೆಯಲ್ಲಿ ಕಡಲೆಯನ್ನು ರಾಶಿ ಹಾಕಿ ಮಾರಾಟ ಮಾಡುತ್ತಾರೆ. ಇದರೊಂದಿಗೆ ಒಂದಷ್ಟು ಆಟಿಕೆಗಳು, ತಿನಿಸುಗಳು, ಆಂಟಿಕ್ಸ್​​ಗಳನ್ನು ಮಾರಾಟ ಮಾಡುತ್ತಾರೆ. ಒಂದು ವಾರ ಈ ರಸ್ತೆ ಹಬ್ಬದಂತೆ ಕಾಣಿಸಿಕೊಳ್ಳುತ್ತದೆ.

ಬಸವನಗುಡಿಯಲ್ಲಿ ಕಡಲೆ ಕಾಯಿ ಪರಿಷೆ ಎಂದು?

ಈ ಬಾರಿಯೂ ಇಷ್ಟೇ ಸಂಭ್ರಮದಿಂದ ಕಡಲೆ ಕಾಯಿ ಪರಿಷೆ ಆಚರಿಸಲು ದಿನಾಂಕ ಫಿಕ್ಸ್ ಆಗಿದ್ದು, ಡಿಸೆಂಬರ್ 7 ರಂದು ಬರುವ ಕಡೆಯ ಕಾರ್ತಿಕ ಸೋಮವಾರದಂದು ಮುಖ್ಯ ಜಾತ್ರೆ ಜರುಗಲಿದೆ. ಡಿಸೆಂಬರ್ 5 ರಿಂದ ಡಿಸೆಂಬರ್ 8 ರವರೆಗೆ ಒಟ್ಟು 4 ದಿನಗಳ ಕಾಲ ಈ ಜಾತ್ರೆ ನಡೆಯಲಿದೆ. ಮುಜರಾಯಿ ಇಲಾಖೆ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಒಗ್ಗೂಡಿ ಕಡಲೆ ಕಾಯಿ ಪರಿಷೆ ಜರುಗಿಸಲು ಮುಂದಾಗಿದ್ದಾರೆ.

ಮಲ್ಲೇಶ್ವರಂನಲ್ಲಿ ಎಂದು?

ಒಟ್ಟು 4 ದಿನಗಳ ಕಾಲ ಈ ಜಾತ್ರೆ ನಡೆಯಲಿದ್ದು. ಪರಿಸರ ಸ್ನೇಹಿ ಆಚರಣೆಗೆ ಒತ್ತು ನೀಡಲಾಗಿದೆ. ಜಾತ್ರಾ ಪರಿಸರವನ್ನು ಸಂಪೂರ್ಣ ಪ್ಲಾಸ್ಟಿಕ್ ಮುಕ್ತವಾಗಿರಿಸಲು ತೀರ್ಮಾನಿಸಲಾಗಿದೆ. ಇನ್ನೂ ಮಲ್ಲೇಶ್ವರದಲ್ಲಿ ನಡೆಯುವ ಕಡಲೆ ಕಾಯಿ ಪರಿಷೆ ಇದೇ ತಿಂಗಳು ನವೆಂಬರ್ 28 ರಿಂದ 30, 2026 ರವರೆಗೆ ನಡೆಯಲಿದೆ.

ದರ ಏರಿಕೆ ನಿರೀಕ್ಷೆ

ರಾಜ್ಯದಲ್ಲಿ ಬರದ ವಾತಾವರಣದಿಂದಾಗಿ, ಇಳುವರಿ ಕಡಿಮೆಯಾಗಿ ಸಾಕಷ್ಟು ತರಕಾರಿ, ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗಿದೆ. ಜೊತೆಗೆ ಕಡಲೆಕಾಯಿ ಇಳುವರಿ ಕುಸಿದಿದ್ದು, ಪರಿಷೆಯಲ್ಲಿ ಕಡಲೆಕಾಯಿ ಬೆಲೆ ತುಸು ಹೆಚ್ಚಾಗುವ ನಿರೀಕ್ಷೆಯಿದೆ.

ಪರಿಷೆ ಮಹತ್ವವೇನು?

ಕಡಲೆಕಾಯಿ ಪರಿಷೆಗೆ 500 ವರ್ಷಗಳ ಇತಿಹಾಸವಿದೆ. ಹಿಂದೆ ಗೂಳಿಗಳಿಂದ ಕಡಲೆಕಾಯಿ ಬೆಳೆ ನಾಶವಾಗುತ್ತಿತ್ತು. ಇದರಿಂದ ಕಂಗಾಲಾದ ರೈತರು ದೊಡ್ಡ ಬಸವಣ್ಣ ಬಳಿ ತೆರಳಿ ರಕ್ಷಣೆಗೆ ಕೋರಿದರು. ಅಂದಿನಿಂದ ಸಮಸ್ಯೆ ಕಡಿಮೆಯಾಗಿತ್ತು. ಇದರ ಪ್ರತಿಫಲವಾಗಿ ರೈತರು ತಾವು ಬೆಳೆದ ಮೊದಲ ಬೆಳೆಯನ್ನು ಗಣೇಶನಿಗೆ ಅರ್ಪಿಸಿ ಧನ್ಯವಾದ ಸಲ್ಲಿಸುವ ಸಂಪ್ರದಾಯ ಮುಂದುವರೆಯಿತು. ಕೋಲಾರ, ಚಿಂತಾಮಣಿ, ಮಂಡ್ಯ, ಮೈಸೂರು ಜಿಲ್ಲೆಯ ರೈತರು ಬೆಂಗಳೂರಿಗೆ ಆಗಮಿಸಿ ಗಣೇಶನಿಗೆ ಕಡಲೆಕಾಯಿ ಅರ್ಪಿಸುತ್ತಾರೆ, (ಏಜೆನ್ಸೀಸ್).