ಜಿಲ್ಲೆ

ದುಬಾರಿಯಾಯ್ತು ಬೆಂಗಳೂರು ದುನಿಯಾ! ಮನೆ ಬಾಡಿಗೆಗಿಂತಲೂ ಹೆಚ್ಚಾಯ್ತು ಉಬರ್ ಬಿಲ್, ಮಹಿಳೆಯ ಪೋಸ್ಟ್​ ವೈರಲ್​

ರಮೇಶ್​ ಕುಮಾರ್​​ ಬಿ ಎಡಮೋಳೆ

ಬೆಂಗಳೂರು: ಸಿಲಿಕಾನ್ ಸಿಟಿ ಎಂದು ಹೆಸರಾದ ಬೆಂಗಳೂರಿನಲ್ಲಿ ವಾಸಿಸುವ ಮಹಿಳೆಯೊಬ್ಬರು ತನ್ನ ಉಬರ್ ವೆಚ್ಚವು ತನ್ನ ಮಾಸಿಕ ಬಾಡಿಗೆ ದರದ ಅರ್ಧದಷ್ಟು ಮೀರಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್‌ ವೈರಲ್​ ಆಗಿದ್ದು, ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ.

ಬೆಂಗಳೂರಿನ ದುಬಾರಿ ದುನಿಯಾದ ಬಗ್ಗೆ ಬೆಳಕು ಚೆಲ್ಲಿರುವ ಮಹಿಳೆ, CREDನ ಹೊಸ ಫೀಚರ್ ಸಹಾಯದಿಂದ ಇದು ನನಗೆ ಅರ್ಥವಾಯಿತು ಎಂದು ಹೇಳಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ನಾನು ಪಾವತಿಸುವ ಬಾಡಿಗೆ ಮೊತ್ತಕ್ಕಿಂತ ನನ್ನ ಉಬರ್ ವೆಚ್ಚಗಳು ಹೆಚ್ಚಿದೆ ಎಂದು ನನಗೆ ನಂಬಲು ಸಾಧ್ಯವಿಲ್ಲ. ಇಲ್ಲಿಯವರೆಗಿನ CREDನ ಫೀಚರ್​ಗಳಲ್ಲಿ ಇದು ಅತ್ಯಂತ ಉಪಯುಕ್ತವಾಗಿದೆ ಎಂದು ತನ್ನ ವನ್ಸಿತಾ ಎಂಬುವರು ತಮ್ಮ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದು, ಉಬರ್ ವಹಿವಾಟಿನ ಸ್ಕ್ರೀನ್‌ಶಾಟ್ ಸಹ ಹಂಚಿಕೊಂಡಿದ್ದಾರೆ.

ಅಂದಹಾಗೆ ವನ್ಸಿತಾ ಅವರು ಜುಲೈ 1 ರಿಂದ 25ರ ವರೆಗೆ 74 ಉಬರ್ ಟ್ರಿಪ್‌ಗಳನ್ನು ಪೂರ್ಣಗೊಳಿಸಿದ್ದು, ಇದನ್ನು ಸ್ಕ್ರೀನ್‌ಶಾಟ್​ನಲ್ಲಿ ಬಹಿರಂಗಪಡಿಸಿದ್ದಾರೆ, ಆಶ್ಚರ್ಯಕರವೆಂದರೆ ಉಬರ್​ ಬಿಲ್​ ಒಟ್ಟು ಮೊತ್ತವು 16,600 ರೂ. ಆಗಿದೆ. ಅದು ಕೂಡ ಕೇವಲ ಒಂದು ತಿಂಗಳಿಗೆ ಎಂಬುದು ಗಮನಾರ್ಹ.

ಜುಲೈ 25 ರಂದು ಹಂಚಿಕೊಂಡ ಈ ಪೋಸ್ಟ್​ ಅನ್ನು 95,000 ಜನರು ವೀಕ್ಷಣೆ ಮಾಡಿದ್ದಾರೆ. ಅಲ್ಲದೆ, ವೀಕ್ಷಣೆ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ಪೋಸ್ಟ್‌ಗೆ ಹಲವಾರು ಜನರು ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿದ್ದಾರೆ. ನೀವೇ ಸ್ವಂತ ವಾಹನವನ್ನು ಖರೀದಿಸಿದರೆ ಉತ್ತಮ ಮತ್ತು ಮಾಸಿಕ ಇಎಂಐಗಳು ಸಹ ತುಂಬಾ ಕಡಿಮೆ ಇರುತ್ತದೆ ಎಂದು ನೆಟ್ಟಿಗರೊಬ್ಬರು ಕಾಮೆಂಟ್​ ಮಾಡಿದ್ದಾರೆ. ಇನ್ನೊಬ್ಬ ನೆಟ್ಟಿಗ, ನೀವು ಉಬರ್‌ನಿಂದ ಲಾಯಲ್ಟಿ ಕಾರ್ಡ್‌ಗೆ ಅರ್ಹರು ಎಂದು ಹಾಸ್ಯಚಟಾಕಿ ಹಾರಿಸಿದ್ದಾನೆ. ಒಬ್ಬರು ಒಂದು ಕಡೆ 700 ರೂ. ಪಾವತಿಸಿರುವುದನ್ನು ನೋಡಿದಾಗ ಈ ಫೀಚರ್ ಅನ್ನು ನೋಡಲು ಸಹ ನನಗೆ ಭಯವಾಗುತ್ತಿದೆ. ಅದೃಷ್ಟವಶಾತ್ ನಾನು ಪ್ರತಿದಿನ ಕಚೇರಿಗೆ ಪ್ರಯಾಣಿಸಬೇಕಾಗಿಲ್ಲ ಎಂದು ಇನ್ನೋರ್ವ ನೆಟ್ಟಿಗ ಅಭಿಪ್ರಾಯ ವ್ಯಕ್ತಪಡಿಸಿದ್ದಾನೆ.

ಹೀಗೆ ಅನೇಕ ನೆಟ್ಟಿಗರು ತಮನಗನಿಸಿದ್ದನ್ನು ಕಾಮೆಂಟ್​ ಮೂಲಕ ಬರೆಯುತ್ತಿದ್ದಾರೆ. ಸಾಲು ಸಾಲು ಬೆಲೆ ಏರಿಕೆಗಳ ನಡುವೆ ಉಬರ್​ ಬಿಲ್​ ಹೆಚ್ಚಳವನ್ನು ಕಂಡು ಬೆಂಗಳೂರಿನ ಮಂದಿ ಶಾಕ್​ ಆಗಿದ್ದಾರೆ. ದುಬಾರಿ ದುನಿಯಾಗೆ ಇದು ಮತ್ತೊಂದು ಸಾಕ್ಷಿಯಾಗಿದೆ. (ಏಜೆನ್ಸೀಸ್​)